ಗುಣಮಟ್ಟದ ಆಹಾರ ಮತ್ತು ಸ್ವಚ್ಛತೆಗೆ ಆದ್ಯತೆ ನೀಡೋಣ: ಅಶೋಕ್ ಗುತ್ತೇದಾರ್
ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಕಚೇರಿ ಶುಭಾರಂಭ:
ಗುಣಮಟ್ಟದ ಆಹಾರ ಮತ್ತು ಸ್ವಚ್ಛತೆಗೆ ಆದ್ಯತೆ ನೀಡೋಣ: ಅಶೋಕ್ ಗುತ್ತೇದಾರ್
ಕಲಬುರಗಿ: ಹೋಟೆಲ್ ಮತ್ತು ಬೇಕರಿ ಮಾಲಕರು ಗ್ರಾಹಕರಿಗೆ ಗುಣಮಟ್ಟದ ಆಹಾರ ಮತ್ತು ಸ್ವಚ್ಛತೆಗೆ ಆದ್ಯತೆ ನೀಡುವ ವ್ಯಾಪಾರ ಮನೋ ಧರ್ಮವನ್ನು ಬೆಳೆಸಿಕೊಳ್ಳಬೇಕು ಎಂದು ಹಿರಿಯ ಉದ್ಯಮಿಗಳಾದ ಅಶೋಕ್ ಗುತ್ತೇದಾರ್ ಬಡದಾಳ ಹೇಳಿದರು.
ಕಲಬುರಗಿಯಲ್ಲಿ ನವಂಬರ್ 20ರಂದು ಹೋಟೆಲ್ ಬೇಕರಿ ಮತ್ತು ವಸತಿ ಮಾಲಕರ ಅಸೋಸಿಯೇಷನ್ ನ ನೂತನ ಕಚೇರಿಯನ್ನು ಸಾರ್ವಜನಿಕ ಉದ್ಯಾನವನದ ಮಯೂರ ಬಹಮನಿ ಯಾತ್ರಿಕ್ ಹೋಟೆಲಿನಲ್ಲಿ ಉದ್ಘಾಟನೆ ಮಾಡಿ ಮಾತನಾಡಿ ಆರೋಗ್ಯ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿರೋದು ಪ್ರತಿಯೊಬ್ಬ ವರ್ತಕನ ಜವಾಬ್ದಾರಿಯಾಗಿದ್ದು ಗ್ರಾಹಕರು ಅದನ್ನೇ ನಿರೀಕ್ಷಿಸುತ್ತಾರೆ. ಗ್ರಾಹಕರು ಬೆಲೆಯ ಕುರಿತಾಗಿ ತಕರಾರು ಎತ್ತದೆ ಗುಣಮಟ್ಟದ ಆಹಾರ ಮತ್ತು ಸ್ವಚ್ಛತೆ ಇರುವಡೆಗೆ ಹೋಗಿ ತಿಂಡಿ ತಿನಸು ತಿನ್ನಲು ಇಚ್ಚಿಸುತ್ತಾರೆ ಆದುದರಿಂದ ವರ್ತಕರ ಮೇಲೆ ದೊಡ್ಡ ಜವಾಬ್ದಾರಿ ಇದ್ದು ಗ್ರಾಹಕ ಪ್ರೀತಿಯನ್ನು ಗಳಿಸಬೇಕಾಗಿದೆ ಎಂದು ಹೇಳಿದರು.
ಅಸೋಸಿಯೇಷನ್ ನ ರಾಜ್ಯ ಉಪಾಧ್ಯಕ್ಷರಾದ ಸತ್ಯನಾಥ ಶೆಟ್ಟಿ ಅವರು ಮಾತನಾಡಿ ಈ ಕಚೇರಿ ಪ್ರಾರಂಭವಾಗುವುದರಿಂದ ಹೋಟೆಲ್ ವಸತಿ ಮತ್ತು ಬೇಕರಿಯಎಲ್ಲ ಉದ್ಯಮಿಗಳು ಒಂದೆಡೆ ಸೇರಿ ಚರ್ಚಿಸಲು ಅನುಕೂಲಕರವಾಗಿದೆ ಎಂದು ಹೇಳಿದರು. ಅಸೋಸಿಯೇಷನ್ ನೂತನ ಅಧ್ಯಕ್ಷರಾದ ನರಸಿಂಹ ಮೆಂಡನ್ ಮಾತನಾಡಿ ಕಲಬುರಗಿಯಲ್ಲಿರುವ ಹೋಟೆಲ್ ವಸತಿ ಮತ್ತು ಮಾಲಕರು ಜಿಲ್ಲಾ ಸಮಿತಿಗೆ ಸದಸ್ಯರಾಗದೆ ಇದ್ದಲ್ಲಿ ಎಲ್ಲರೂ ಸದಸ್ಯರಾಗಿ ಸಂಘಟನೆಯನ್ನು ಬಲಪಡಿಸಬೇಕು ಮತ್ತು ನಮ್ಮ ಅನುಭವಗಳ ವಿನಿಮಯ ಮತ್ತು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ನ ಗೌರವಾಧ್ಯಕ್ಷರಾದ ರಾಜಶೇಖರ ಶೆಳ್ಳಗಿ ಸರ್ವರನ್ನು ಗೌರವಿಸಿದರು. ಕಾರ್ಯದರ್ಶಿ ಮಹಾಕೀರ್ತಿ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಸುನಿಲ್ ಶೆಟ್ಟಿ ಮತ್ತು ಸಂತೋಷ್ ಪೂಜಾರಿ ಉಪಸ್ಥಿತರಿದ್ದರು.