ವೀರ ಸೈನಿಕರು ಕುರಿತು :ಸಂಗಮೇಶ ಎನ್ ಜವಾದಿ.

ವೀರ ಸೈನಿಕರು ಕುರಿತು :ಸಂಗಮೇಶ ಎನ್ ಜವಾದಿ.
ಜಗತ್ತಿನ ಅತ್ಯಂತ ಗೌರವಾನ್ವಿತ ಕೆಲಸವೆಂದರೆ ಸೈನಿಕರದು. ಸೈನಿಕರು ನಿಜವಾದ ಹೃದಯವಂತರು. ಅವರ ಕೆಲಸವು ಎಷ್ಟು ನಿಸ್ವಾರ್ಥವಾಗಿದೆಯೆಂದರೆ ಅವರು ತಮ್ಮ ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿ ದೇಶ ಸಂರಕ್ಷಣೆ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ. ಅವರ ಜೀವನವನ್ನು ಸಂಕ್ಷಿಪ್ತಗೊಳಿಸಲು ಕೆಲವು ಪದಗಳಲ್ಲಿ ಇಲ್ಲಿ ಬರೆಯಲು ಸಾಧ್ಯವಿಲ್ಲ. ನಾವು ನಮ್ಮ ಮನೆಯಲ್ಲಿ ಆರಾಮವಾಗಿ ಇದ್ದೇವೆ ಎಂದರೆ, ಅದಕ್ಕೆ ಕಾರಣರು ನಮ್ಮ ಸೈನಿಕರೇ. ನಮಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುತ್ತಿರುವವರು ಅವರೇ.
ಅವರ ಕುಟುಂಬದಿಂದ ದೂರವಿದ್ದು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸಿ, ಹವಾಮಾನಗಳು ಬದಲಾದಂತೆ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಕೆಲಸ ನಿರ್ವಹಿಸುತ್ತಾರೆ. ಎಂತದೇ ಕಠಿಣ ಪರಿಸ್ಥಿತಿಯಲ್ಲಿಯೂ ಎದೆಗುಂದದೆ ಕಾರ್ಯಾಚರಣೆ ಮಾಡುತ್ತಾರೆ. ಸೈನಿಕರು ದೇಶದ ದೊಡ್ಡ ಆಸ್ತಿ. ಸೈನಿಕರು ಯಾವಾಗಲೂ ನಿಷ್ಠೆ, ಶಿಸ್ತು, ದೃಢತೆ, ಧೈರ್ಯ, ಪ್ರಾಮಾಣಿಕತೆ ಹೆಸರುವಾಸಿ. ಸೈನಿಕನ ಕರ್ತವ್ಯವು ಅತ್ಯಂತ ಸವಾಲಿನದು.ಅಂತೆಯೇ ದೇಶದೊಳಗೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವುದು ಸೈನಿಕರ ಪ್ರಮುಖ ಆದ್ಯ ಕರ್ತವ್ಯ. ತುರ್ತು ಸಂದರ್ಭಗಳಲ್ಲಿ ಸೈನಿಕರು ಯಾವಾಗಲೂ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಪ್ರಾಕೃತಿಕ ವಿಕೋಪಕ್ಕೊ ಸೈನಿಕರ ಸಹಾಯ ಬೇಕೇ ಬೇಕು.ದೇಶ ಸೇವೆಯೇ ಶ್ರೇಷ್ಠ ಜೀವನವೆಂದು ಅರಿತು ದೇಶಕ್ಕಾಗಿ ಎಂತಹಾ ತ್ಯಾಗಕ್ಕೂ ಸಿದ್ಧರಾಗಿ ಸದಾ ಕಾಲ ಸೇವೆಯಲ್ಲಿ ನಿರತರಾಗಿರುತ್ತಾರೆ ನಮ್ಮ ಹೆಮ್ಮೆಯ ವೀರ ಸೈನಿಕರು.
ಭಾರತೀಯ ಹೆಮ್ಮೆಯ ಸೈನಿಕರು :
ಭಾರತೀಯ ಸೇನೆಯು ವಿಶ್ವದ ಅತ್ಯಂತ ಶಕ್ತಿಶಾಲಿ ಸೈನ್ಯಗಳಲ್ಲಿ ಒಂದಾಗಿದೆ. ನಮ್ಮ ದೇಶವು ಇಂದು ಅನುಭವಿಸುತ್ತಿರುವ ಶಾಂತಿಯು ನಮ್ಮ ಭಾರತೀಯ ಸೈನಿಕರ ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ ನಮಗೆ ದಯಪಾಲಿಸಲಾಗಿದೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. ನಮ್ಮ ರಾಷ್ಟ್ರದ ಮೂರು ಸಶಸ್ತ್ರ ಪಡೆಗಳಲ್ಲಿ ಭಾರತೀಯ ಸೇನೆಯೂ ಒಂದು. ಭಾರತೀಯ ಸೇನೆಯು ಭೂ-ಆಧಾರಿತ ಬಾಹ್ಯ ಹಗೆತನಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ಇತರ ಆಂತರಿಕ ತುರ್ತು ಪರಿಸ್ಥಿತಿಗಳ ವಿರುದ್ಧ ರಾಷ್ಟ್ರೀಯ ಭದ್ರತೆಯನ್ನು ಖಾತ್ರಿಗೊಳಿಸುತ್ತದೆ. ಸುಮಾರು 1.45 ಮಿಲಿಯನ್ ಸಕ್ರಿಯ ಮಿಲಿಟರಿ ಸಿಬ್ಬಂದಿಯನ್ನು ಹೊಂದಿರುವ ಭಾರತೀಯ ಸೇನೆಯು ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಸೈನ್ಯ ಪಡೆಯಾಗಿದೆ. ಭಾರತೀಯ ಸೇನೆಯ ಧ್ಯೇಯವಾಕ್ಯ 'ಸೇವಾ ಪರಮೋ ಧರ್ಮ' ಮತ್ತು ಇದರರ್ಥ 'ಸೇವೆ ನಮ್ಮ ಪ್ರಧಾನ ಕರ್ತವ್ಯ' ಎಂಬುವುದಾಗಿದೆ. ಭಾರತೀಯ ಸೇನೆಯು ರಾಷ್ಟ್ರೀಯ ಶಕ್ತಿಯ ಪ್ರಮುಖ ಘಟಕವಾಗಿದೆ. ಇದು ವಿಶ್ವದ ಅತಿದೊಡ್ಡ ಸ್ವಯಂಸೇವಕ ಮಿಲಿಟರಿ ಪಡೆ. ಇದಲ್ಲದೆ ವಿಶ್ವಸಂಸ್ಥೆಯ ಶಾಂತಿ ಸ್ಥಾಪನೆಯ ಕಾರ್ಯಾಚರಣೆಗಳಿಗೆ ಭಾರತೀಯ ಸೇನೆಯು ದೊಡ್ಡ ಕೊಡುಗೆ ನೀಡುವವರಲ್ಲಿ ಒಂದಾಗಿದೆ. ಭಾರತವು ಪ್ರಪಂಚದಾದ್ಯಂತ ವಿವಿಧ ವಿಶ್ವಸಂಸ್ಥೆಯ ಮಿಷನ್‌ಗಳಲ್ಲಿ ಭಾಗವಹಿಸಿದೆ. ಇಲ್ಲಿಯವರೆಗೆ, ನಮ್ಮ ಸೇನೆಯು 15 ಫೋರ್ಸ್ ಕಮಾಂಡರ್‌ಗಳು, ಇಬ್ಬರು ಮಿಲಿಟರಿ ಸಲಹೆಗಾರರು, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗೆ ಒಬ್ಬ ಉಪ ಮಿಲಿಟರಿ ಸಲಹೆಗಾರ, ಎರಡು ವಿಭಾಗಗಳ ಕಮಾಂಡರ್‌ಗಳು ಮತ್ತು ಎಂಟು ಉಪ ಪಡೆ ಕಮಾಂಡರ್‌ಗಳನ್ನು ಒದಗಿಸಿದೆ. ಈ ಎಲ್ಲಾ ಸೇವೆಗಳು ನಮ್ಮ ರಾಷ್ಟ್ರದ ಹೆಮ್ಮೆಯಾಗಿವೆ.
ನಿಜವಾದ ದೇಶಭಕ್ತರು - ವೀರ ಸೈನಿಕರು:
ಭಾರತೀಯ ಸೈನಿಕರು ನಮ್ಮ ದೇಶದ ನಿಜವಾದ ವೀರರು. ಅವರು ಹಗಲು ರಾತ್ರಿ ಎನ್ನದೇ ನಮ್ಮ ರಾಷ್ಟ್ರೀಯ ಗಡಿಗಳನ್ನು ಕಾಪಾಡುತ್ತಾರೆ ಮತ್ತು ಶತ್ರುಗಳ ದಾಳಿಯಿಂದ ನಮ್ಮನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಾರೆ. ಭಾರತೀಯ ಸೈನಿಕರು ನಮ್ಮ ರಾಷ್ಟ್ರದ ಹೆಮ್ಮೆಯನ್ನು ಎತ್ತಿ ಹಿಡಿಯಲು ತಮ್ಮ ಜೀವನವನ್ನು ಮುಡಿಪಾಗಿಡುವ ನಿಜವಾದ ದೇಶಭಕ್ತಿ ರಾಗಿದ್ದಾರೆ. ಅವರ ದೇಶಭಕ್ತಿಯ ಹಿಂದಿರುವ ಶಕ್ತಿ ಅಂದರೆ, ಅವರಿಗೆ ನೀಡಿರುವ ವಿಶಿಷ್ಟವಾದ ತರಬೇತಿ.
ಈ ತರಬೇತಿಯಲ್ಲಿ ಅವರಿಗೆ ನಿಷ್ಠೆ, ಗೌರವ, ಕರ್ತವ್ಯ, ನಿಸ್ವಾರ್ಥ ಸೇವೆ, ಧೈರ್ಯ ಮತ್ತು ಸಮಗ್ರತೆಯಂತಹ ಸೇನಾ ಮೌಲ್ಯಗಳನ್ನು ಕಲಿಯುತ್ತಾರೆ. ಸೇನಾ ಶಿಬಿರಗಳಲ್ಲಿ ಸೈನಿಕರು ಅತ್ಯಂತ ಶಿಸ್ತುಬದ್ಧ ಮತ್ತು ಕಠಿಣ ಜೀವನ ನಡೆಸುತ್ತಾರೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಅವರನ್ನು ಬಲಶಾಲಿಗಳನ್ನಾಗಿ ಮಾಡಲಾಗುತ್ತದೆ.
ಬಾಹ್ಯ ಆಕ್ರಮಣವನ್ನು, ಯುದ್ಧಗಳನ್ನು ಎದುರಿಸುವುದು, ಆಂತರಿಕ ಭದ್ರತೆಯನ್ನು ನಿರ್ವಹಿಸುವುದು ಮತ್ತು ಆಂತರಿಕ ಬೆದರಿಕೆಗಳನ್ನು ಪರಿಹರಿಸುವುದು, ಫೋರ್ಸ್ ಪ್ರೊಜೆಕ್ಷನ್, ಶಾಂತಿಪಾಲನಾ ಕಾರ್ಯಾಚರಣೆಗಳನ್ನು ನಡೆಸುವುದು ಅಥವಾ ಸ್ನೇಹಪರ ವಿದೇಶಿ ದೇಶಗಳಿಗೆ ಮಿಲಿಟರಿ ನೆರವು ನೀಡುವುದು ಮತ್ತು ಮಾನವೀಯ ನೆರವು, ವಿಪತ್ತು ಪರಿಹಾರ ಮತ್ತು ನಾಗರಿಕ ಅಧಿಕಾರಿಗಳಿಗೆ ನೆರವು ನೀಡುವುದು ಸೇರಿದಂತೆ
ಕೆಲವು ಪ್ರಮುಖ ಕರ್ತವ್ಯಗಳು ಭಾರತೀಯ ಸೈನಿಕರು ನಿರ್ವಹಣೆ ಮಾಡುತ್ತಾರೆ.
ಇನ್ನು ಯುದ್ಧ ಮತ್ತು ಭಯೋತ್ಪಾದನೆಯ ವಿರುದ್ಧದ ಯುದ್ಧವನ್ನು ಹೊರತುಪಡಿಸಿ, ಇದು ಆಪರೇಷನ್ ಸೂರ್ಯ ಹೋಪ್‌ನಂತಹ ನೈಸರ್ಗಿಕ ವಿಪತ್ತುಗಳು ಮತ್ತು ಇತರ ಅಡಚಣೆಗಳ ಸಮಯದಲ್ಲಿ ಮಾನವೀಯ ರಕ್ಷಣಾ ಕಾರ್ಯಾಚರಣೆಗಳನ್ನು ಸಹ ನಡೆಸುತ್ತಾರೆ. ಇದು ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಯ ಜೊತೆಗೆ ರಾಷ್ಟ್ರೀಯ ಶಕ್ತಿಯ ಪ್ರಮುಖ ಭಾಗವಾಗಿದೆ. ಭಾರತೀಯ ಸೇನೆಯು ನೆರೆಯ ಪಾಕಿಸ್ತಾನದೊಂದಿಗೆ ನಾಲ್ಕು ದೊಡ್ಡ ಯುದ್ಧಗಳನ್ನು ಮತ್ತು ಚೀನಾದೊಂದಿಗೆ ಒಂದು ಯುದ್ಧವನ್ನು ಮಾಡಿದೆ. ಸೇನೆಯು ಕೈಗೊಂಡ ಇತರ ಪ್ರಮುಖ ಕಾರ್ಯಾಚರಣೆಗಳಲ್ಲಿ ಆಪರೇಷನ್ ವಿಜಯ್, ಆಪರೇಷನ್ ಮೇಘದೂತ್ ಮತ್ತು ಆಪರೇಷನ್ ಕ್ಯಾಕ್ಟಸ್ ಸೇರಿವೆ.
ಇದಲ್ಲದೆ ವಿಶ್ವ ಶಾಂತಿಯ ಹಿತಾಸಕ್ತಿಯಿಂದ, ಭಾರತೀಯ ಸೈನಿಕರು ಪ್ರಪಂಚದಾದ್ಯಂತ ಹಲವಾರು ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದಾರೆ. ಶಾಂತಿ ಸ್ಥಾಪನೆಗಾಗಿ ವಿಶ್ವಾದ್ಯಂತ ಹದಿನಾಲ್ಕು ವಿಶ್ವಸಂಸ್ಥೆಯ ಮಿಷನ್‌ಗಳಲ್ಲಿ ಎಂಟರಲ್ಲಿ ತಮ್ಮ ಉಪಸ್ಥಿತಿಯನ್ನು ಗುರುತಿಸಿದ್ದಾರೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಲೆಬನಾನ್, ಸೌತ್ ಸುಡಾನ್, ಗೋಲನ್ ಹೈಟ್ಸ್, ಸಿರಿಯಾ, ವೆಸ್ಟರ್ನ್ ಸಹಾರಾ, ಅಬೈ ಮತ್ತು ಸೈಪ್ರಸ್‌ನಲ್ಲಿ ಪ್ರಸ್ತುತ 5,400 ಕ್ಕೂ ಹೆಚ್ಚು ಮಿಲಿಟರಿ ಸಿಬ್ಬಂದಿಯನ್ನು ವಿವಿಧ ಕಾರ್ಯಾಚರಣೆಗಳಲ್ಲಿ ನಿಯೋಜನೆಗೊಂಡು ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ. ಹಾಗಾಗಿಯೇ
ಭಾರತೀಯ ಸೈನಿಕರ ಧೀರ ಕಾರ್ಯಗಳು ವಿಶ್ವಸಂಸ್ಥೆ, ಅಂತರಾಷ್ಟ್ರೀಯ ಸಮುದಾಯ ಮತ್ತು ಭಾರತೀಯರು ಮೆಚ್ಚಿ ನಮ್ಮ ವೀರ ಸೈನಿಕರಿಗೆ ಯಾವಾಗಲೂ ಕೃತಜ್ಞತೆಗಳು ಸಲ್ಲಿಸುತ್ತಾರೆ.ಅದಕ್ಕಾಗಿಯೇ ಇವರನ್ನು ನಿಜವಾದ ದೇಶಭಕ್ತರೆಂದು ಕರೆಯಲಾಗುತ್ತದೆ.
ಸೈನಿಕರು ಎದುರಿಸುತ್ತಿರುವ ಸಮಸ್ಯೆಗಳು:
ಸೈನಿಕರ ಜೀವನವು ಬಹಳಷ್ಟು ಸವಾಲುಗಳು ಮತ್ತು ತ್ಯಾಗದಿಂದ ಕೂಡಿದೆ. ಅವರು ತಮ್ಮ ಕುಟುಂಬದಿಂದ ದೂರವಿರುತ್ತಾರೆ ಮತ್ತು ಅವರೊಂದಿಗೆ ಹಬ್ಬಗಳನ್ನು ಆಚರಿಸಲು ಅಥವಾ ಕುಟುಂಬದ ಕಾರ್ಯಕ್ರಮಗಳನ್ನು ಆಚರಿಸಲು ಸಾಧ್ಯವಾಗುವುದಿಲ್ಲ. ಇದು ಸೈನಿಕರಿಗೆ ಬೇಸರದ ಸಂಗತಿಯೆಂದರೆ ತಪ್ಪಾಗಲಾರದು. ಸೈನಿಕರು ಕೆಲ ಸಂದರ್ಭಗಳಲ್ಲಿ ಆಹಾರ ಮತ್ತು ನೀರಿನ ಪೂರೈಕೆಯ ಕೊರತೆಯನ್ನು ಎದುರಿಸಬೇಕಾಗುತ್ತದೆ. ತಾಪಮಾನವು ಶೂನ್ಯ ಡಿಗ್ರಿಗಿಂತ ಕಡಿಮೆ ಬೀಳುವ ಪ್ರದೇಶಗಳು, ಭಾರೀ ಮಳೆ, ಇತ್ಯಾದಿಗಳಂತಹ ಕೆಲವು ವಿಪರೀತ ಹವಾಮಾನ ಪರಿಸ್ಥಿತಿಗಳಲ್ಲಿಯೂ ಸೈನಿಕರು ನಿರಂತರವಾಗಿ ಕೆಲಸ ಮಾಡಬೇಕಾಗುತ್ತದೆ. ಇದು ಸೈನಿಕರಿಗೆ ಸವಾಲಿನ ಕೆಲಸವಾಗಿದೆ. ಇನ್ನು ಯುದ್ಧಭೂಮಿಯಲ್ಲಿ, ಯುದ್ಧದ ಸಮಯದಲ್ಲಿ, ಸೈನಿಕರು ನಿರಂತರವಾಗಿ ವೀರಾವೇಶದಿಂದ ಹೋರಾಟ ಮಾಡಬೇಕಾಗುತ್ತದೆ. ಹೀಗೆ ನೂರಾರು ಸಮಸ್ಯೆಗಳಿಂದ ಸೈನಿಕರ ಜೀವನ ಕೂಡಿದೆ. ಹೀಗಾಗಿ ಯೋಧನ ಜೀವನ ತ್ಯಾಗ ಬಲಿದಾನಗಳಿಂದ ಕೂಡಿದ್ದು, ಅವರ ಕರ್ತವ್ಯಕ್ಕೆ ನಾವೆಲ್ಲರೂ ತಲೆಬಾಗಲೇಬೇಕು.
ಬಿಕ್ಕಟ್ಟಿನ ಸಂದರ್ಭದಲ್ಲಿ ಸೇನೆ: ಭಾರತೀಯ ಸೇನೆಯು ದಶಕಗಳಿಂದ ಪಾಕಿಸ್ಥಾನ ಹಾಗೂ ಚೀನದೊಂದಿಗೆ ಗಡಿ ಭಾಗದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿರುವುದರಿಂದ, ವಿವಿಧ ಪರಿಸ್ಥಿತಿಗಳಲ್ಲಿ, ವಾತಾವರಣಗಳಲ್ಲಿ ಹೋರಾಡುವ ಶಕ್ತಿ ಸೇನೆಗೆ ವೃದ್ಧಿಸಿದೆ. ಆರಂಭಿಕ ಹಂತದಲ್ಲಿ ಸೇನೆಯು ಮುಖ್ಯ ಗುರಿ ಗಡಿ ಭಾಗದ ರಕ್ಷಣೆಯಾಗಿತ್ತು. ಆದರೆ ಅನಂತರದ ವರ್ಷಗಳಲ್ಲಿ ಸೇನೆಯು ಆಂತರಿಕ ಭದ್ರತೆ ನೀಡುವಲ್ಲಿ(ಮುಖ್ಯವಾಗಿ ಪ್ರತ್ಯೇಕತಾವಾದ ಹೆಚ್ಚಿದ್ದ ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ) ತನ್ನ ಗಮನ ಹರಿಸಿತು. ಭಾರತೀಯ ಸೇನೆಯು ಇದುವರೆಗೂ 1947-48ರ ಭಾರತ ಪಾಕ್ ಯುದ್ಧ, 1948ರಲ್ಲಿ ಹೈದರಾಬಾದ್ ನಿಜಾಮನ ವಿರುದ್ಧ ಆಪರೇಷನ್ ಪೋಲೋ, 1962ರಲ್ಲಿ ಚೀನ ವಿರುದ್ಧದ ಯುದ್ಧ, 1965ರಲ್ಲಿ ಪಾಕ್ ವಿರುದ್ಧ, 1971ರಲ್ಲಿ ಬಾಂಗ್ಲಾದೇಶ ವಿಮೋಚನಾ ಯುದ್ಧ(ಈ ವಿಜಯಕ್ಕೀಗ 50 ವರ್ಷ), 1998ರಲ್ಲಿ ಕಾರ್ಗಿಲ್ ಯುದ್ಧವನ್ನು ಎದುರಿಸಿದೆ. ಇನ್ನು 2016ರ ಸೆಪ್ಟಂಬರ್ ತಿಂಗಳಲ್ಲಿ ಪಾಕಿಸ್ಥಾನದ ನೆಲಕ್ಕೇ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು, 2017ರಲ್ಲಿ ಸುಮಾರು ಎರಡು ತಿಂಗಳುಗಳ ಕಾಲ ಡೋಕ್ಲಾಂ ಪ್ರದೇಶದಲ್ಲಿ ಚೀನಿ ಸೈನಿಕರಿಗೆ ಎದುರು ನಿಂತು ಅವರನ್ನು ಹಿಮ್ಮೆಟ್ಟಿಸಿದ್ದು, 2019ರಲ್ಲಿ ಪಠಾಣ್‌ಕೋಟ್ ದಾಳಿಗೆ ಪ್ರತ್ಯುತ್ತರವಾಗಿ ಪಾಕಿಸ್ಥಾನದ ಬಾಲಾಕೋಟ್ ಮೇಲೆ ವಾಯುದಾಳಿ ನಡೆಸಿದ್ದು, 2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನದ ಸೈನಿಕರ ಹೆಡೆಮುರಿಕಟ್ಟಿರುವುದು, ಈಗಲೂ ಲಕ್ಷಾಂತರ ಸಂಖ್ಯೆಯಲ್ಲಿ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ, ಶೀತಗಾಳಿಯ ನಡುವೆ ಭಾರತೀಯ ಸೇನೆಯು ತನ್ನ ಸೈನಿಕರನ್ನು ನಿಯೋಜಿಸಿರುವುದೆಲ್ಲ, ಬದಲಾದ ಭಾರತೀಯ ಸೇನೆಯ ಬಲಕ್ಕೆ ಪ್ರತೀಕ. ಇನ್ನು ಭಾರತೀಯ ಸೇನಾಪಡೆಯ ಯೋಧರು ಸಿಯಾಚಿನ್‌ನ ಭೀಕರ ಚಳಿಯಲ್ಲೂ ಗಡಿಗಳನ್ನು ಕಾಯುತ್ತಾರೆ. ಇಲ್ಲಿನ ಸರಾಸರಿ ತಾಪಮಾನವು -50 ಡಿಗ್ರಿಗಳಷ್ಟಾಗಿರುತ್ತದೆ. ಹಿಮ ಮತ್ತು ತಂಪಾದ ಗಾಳಿ ಕೂಡ ದೊಡ್ಡ ಅಪಾಯವನ್ನುಂಟುಮಾಡುತ್ತದೆ. ಸಿಯಾಚಿನ್ ಭೂಮಿಯ ಮೇಲಿನ ಅತೀ ಎತ್ತರದ ಯುದ್ಧ ಭೂಮಿಗಳಲ್ಲಿ ಒಂದು. ಈ ಪ್ರದೇಶದ ಎತ್ತರ ಸಮುದ್ರ ಮಟ್ಟದಿಂದ 6,000 ಮೀಟರ್ (20,000 ಅಡಿ). ತಾಯಿನಾಡಿಗಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಹೀಗೆ ದೇಶದ ಸಂರಕ್ಷಣೆಗಾಗಿ ತಮ್ಮ ಪ್ರಾಣದ ಹಂಗನ್ನು ತೊರೆದು, ಎಂತಹದೇ ಬಿಕ್ಕಟ್ಟಿನ ಸಮಯದಲ್ಲಿಯೂ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಹೋರಾಡುತ್ತಾರೆ ನಮ್ಮ ವೀರ ಸೈನಿಕರು.
ಸಶಸ್ತ್ರಪಡೆಗೆ ಬಲ:
2014ರಿಂದ ಭಾರತೀಯ ಸಶಸ್ತ್ರಪಡೆಯ ಬಲ ಗಣನೀಯವಾಗಿ ವೃದ್ಧಿಸುತ್ತಿದೆ ರಫೇಲ್‌ನಂಥ ಅತ್ಯಾಧುನಿಕ ಯುದ್ಧ ವಿಮಾನಗಳ ಖರೀದಿ, ದೇಶೀಯ ತೇಜಸ್ ಯುದ್ಧ ವಿಮಾನಗಳ ಉನ್ನತೀಕರಣ, ಕ್ಷಿಪಣಿಗಳು, ಜಲಾಂತರ್ಗಾಮಿ ವಿರೋಧಿ ವಿಮಾನಗಳ ಮೂಲಕ ಸಶಸ್ತ್ರಪಡೆಗಳು ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿ ಕಾಣುತ್ತಿವೆ.
ಸೇನಾ ದಿನ:
ಭಾರತೀಯ ಸೇನಾ ದಿನವನ್ನು ವಾರ್ಷಿಕವಾಗಿ ಜನವರಿ 15 ರಂದು ಆಚರಿಸಲಾಗುತ್ತದೆ. 1949 ರಲ್ಲಿ ಭಾರತೀಯ ಸೇನೆಯ ಮೊದಲ ಭಾರತೀಯ ಕಮಾಂಡರ್ ಇನ್ ಚೀಫ್ ಫೀಲ್ಡ್ ಮಾರ್ಷಲ್ ಕೋದಂಡೇರ ಎಂ. ಕಾರಿಯಪ್ಪ ಅವರು ಕೊನೆಯ ಬ್ರಿಟಿಷ್ ಕಮಾಂಡರ್ ಇನ್ ಚೀಫ್ ಆಗಿದ್ದ ಜನರಲ್ ಸರ್ ಫ್ರಾನ್ಸಿಸ್ ಬುಟ್ಚರ್ ಅವರನ್ನು ಬದಲಿಸಿದ ನೆನಪಿಗಾಗಿ ಇದನ್ನು ಆಚರಿಸಲಾಗುತ್ತದೆ. ಭಾರತದಾದ್ಯಂತ ಸೇನಾ ದಿನಾಚರಣೆಗಳನ್ನು ನಡೆಸಲಾಗುತ್ತದೆ. ಈ ದಿನದಂದು ಪ್ರಧಾನ ಕಛೇರಿಯಲ್ಲಿ ಮಿಲಿಟರಿ ಪ್ರದರ್ಶನಗಳು ಮತ್ತು ಮೆರವಣಿಗೆಗಳನ್ನು ನಡೆಸಲಾಗುತ್ತದೆ. ದೆಹಲಿಯ ಕಂಟೋನ್ಮೆಂಟ್‌ನಲ್ಲಿರುವ ಕರಿಯಪ್ಪ ಕವಾಯತು ಮೈದಾನದಲ್ಲಿ ಪ್ರಧಾನ ಸೇನಾ ದಿನದ ಪರೇಡ್ ಅನ್ನು ನಡೆಸಲಾಗುತ್ತದೆ. ರಾಷ್ಟ್ರದ ಕೆಲವು ಪ್ರತಿಷ್ಠಿತ ಪ್ರಶಸ್ತಿಗಳಾದ 'ಶೌರ್ಯ ಪ್ರಶಸ್ತಿಗಳು' ಮತ್ತು 'ಸೇನಾ ಪದಕಗಳು' ಈ ದಿನದಂದು ದೇಶಭಕ್ತರಿಗೆ ನೀಡಲಾಗುತ್ತದೆ. ದೇಶದಾದ್ಯಂತ ಜನರು ಸೇನಾ ದಿನವನ್ನು ನಮ್ಮ ದೇಶದ ವೀರ ಸೈನಿಕರನ್ನು ಗೌರವಿಸುವ ದಿನವೆಂದು ಗುರುತಿಸುತ್ತಾರೆ.
ವೀರ ಸೈನಿಕರಿಗೆ ನೀಡುವ ಪ್ರಶಸ್ತಿಗಳು:
ಭಾರತದ ರಾಷ್ಟ್ರಪತಿಗಳು ಯುದ್ಧಭೂಮಿಯಲ್ಲಿ ಪ್ರದರ್ಶಿಸಿದ ಶೌರ್ಯಕ್ಕಾಗಿ ನೀಡುವ ಪದಕಗಳು ಹೀಗಿವೆ - ಪರಮವೀರ ಚಕ್ರ , ಮಹಾವೀರ ಚಕ್ರ ಮತ್ತು ವೀರ ಚಕ್ರ. ಇನ್ನು ಶೌರ್ಯಕ್ಕಾಗಿ ರಾಷ್ಟ್ರಪತಿಗಳು ನೀಡುವ ಪದಕಗಳೆಂದರೆ, ಅಶೋಕ ಚಕ್ರ , ಕೀರ್ತಿ ಚಕ್ರ ಮತ್ತು ಶೌರ್ಯ ಚಕ್ರ ನೀಡಿ ಗೌರವಿಸಲಾಗುತ್ತದೆ.
ಗೌರವ ನುಡಿ: ನಾವು ನಮ್ಮ ಮನೆಯಲ್ಲಿ ಆರಾಮವಾಗಿ ಮಲಗುತ್ತೇವೆ ಅಂದರೆ ಅದಕ್ಕೆ ಕಾರಣ ನಮ್ಮ ಹೆಮ್ಮೆಯ ವೀರ ಸೈನಿಕರು. ನಾವು ಸುರಕ್ಷಿತವಾಗಿರಲು ಸಹ ಅವರೇ ಕಾರಣರು.ಅಂತೆಯೇ
ನಮ್ಮ ಸೈನಿಕರು ತಮ್ಮ ಕರ್ತವ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ಅಷ್ಟೇ ನಿಸ್ವಾರ್ಥ ಮನೋಭಾವದಿಂದ ನಿರ್ವಹಿಸುತ್ತಾರೆ. ಶಿಸ್ತು, ನಿಷ್ಠೆ, ಶೌರ್ಯಕ್ಕೆ ಹೆಸರುವಾಸಿಯಾದವರು. ಎಂತಹದೇ ಹೋರಾಟಕ್ಕೂ
(ಪ್ರಾಣ ತ್ಯಾಗಕ್ಕೂ ಲೆಕ್ಕಿಸದೇ)ಸಿದ್ಧರಾಗಿರುತ್ತಾರೆ. ಇಂತಹ ತ್ಯಾಗ ವೀರ ಯೋಧರನ್ನು ನಾವೆಲ್ಲರೂ ಸದಾ ಕಾಲ ನೆನಪಿಸಿಕೊಳ್ಳಲೇಬೇಕು.ಅಂತಹ ಮಹಾನ್ ಚೇತನಗಳಿಗೆ ನಾವೆಲ್ಲರೂ ನಮನ ಸಲ್ಲಿಸಬೇಕು.
-ಸಂಗಮೇಶ ಎನ್ ಜವಾದಿ.
ಬರಹಗಾರರು, ಚಿಂತಕರು, ಹೋರಾಟಗಾರರು.
9663809340.