ಹಡಪದ ಅಪ್ಪಣ್ಣ

ಹಡಪದ ಅಪ್ಪಣ್ಣ

*ನಿಜಸುಖಿ ಹಡಪದ ಅಪ್ಪಣ್ಣ ಶರಣರ ಜಯಂತಿಯ ಶುಭಾಶಯಗಳು. *#ದಿನಕ್ಕೊಂದು #ವಚನ #ಅನುಸಂಧಾನ*

ಆಟದಲಿ ಕೆಲಹೊತ್ತುಗಳೆದು, 

ಕೂಟದಲಿ ಕೆಲಹೊತ್ತುಗಳೆದು,

ನೋಟದಲಿ ಕೆಲಹೊತ್ತುಗಳೆದು, ಊಟದ ಹೊತ್ತಿಗೆ ಲಿಂಗವ ಕೂಡಿಹೆನೆಂಬವನೊಬ್ಬ, 

ಊಟ ಮಾಟ ಕೂಟದಲ್ಲಿ ಕೋಟಲ ಗೊಳುತ್ತಿದೆನೆಂಬುವನೊಬ್ಬ ಪೋಟ.

ಇವರಿಬ್ಬರ ನೋಟ ಬೇಟಕ್ಕೆ ಸಿಕ್ಕದೆ ದಾಂಟಿಹೋದನು, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.

    *ಹಡಪದ ಅಪ್ಪಣ್ಣ*

                **   *ವಚನ ಅನುಸಂಧಾನ*

ಕಾಯ ಅಂದ್ರೆ; ಶರೀರ/ಅಂಗ/ತನು ಇದು ಮತ್ತು ಇದರಿಂದ ನಿರ್ವಹಿಸುವ ಕಾಯಕ ಕೇಂದ್ರಿತವಾದ ಲಿಂಗಾಯತ/ಶರಣ/ಬಸವ ಎಂದೆಲ್ಲಾ ಗುರುತಿಸಿ ಹೇಳುವ ಈ ಧರ್ಮದಲ್ಲಿ; ಮುಖ್ಯವಾಗಿರುವಂಥ ಭಕ್ತನಾದವನು ಈ ಕಾಯಕ ತತ್ವದ ಮಹತ್ವವನ್ನು ಅರಿವಿನ ಗುರು ಮುಖೇನ ತಿಳಿದುಕೊಂಡು ತಮ್ಮ ಬದುಕಿನಲ್ಲಿ ಅದನ್ನು ಚಾಚೂ ತಪ್ಪದೆ ಆಚರಣೆ ಮಾಡುವುದು ಮತ್ತು ತನುತ್ರಯಗಳಾದ ಶರೀರ/ಕಾಯ/ಅಂಗ/ತನು ಮನ ಭಾವದ ಸಂರಚನಾ ವ್ಯವಸ್ಥೆ ಒಳಗೊಂಡಿರುವ ಬಹಿರಂಗದಲ್ಲಿ ತೋರಿ ಬರುವ ಭೌತಿಕವಾದ ಜ್ಞಾನೇಂದ್ರಿಯ ಕರ್ಮೇಂದ್ರಿ ಯಗಳು ಮತ್ತು ಅಂತರಂಗದಲ್ಲಿರುವ ಕರಣಂಗ ಳು ಮಾಡುವ ಕಾರ್ಯ ಚಟುವಟಿಕೆಗಳು ಮತ್ತು ಅವು ಹೊಂದಿರುವ ಗುಣಾವಗುಣ ಧರ್ಮಗಳ ಜೊತೆಗೆ ಅವುಗಳಲ್ಲಿ ತುಂಬಿದ ಅರಿಷಡ್ವರ್ಗಗಳು ಚತುಷ್ಟಯಗಳು ಮತ್ತು ಸಪ್ತವ್ಯಸನಗಳಂಥಾ ಈ ಮಾಯಾ ಮಲಗಳು ಮಾಡುವ ಕೇಡುಗಳ ಬಗ್ಗೆ ಹಾಗೂ ದುಷ್ಪರಿಣಾಮದ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಂಡು, ಹೀಗೆ ಅರಿವುಗೊಂಡ ಮನದ ಮೂಲಕ ಶಿವಾನುಭವ ಹೊಂದುವುದರ ಜೊತೆಗೆ ಲೋಕಹಿತಾಕಾಂಕ್ಷೆ ಬಯಸುವ ಶರಣ ಧರ್ಮದ ಜೀವನ ಮೌಲ್ಯದ ಘನತೆಯನ್ನು ಹಾಗೂ ಅದರ ಮಹತ್ವಪೂರ್ಣ ತತ್ವ ಸಿದ್ಧಾಂತಗಳನ್ನಿಲ್ಲಿ ಅತ್ಯಂತ ಸರಳವಾದ ಎರಡು ಉದಾಹರಣೆ ಮೂಲಕ ಈ ಮೇಲಿನ ವಚನದಲ್ಲಿ ವಚನಕಾರ ಶರಣರಾದಂಥ ಹಡಪದ ಅಪ್ಪಣ್ಣವರು ತಿಳಿಸಿದ್ದಾರೆ. ಅದರಲ್ಲಿನ ಒಳನೋಟದ ತಿರುಳನ್ನಿಲ್ಲಿ ಈಗ ಅನುಸಂಧಾನ ಮಾಡಿ ತಿಳಿಯುವ ಒಂದು ಪ್ರಯತ್ನ ಮಾಡೋಣ

*#ಆಟದಲಿ ಕೆಲಹೊತ್ತುಗಳೆದು,*

*ಕೂಟದಲಿ ಕೆಲಹೊತ್ತುಗಳೆದು,*

*ನೋಟದಲಿ ಕೆಲಹೊತ್ತುಗಳೆದು,* *ಊಟದ ಹೊತ್ತಿಗೆ ಲಿಂಗವ ಕೂಡಿಹೆನೆಂಬವನೊಬ್ಬ,*

*ಊಟ ಮಾಟ ಕೂಟದಲ್ಲಿ ಕೋಟಲ* *ಗೊಳುತ್ತಿದೆನೆಂಬುವನೊಬ್ಬ #ಪೋಟ.*

ಸಾಮಾನ್ಯ ಜನಜೀವನದಲ್ಲಿ ಕಾಣಬರುವ ವ್ಯಕ್ತಿ ಬದುಕಿನ ಒಂದು ನೋಟವನ್ನ ಅಪ್ಪಣ್ಣ ಶರಣರು ಇಲ್ಲಿ ಉಲ್ಲೇಖ ಮಾಡಿ ಹೇಳಿದ್ದಾರೆಂದೆನಿಸುವ ಈ ವಚನದ ಸಾಲುಗಳಿಲ್ಲಿ ಲಿಂಗಾಯತ ಭಕ್ತರನ್ನು ಕುರಿತು ಹೇಳಿದ್ದಾಗಿವೆ. ದಿನದ ಬಹುಭಾಗದಲ್ಲಿನ ಸಮಯವನ್ನು ಆಟ ನೋಟ ಕೂಟದಲ್ಲಿ ಕಳೆದು, ಉಳಿದ ಅಲ್ಪಾವಧಿಯಲ್ಲಿ ಊಟ ಹೊತ್ತಿಗೆ ಲಿಂಗ ಪೂಜೆಯ ಮಾಡಿಕೊಂಡೆಂಬ ಭಕ್ತನೋರ್ವನ ಆ ಆತುರದ ಲಿಂಗ ಅನುಸಂಧಾನದ ಬಗ್ಗೆ ಹಾಗೂ ಊಟಕೂಟ ಮಾಟದಲ್ಲಿ ಬಿದ್ದು ತೊಳಲಾಟವನ್ನ ಅನುಭವಿಸುವ ಭಕ್ತನೋರ್ವನ ಬದುಕಿನ ದುಸ್ಥಿ ತಿಯನ್ನು ಇಲ್ಲಿ ಅಪ್ಪಣ್ಣ ಶರಣರು ತೌಲನಿಕವಾಗಿ

ಬಿಡಿಸಿ ಇಟ್ಟಿದ್ದಾರೆ. ತನ್ಮೂಲಕ ಇವೆರಡೂ ಕ್ರಮಗ ಳನ್ನು ಅವರು ಒಪ್ಪುವುದಿಲ್ಲ.

*#ಇವರಿಬ್ಬರ ನೋಟ ಬೇಟಕ್ಕೆ ಸಿಕ್ಕದೆ ದಾಂಟಿಹೋದನು,* *ನಮ್ಮ ಬಸವಪ್ರಿಯ #ಕೂಡಲಚೆನ್ನಬಸವಣ್ಣ.*

ಮೇಲಿನ ಈರ್ವರೂ ಭಕ್ತರ ಕಾರ್ಯ ಚಟುವಟಿಕೆ

ನೈಜತೆ ಹೊಂದಿಲ್ಲದಿರುವ ಕಾರಣದಿಂದ ಇವರಿಗೆ ಇಷ್ಟಲಿಂಗದ ಅನುಸಂಧಾನದ ನಿಜ ಸುಖವನ್ನು ದಕ್ಕಿಸಿಕೊಳ್ಳಲು ಸಾಧ್ಯವಾಗಿಲ್ಲದ ಈ ಫಜೀತಿಯ ಕಂಡು ಬಸವಪ್ರಿಯ ಕೂಡಲಚೆನ್ನಬಸವಣ್ಣನು ಅಂದ್ರೆ ಸಾಕ್ಷಾತ್ ಶಿವ ಸುಮ್ಮನೆ ದಾಟಿಹೋದನು ಎನ್ನುವ ಮೂಲಕ ಶರಣ ತತ್ವ ಸಿದ್ಧಾಂತಗಳನ್ನು ಸರಿಯಾಗಿ ಅರಿಯುವುದು ಎಷ್ಟು ಮುಖ್ಯವೋ

ಅಷ್ಟೇ ಪರಿಪೂರ್ಣವಾಗಿರುವ ನಿರ್ಮಲ ನಿಷ್ಠೆಯ ಮನಸ್ಥಿತಿಯಲ್ಲಿನ ಇಷ್ಟಲಿಂಗ ಪೂಜೆ/ಲಿಂಗ ನಿರೀಕ್ಷೆಯ ಆಚರಣೆಯ ಅವಶ್ಯಕತೆಯನ್ನೂ ಇಲ್ಲಿ ಹಡಪದ ಅಪ್ಪಣ್ಣ ಶರಣರು ಈ ಮೇಲಿನ ತಮ್ಮ ವಚನದಲ್ಲಿ ಸಹಜ ಸರಳ ನೋಟಕ್ಕೆ ಸಿಕ್ಕ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ ಎನ್ನಬಹುದಾಗಿದೆ.

                  *ಅಳಗುಂಡಿ ಅಂದಾನಯ್ಯ*