ಮಕ್ಕಳಿಗೆ ಮೊಬೈಲ್ ಬದಲು ಸಂಗೀತ ಕಲಿಸಿ :ಗಿರಿಮಲ್ಲಪ್ಪ ವಳಸಂಗ

ಮಕ್ಕಳಿಗೆ ಮೊಬೈಲ್ ಬದಲು ಸಂಗೀತ ಕಲಿಸಿ :ಗಿರಿಮಲ್ಲಪ್ಪ ವಳಸಂಗ

ಶಹಾಬಾದ್: ಸಂಗೀತವು ಮನಸ್ಸಿನ ಏಕಾಗ್ರತೆಯನ್ನು ಮೂಡಿಸುತ್ತದೆ, ಮತ್ತು ಜೀವನದ ಸಂಕಷ್ಟವನ್ನು ದೂರಗೊಳಿಸುತ್ತದೆ, ಹಾಗೂ ಮೆದುಳು ಚುರುಕುಗೊಳಿಸಿ ಶಾಂತತೆಯಿಂದ ಇರಲು ಕಲಿಸುತ್ತದೆ, ಪ್ರತಿಯೊಬ್ಬರು ತಲೆ ತೂಗುವ ಹಾಗೆ ಮಾಡುವ ಶಕ್ತಿ ಸಂಗೀತಕ್ಕೆ ಇದೆ ಎಂದು ಕೂಡಲ ಸಂಗಮ ಶಿಕ್ಷಣ ಸಂಸ್ಥೆಯ ಶಿಕ್ಷಕರಾದ ಗಿರಿಮಲ್ಲಪ್ಪ ವಳಸಂಗ ಹೇಳಿದರು.

ನಗರದ ಸೇಂಟ್ ಥಾಮಸ್ ಶಾಲೆಯಲ್ಲಿ ರವಿವಾರ ಜಿ.ಬಿ ಸಂಗೀತ ಕಲಾ ಸಂಸ್ಥೆ ವತಿಯಿಂದ ಗುರು ಸ್ಮರಣೆಯ ಅಂಗವಾಗಿ ಹಮ್ಮಿಕೊಂಡ ಸಂಗೀತ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಪ್ರಸಕ್ತ ದಿನಗಳಲ್ಲಿ ಅತಿ ವೇಗವಾಗಿ ಚಲಿಸುತ್ತಿರುವ ಸಮಯಕ್ಕೆ ತಕ್ಕಂತೆ ನಮ್ಮ ಮಕ್ಕಳುಕೂಡ ಬೆಳೆಯುತ್ತಿದ್ದಾರೆ. ಅವರ ಬೆಳವಣಿಗೆಗೆ ಮೊಬೈಲ್ ಎಷ್ಟು ಪೂರಕವಾಗಿದೆಯೊ ಅಷ್ಟೇ ಮಾರಕವೂ ಕೂಡ ಆಗಿದೆ, ಮಕ್ಕಳಿಗೆ ಮೊಬೈಲ್ ಕೊಂಡುವ ಬದಲು ಆ ಸಮಯದಲ್ಲಿ ಸಂಗೀತ ಕಲಿಸುವಂತಹ ಪ್ರಯತ್ನ ಪೋಷಕರು ಮಾಡಿದರೆ ಅವರ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರ ಆಗಲಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಸೇಂಟ್ ಥಾಮಸ್ ಚರ್ಚಿನ ಧರ್ಮ ಗುರುಗಳಾದ ವೆಂ. ಜೆರಾಲ್ಡ್ ಸಾಗರ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವೇದಿಕೆ ಮೇಲೆ ಇಂಗಳಗಿ ಗ್ರಾ.ಪಂ ಮಾಜಿ ಅಧ್ಯಕ್ಷ ಬಸವರಾಜ ಸ್ಥಾವರಮಠ, ನಗರಸಭೆ ಸದಸ್ಯೆ ಸಾಬೇರಾ ಬೇಗಂ, ಜಿ. ಬಿ ಸಂಗೀತ ಕಲಾ ಸಂಸ್ಥೆಯ ಅಧ್ಯಕ್ಷರಾದ ಲೀಲಾವತಿ ಎಂ. ಸೋನಾರ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಸಂಗೀತವನ್ನು ಮಲ್ಲಿಕಾರ್ಜುನ್ ಬಾಜಂತ್ರಿ, ಮತ್ತು ಸುಗಮ ಸಂಗೀತವನ್ನು ವಿನೀತಾ ಪೋದ್ಧಾರ ಹಾಗೂ ಅಂಭಗ ಗಾಯನವನ್ನು ವಿಜಯಲಕ್ಷ್ಮೀ ಮತ್ತು ಸಂಗಡಿಗರು ಪ್ರಸ್ತುತಪಡಿಸಿದ್ದರು. ಕಲಾವಿದರಾದ ಮೌನೇಶ್ವರಾವ ಬಿ. ಸೋನಾರ ಮತ್ತು ಲೊಕೇಶ ಪತ್ತಾರ್ ವಾದ್ಯ ಸಹಕಾರ ನೀಡಿದರು.

ಕಾರ್ಯಕ್ರಮವನ್ನು ಶಾಂತಪ್ಪ ಹಡಪಾದ ನಿರೂಪಿಸಿ ವಂದಿಸಿದರು, ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಪಾಲಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು