ಪ್ರಭುಲಿಂಗ ನೀಲೂರೆ
ಪ್ರಭುಲಿಂಗ ನೀಲೂರೆ ಸಾಹಿತಿ, ಪತ್ರಕರ್ತ,
ಪ್ರಭುಲಿಂಗ ನೀಲೂರೆ ಮೂಲತಃ ಆಳಂದ ತಾಲೂಕಿನ ಹಳ್ಳಿಸಲಗರ ಗ್ರಾಮದವರು. ವಿಜ್ಞಾನ ವಿದ್ಯಾರ್ಥಿಯಾದರೂ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಕೃತಿಗಳನ್ನು ಹೊರತರುವ ಮೂಲಕ ಕಲಬುರಗಿ ವಲಯದಲ್ಲಿ ಹೆಸರು ಮಾಡಿದ್ದಾರೆ. ಇವರ ಚೊಚ್ಚಲ ಕೃತಿ 'ಅಜ್ಜ ಹೇಳಿದ ಕಲ್ಯಾಣಕ್ರಾಂತಿ ಕಥೆ' ಪುಸ್ತಕಕ್ಕೆ ಕರ್ನಾಟಕ ಬಾಲವಿಕಾಸ ಅಕಾಡೆಮಿಯ 'ಮಕ್ಕಳ ಚಂದಿರ' ಪುಸ್ತಕ ಬಹುಮಾನ ಲಭಿಸಿದೆ. ಮಕ್ಕಳ ಸಾಹಿತ್ಯದಲ್ಲಿ ಈ ಪ್ರಶಸ್ತಿ ಪಡೆದ ಕಲ್ಯಾಣಕರ್ನಾಟಕ ಭಾಗದ ಮೊದಲ ಲೇಖಕ ಎಂಬ ಹೆಗ್ಗಳಿಕೆಗೂ ನೀಲೂರೆ ಅವರು ಭಾಜನರಾಗಿದ್ದಾರೆ.
ಕನ್ನಡದ ಮೊಟ್ಟಮೊದಲ ಮುಸ್ಲಿಂ ತತ್ವಪದಕಾರ ಚನ್ನೂರ ಜಲಾಲ್ ಸಾಹೇಬರ ಜೀವನ ಕುರಿತು ಇವರು ಬರೆದ 'ಹುಕುಂಪತ್ರ' ನಾಟಕ ಕಲಬುರಗಿ ರಂಗಾಯಣದ ಮೂಲಕ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶನಗೊಂಡಿರುವುದು ವಿಶೇಷ. ಇವರ 'ಒಳಿತು ಮಾಡು ಮನುಜ' ಕಥೆ ಗುಲ್ಬರ್ಗ ವಿಶ್ವವಿದ್ಯಾಲಯದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದೆ.
ಕಳೆದ ಎರಡು ದಶಕದಿಂದ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಸದ್ಯ ವಿಜಯಕರ್ನಾಟಕ ಕನ್ನಡ ದಿನಪತ್ರಿಕೆಯ ಕಲಬುರಗಿ ಆವೃತ್ತಿಯಲ್ಲಿ ಮುಖ್ಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
1990ರಲ್ಲಿ ಮಹತ್ವಾಕಾಂಕ್ಷಿ ಸಾಮಾಜಿಕ ಸೇವಾ ಸಂಸ್ಥೆ ಆರಂಭಿಸಿ ಅದರಡಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಈ ನೆಲದ ಸಂಸ್ಕೃತಿ ಉಳಿವಿಗೆ ಶ್ರಮಿಸುತ್ತಿದ್ದಾರೆ. ಕನ್ನಡದ ಮೊಟ್ಟಮೊದಲ ಉಪಲಬ್ದ ಗ್ರಂಥ ಕವಿರಾಜಮಾರ್ಗದ ರಚನೆಕಾರ ಶ್ರೀವಿಜಯನ ಹೆಸರಲ್ಲಿ ರಾಜ್ಯಮಟ್ಟದ ಸಾಹಿತ್ಯಕ ಪ್ರಶಸ್ತಿ ಆರಂಭಿಸಿ ಸರಕಾರ ಆ ಪ್ರಶಸ್ತಿ ಘೋಷಣೆ ಮಾಡುವವರೆಗೂ ಸಂಸ್ಥೆ ಮೂಲಕ ಪ್ರಶಸ್ತಿ ನೀಡಿರುವುದು ನೀಲೂರೆಯವರ ಹೆಗ್ಗಳಿಕೆ. ಇವರ ಸಮಾಜಸೇವೆ ಪರಿಗಣಿಸಿ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯು ರಾಜ್ಯ ಯುವ ಪ್ರಶಸ್ತಿ ನೀಡಿ ಗೌರವಿಸಿದೆ.
ಹೈದ್ರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರರ ಮಾಲಿಕೆಯಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗವು ಇವರ ವಿರುಪಾಕ್ಷಪ್ಪ ಗೌಡ ಕೃತಿ ಪ್ರಕಟಿಸಿದೆ. ಅಜ್ಜ ಹೇಳಿಕ ಕಲ್ಯಾಣಕ್ರಾಂತಿಯ ಕಥೆ, ಜ್ಞಾನ ದಾಸೋಹಿ ದೊಡ್ಡಪ್ಪ ಅಪ್ಪ, ಹಿಂಗ್ಯಾಕಂತಾರೆ, ಸುಬೇದಾರ ರಾಮಜಿ ಸಕ್ಷಾಲ್, ಮನಸೇ ಬದುಕು ನೀನಗಾಗಿ ಇವರ ಪ್ರಮುಖ ಕೃತಿಗಳು. ಸುಬೇದಾರ ರಾಮಜಿ ಸಕ್ಷಾಲ್ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಎನ್.ಬಸವರಾಜ ದತ್ತಿ ಪುಸ್ತಕ ಬಹುಮಾನ ಹಾಗೂ ಗದಗನ ಡಾ.ಪುಟ್ಟರಾಜ ಸಾಹಿತ್ಯ ಪುರಸ್ಕಾರ ಲಭಿಸಿದೆ. ಬಿಸಿಲನಾಡು ಪ್ರಕಾಶನ ಆರಂಭಿಸಿ ಅದರಡಿ ಹತ್ತಾರು ಕೃತಿಗಳನ್ನು ಹೊರತರುವ ಮೂಲಕ ಈ ಭಾಗದ ಲೇಖಕರಿಗೂ ಉತ್ತೇಜನ ನೀಡುತ್ತಿದ್ದಾರೆ.
ಡಾ. ಶರಣಬಸಪ್ಪ ವಡ್ಡನಕೇರಿ