ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ₹243.41 ಕೋಟಿ ಮಧ್ಯಂತರ ವಿಮೆ ಪರಿಹಾರ; ಮುಂದಿನ ದಿನಗಳಲ್ಲಿ ಬ್ಯಾಂಕ್ ಖಾತೆಗೆ ಜಮೆ

ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ₹243.41 ಕೋಟಿ ಮಧ್ಯಂತರ ವಿಮೆ ಪರಿಹಾರ; ಮುಂದಿನ ದಿನಗಳಲ್ಲಿ ಬ್ಯಾಂಕ್ ಖಾತೆಗೆ ಜಮೆ

ಪ್ರತಿ ಟನ್ ಕಬ್ಬಿಗೆ ನಿಗದಿಪಡಿಸಿದ ದರದಂತೆ ಹಣ ನೀಡಲು ಸಕ್ಕರೆ ಕಾರ್ಖಾನೆಗಳು ಒಪ್ಪಿಗೆ ನೀಡಿವೆ- ಸಚಿವ ಪ್ರಿಯಾಂಕ್ ಖರ್ಗೆ

ಜಿಲ್ಲೆಯ ಎಲ್ಲಾ ಐದು ಹಾಗೂ ಯಾದಗಿರಿ ಜಿಲ್ಲೆಯ ಒಂದು ಸಕ್ಕರೆ ಕಾರ್ಖಾನೆಗಳು ಟನ್ ಕಬ್ಬಿಗೆ ರೂ 2,950/- ಗಳಂತೆ ಕಬ್ಬು ಪೂರೈಸಿದ 14 ದಿನಗಳೊಳಗಾಗಿ ರೂ 2950/- ಗಳನ್ನು ನೀಡಲು ಒಪ್ಪಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ರು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಮುಖ್ಯಮಂತ್ರಿಗಳು ನಿರಂತರವಾಗಿ‌ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ ನಂತರ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಬ್ಬಿನ ದರ ನಿಗದಿಪಡಿಸಲಾಗಿದೆ. ಜಿಲ್ಲೆಯ ಸಕ್ಕರೆ ಕಾರ್ಖಾನೆಯವರೊಂದಿಗೆ ಕೂಡಾ ಈ ವಿಚಾರದಲ್ಲಿ ಚರ್ಚೆ ನಡೆಸಲಾಗಿದೆ. ದರ ನಿಗದಿಪಡಿಸಿದಂತೆ ಕೊಡಲು ಅವರು ಒಪ್ಪಿಗೆ ನೀಡಿದ್ದಾರೆ ಎಂದರು.

ಬೆಳೆ ಹಾನಿ

ಆಗಷ್ಟ ತಿಂಗಳಿನಲ್ಲಿ ಶೇ.69 ಹೆಚ್ಚುವರಿ ಹಾಗೂ ಸೆಪ್ಟೆಂಬರ್ ಶೇ 63 ಹೆಚ್ಚುವರಿಯಾಗಿ ಸತತ ಸುರಿದ ಮಳೆಯಿಂದಾಗಿ (ಅತಿವೃಷ್ಠಿಯಿಂದಾಗಿ) NDRF ಮಾರ್ಗಸೂಚಿಯನ್ವಯ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಜಂಟಿ ಸಮೀಕ್ಷೆಯ ವರದಿಯ ಅನುಸಾರ 3,24,205 ಹೇ ಪ್ರದೇಶದಲ್ಲಿ ಬೆಳೆ ಹಾನಿ ವರದಿಯಾಗಿರುತ್ತದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿರುತ್ತದೆ.

ಬೆಳೆ ಹಾನಿಯಾದ ರೈತರ ವಿವರವನ್ನು ಈಗಾಗಲೇ PARIHARA (ಪರಿಹಾರ) ತಂತ್ರಾಂಶದಲ್ಲಿ ದಾಖಲಿಸಿದ್ದು, ಒಟ್ಟು 3,26,183 ರೈತರಿಗೆ ರೂ. 250.97 ಕೋಟಿ ಬೆಳೆ ಹಾನಿ ಪರಿಹಾರ ಮುಂದಿನ 3-4 ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಸಚಿವರು ಹೇಳಿದರು.

ಬೆಳೆ ವಿಮೆ ಯೋಜನೆಯಡಿಯಲ್ಲಿ ಮಧ್ಯಂತರ ಪರಿಹಾರ (Mid-Season Adversity) ರೂ 243.41 ಕೋಟಿ ಬಿಡುಗಡೆ.

2025-26 ನೇ ಸಾಲಿನಲ್ಲಿ ಆಗಷ್ಟೆ (ಶೇ 69 ಹೆಚ್ಚುವರಿ) ಹಾಗೂ ಸೆಪ್ಟೆಂಬರ್ (ಶೇ. 63 ಹೆಚ್ಚುವರಿ) ತಿಂಗಳಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ (ಅತಿವೃಷ್ಟಿಯಿಂದಾಗಿ) ಅತಿ ಹೆಚ್ಚಿನ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.

ಬೆಳೆ ಹಾನಿಯಾದ ಹತ್ತಿ, ತೊಗರಿ, ಸೂರ್ಯಕಾಂತಿ ಹಾಗೂ ಅರಿಶಿಣ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿದ ಒಟ್ಟು 2,67,560 ರೈತರ 3,35,046.2 ಹೇ ಪ್ರದೇಶಕ್ಕೆ ಬೆಳೆ ವಿಮೆ ಮಧ್ಯಂತರ ಪರಿಹಾರ (Mid-Season Adversity) ನೀಡಲು ಸರ್ಕಾರ ಆದೇಶಿಸಿದೆ. ಬೆಳೆವಿಮೆ ಪರಿಹಾರ ಕೆಲವೇ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.

1) ಹತ್ತಿ

ಬೆಳೆ ವಿಮೆ ನೋಂದಣಿ ಮಾಡಿಸಿದ ರೈತರ- ಸಂಖ್ಯೆ10,025. ಪ್ರದೇಶ-11,727.5 ಹೆಕ್ಟೇರ್. ಅಂದಾಜು ಬೆಳೆ ವಿಮೆ ಮಧ್ಯಂತರ ಪರಿಹಾರ- ರೂ 9.95 ಕೋಟಿ.

2) ತೊಗರಿ.

ಬೆಳೆ ವಿಮೆ ನೋಂದಣಿ ಮಾಡಿಸಿದ ರೈತರ- ಸಂಖ್ಯೆ

2,56,845. ಪ್ರದೇಶ- 3,22,734 ಹೆಕ್ಟೇರ್. ಅಂದಾಜು ಬೆಳೆ ವಿಮೆ ಮಧ್ಯಂತರ ಪರಿಹಾರ- ರೂ 232.81ಕೋಟಿ

3) ಸೂರ್ಯಕಾಂತಿ.

ಬೆಳೆ ವಿಮೆ ನೋಂದಣಿ ಮಾಡಿಸಿದ ರೈತರ ಸಂಖ್ಯೆ-

382. ಪ್ರದೇಶ- 392.088 ಹೆಕ್ಟೇರ್. ಅಂದಾಜು ಬೆಳೆ ವಿಮೆ ಮಧ್ಯಂತರ ಪರಿಹಾರ ರೂ 0.24 ಕೋಟಿ.

4) ಅರಿಶಿಣ.

ಬೆಳೆ ವಿಮೆ ನೋಂದಣಿ ಮಾಡಿಸಿದ ರೈತರ ಸಂಖ್ಯೆ-

308. ಪ್ರದೇಶ- 192.615 ಹೆಕ್ಟೇರ್. ಅಂದಾಜು ಬೆಳೆ ವಿಮೆ ಮಧ್ಯಂತರ ಪರಿಹಾರ ರೂ 0.41ಕೋಟಿ.

ಒಟ್ಟು ಬೆಳೆ ವಿಮೆ ನೋಂದಣಿ ಮಾಡಿಸಿದ ರೈತರ ಸಂಖ್ಯೆ -2,67,560. ಪ್ರದೇಶ- 3,35,046.2 ಹೆಕ್ಟೇರ್ ಹಾಗೂ ಒಟ್ಟು ಪರಿಹಾರ ರೂ 243.41ಕೋಟಿ.

ಉದ್ದು, ಹೆಸರು, ಸೋಯಾ ಅವರೆ ಹಾಗೂ ಇನ್ನಿತರ ಬೆಳಗಳಿಗೆ ಬೆಳೆ ಹಾನಿ ಕುರಿತು ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪದಡಿ (Localized calamity) ದೂರು ನೀಡಿದ ಒಟ್ಟು 22,385 ರೈತರಿಗೆ ರೂ. 8.79 ಕೊಟಿ ಬೆಳೆವಿಮೆ ಪರಿಹಾರ ಕೆಲವೇ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಸಚಿವರು ವಿವರಿಸಿದರು.

FRP ಮತ್ತು MSP ನಿಗದಿ ಕೇಂದ್ರದ ಜವಾಬ್ದಾರಿ

ಎಫ್ ಆರ್ ಪಿ ಹಾಗೂ ಎಂ ಎಸ್ ಪಿ (FRP MSP) ನಿಗದಿ ಮಾಡುವುದು ಕೇಂದ್ರದ ಜಬಾಬ್ದಾರಿಯಾಗಿದೆ‌. SISA ಅವರು ಕೇಂದ್ರಕ್ಕೆ ಪತ್ರ ಬರೆದು FRP MHP ವಿಚಾತದಲ್ಲಿ ಪತ್ರ ಬರೆದಿದ್ದಾರೆ‌. ಈ ಸಂಘದಲ್ಲಿ ಬಿಜೆಪಿಯವರೇ ಇದ್ದಾರೆ. ಸ್ವತಃ ಮುರುಗೇಶ್ ನಿರಾಣಿ ಅವರೃ ಸಕ್ಕರೆ ಕಾರ್ಖಾನೆ ನಡೆಸಲು ಆಗದು ಸರ್ಕಾರಕ್ಕೆ ಬರೆದು ಕೊಡುತ್ತೇವೆ ಅಂದಿದ್ದಾರೆ. ಬಿಜೆಪಿಯವರು ಹೇಳಿದರೆ ಅದು ಸರಿ, ಅದೇ ನಾವು ಬೇಡಿಕೆ ಇಟ್ಟರೆ ತಪ್ಪು ಎಂದು ಬಿಂಬಿಸಲಾಗುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಗೈಡ್ ಲೈನ್ಸ್ ಪ್ರಕಾರ ಪಥಸಂಚಲನ

ಗೈಡ್ ಲೈನ್ಸ್ ಪ್ರಕಾರ ಆರ್ ಎಸ್ ಎಸ್ ಪಥಸಂಚಲನ ನಡೆದಿದೆ. ಸರ್ಕಾರದ ಪ್ರಕಾರ ಇದು ನಡೆಯುತ್ತಿದೆ. ಎಷ್ಟು ಜನ ಇರಬೇಕು, ಯಾವ ಮಾರ್ಗದಲ್ಲಿ ಹೋಗಬೇಕು ಯಾರು ಯಾರು ಇರಬೇಕು ಎಂದು‌ ನಾವು ನಿರ್ಧರಿಸಿದ್ದೇವೆ ಅದೇ ಪ್ರಕಾರ ಎಲ್ಲವೂ ನಡೆಯುತ್ತಿದೆ ಎಂದರು.

ಗುರುದಕ್ಷಿಣೆ ಆಡಿಟ್ ಆಗಲಿ

ನಿಮ್ಮ ಹಾಗೂ ಆರ್ ಎಸ್ ಎಸ್ ನಡುವಿನ ಸಂಘರ್ಷ ಮುಂದೆ ನಡೆಯುತ್ತಿದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು ಇದೀಗ ಪ್ರಾರಂಭವಾಗಿದೆ.

ಆರ್ ಎಸ್ ಎಸ್ ನೋಂದಣಿ‌ ಆಗಿಲ್ಲ. ಒಮ್ಮೆ ಆದರೆ ತೆರಿಗೆ ವ್ಯಾಪ್ತಿಗೆ ಬರುತ್ತದೆ. ಇವರು ಗುರುದಕ್ಷಿಣೆ ಎನ್ನುತ್ತಾರೆ. ನೋಂದಣಿ‌ ಆಗದ ಸಂಘಕ್ಕೆ ಗುರುದಕ್ಷಿಗೆ ಕೊಡುವವರ ಲೆಕ್ಕಗಳು ಕೂಡಾ ಆಡಿಟ್ ಆಗಬೇಕಲ್ಲ ಎಂದರು.

ಮೂರು ಸಾವಿರ ಜನ ಬರುತ್ತಾರೆ ಎಂದಿದ್ದರಲ್ಲ, ಎಷ್ಟು ಜನ ಬಂದರು ? ಕೇವಲ ಮುನ್ನೂರು ಮಾತ್ರ. ಆಶೋಕ್ ಬಂದರಾ? ವಿಜಯೇಂದ್ರ ಬಂದರಾ? ಹೋಗಲಿ ಕಲಬುರಗಿ ಯಿಂದ ಯಾರಾದರೂ ಹೋಗಿದ್ದಾರೆಯೇ? ಒಂದು ವೇಳೆ ಚಿತ್ತಾಪುರ ಹೊರತುಪಡಿಸಿ ಹೊರಗಿನವರು ಹೋಗಿದ್ದರೆ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗುತ್ತದೆ ಎಂದರು.

ಕೆಕೆ ಆರ್ ಡಿಬಿ ದುಡ್ಡನ್ನು ಕಲಬುರಗಿಯಲ್ಲಿ ಆರ್ ಎಸ್ ಎಸ್ ನವರು ಹೇಗೆ ಲೂಟಿ ಹೊಡೆದಿದ್ದಾರೆ ಎನ್ನುವುದನ್ನು ದಾಖಲೆ ಸಮೇತ ಸಧ್ಯದಲ್ಲೇ ನಿಮ್ಮ ಮುಂದೆ ಇಡಲಿದ್ದೇನೆ ಎಂದು ಪ್ರಿಯಾಂಕ್ ಹೇಳಿದರು.

ಬಿಹಾರ ಫಲಿತಾಂಶ ಕರ್ನಾಟಕದಲ್ಲಿಯೂ ಪರಿಣಾಮ ಬೀರಲಿದೆಯಾ ಎನ್ನುವ ಪ್ರಶ್ನೆಗೆ, ಮತದಾರರನ್ನ ಬಿಹಾರದಿಂದ‌ ಕರೆಸುತ್ತಾರೆಯೇ? ಚುನಾವಣೆಯಲ್ಲಿ ಗೆಲುವು ಸೋಲು ಸಾಮಾನ್ಯ. ನಾವು ಸೋಲು ಒಪ್ಪಿದ್ದೇವೆ. ಆದರೆ ಇಷ್ಟೊಂದು ಆಡಳಿತ ವಿರೋಧಿ ಅಲೆ ಇದ್ದಾಗಲೂ ಅವರು ಪಡೆದ ಮತಪ್ರಮಾಣದ ಬಗ್ಗೆ ಅನುಮಾನವಿದೆ. ಡಾಟಾ ಹೊರಗೆ ಬರಲಿ ನೋಡೋಣ. 

ಇಲ್ಲೇ ಆಳಂದ ಹಾಗೂ ಮಹಾದೇವಪುರದಲ್ಲಿ ಏನು ನಡೆದಿದೆ ಎನ್ನುವುದನ್ನು ದಾಖಲೆ‌ ಸಮೇತ ಕೊಡುತ್ತೇವೆ. ಚುನಾವಣೆ ಆಯೋಗದ ಪಾತ್ರ ಏನಿದೆ ಎಂದು ಗೊತ್ತಾಗಲಿದೆ. ಬಿಹಾರದಲ್ಲಿ ಚುನಾವಣೆಗೆ ಮುನ್ನ ಮಹಿಳೆಯರಿಗೆ ಹಣ ಬಿಡುಗಡೆ ಮಾಡಲು ಅಡ್ಡಿ ಮಾಡದ ಚುನಾವಣೆ ಆಯೋಗ ತೆಲಂಗಾಣದಲ್ಲಿ ಅಡ್ಡಿ ಮಾಡಿತು ಎಂದು ಆರೋಪಿಸಿದರು.

ಸಿಎಂ ಅವರು ಕ್ಯಾಬಿನೇಟ್ ವಿಸ್ತರಣೆ ಕುರಿತಂತೆ ಏನು ಹೇಳಿದ್ದಾರೆ ಅದೇ ಫೈನಲ್. ಇದೆಲ್ಲ ಮಾಧ್ಯಮದ ವಲಯಲ್ಲಿ ಚರ್ಚೆ ನಡೆದಿದೆ ಎಂದು ಅವರೇ ಹೇಳಿದ್ದಾರೆ. ದೆಹಲಿಯಲ್ಲಿ ಸಿಎಂ, ಮೋದಿ ಅವರೊಂದಿಗೆ ಕಬ್ಬು ಇತ್ಯಾದಿ ವಿಚಾರ ಚರ್ಚೆ ನಡೆಸಲಿದ್ದಾರೆ ಎಂದರು.

ರಾಹುಲ್ ಗಾಂಧಿ ಅವರದು ಐರನ್ ಲೆಗ್ ಎನ್ನುವ ಅಶೋಕ್ ಅವರ ಟೀಕೆ ಕುರಿತು, ಅವರು ಎಂದಾದರೂ ಜನರ ಪರವಾದ ಹೋರಾಟ ನಡೆಸಿದ್ದಾರೆಯೇ,? ಅಶೋಕ್ ಅವರ ಕಾಲ್ಗುಣ ಚೆನ್ನಾಗಿದೆಯಾ? ಗಣವೇಷದಾರರು ಎಂದಾದರೂ ಜನರ ಕಣ್ಣೀರು ಒರೆಸಿದ್ದು ನೋಡಿದ್ದೀರಾ ಎಂದರು.

ನವೆಂಬರ್ ನಲ್ಲಿ ಬದಲಾವಣೆ ಆಗುತ್ತದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಅಧ್ಯಕ್ಷರಾಗಿ ಎರಡು ವರ್ಷ ಆಯ್ತಲ್ಲ, ಅಲ್ಲೇ ಬದಲಾವಣೆ ಆಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.