ಕದನದಿಂದ ಭಾರತದ ಆರ್ಥಿಕ ವೃದ್ಧಿಗೆ ಸವಾಲು
ಕದನದಿಂದ ಭಾರತದ ಆರ್ಥಿಕ ವೃದ್ಧಿಗೆ ಸವಾಲು :
ಸಮತೋಲನ ಸ್ಥಿರತೆ ಭಾರತದ ಆದ್ಯತೆ.
ಮಧ್ಯಪ್ರಾಚ್ಯ ದೇಶಗಳು ವಿಶ್ವದಲ್ಲಿ ಆತಂಕ ಮೂಡಿಸುವ ಬೆಳವಣಿಗೆ ಎಂಬುದು ಇಗಿನ ಸತ್ಯ.
ಹೆಜ್ಬೂಲ್ಲಾ ಮುಖ್ಯಸ್ಥ ಹಸನ್ ನಲ್ಲಾ ಹತ್ಯೆ ಬಳಿಕ ಮಧ್ಯಪ್ರಾಚ್ಯದ ಘಟನೆಗಳು ಕ್ಷಣಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿವೆ. ಚಿಕ್ಕ ಗಾಜಾ ಪಟ್ಟಿಯಿಂದ ಆರಂಭವಾದ ಹೋರಾಟ ಅನಿಯಂತ್ರಿತ ಯುದ್ಧದ ಸ್ವರೂಪ ಪಡೆಯುತ್ತಿರುವುದು ಆಘಾತಕಾರಿ ವಿದ್ಯಮಾನ. ಇಸ್ರೇಲ್‌ನ ಮೇಲೆ ಇರಾನ್‌ನ ಇತ್ತೀಚಿನ ಕ್ಷಿಪಣಿ ದಾಳಿ,ಆ ದಾಳಿಗೆ ಪ್ರತಿಯಾಗಿ ಇಸ್ರೇಲ್ ನೀಡಿದ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಎರಡೂ ಕಡೆಯವರು ದಾಳಿಗೆ ತುದಿಗಾಲಿನಲ್ಲಿ ನಿಂತಿರುವುದು ಗೋಚರಿಸುತ್ತದೆ. ಆದರೆ, ಈ ರಾಷ್ಟ್ರಗಳ ಯುದ್ಧೋತ್ಸಾಹವು ನಿಸ್ಸಂಶಯವಾಗಿ ಪ್ರಪಂಚವನ್ನು ತಲ್ಲಣ ಸೃಷ್ಟಿಸಲಿದೆ. 'ಸದ್ಯದ ಪರಿಸ್ಥಿತಿ ಯುದ್ಧ ಮಾಡುವ ಸಂದರ್ಭವಲ್ಲ' ಎಂದು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಹೇಳುತ್ತಿದ್ದರೂ, ಈ ಮಾತಿನ ವಾಸ್ತವ ಯಾರೊಬ್ಬರಿಗೂ ಅರ್ಥವಾಗದೇ ಇರುವುದು ದುರಂತವೇ ಸರಿ.
ಎರಡು ರಾಷ್ಟ್ರಗಳ ಯುದ್ಧದ ತಾಪವು ಉಳಿದ ರಾಷ್ಟ್ರಗಳಿಗೆ ಹಾಗೂ ಖಂಡಗಳಿಗೆ ವ್ಯಾಪಿಸುವುದು ಬಲು ಅಪಾಯಕಾರಿ ಬೆಳವಣಿಗೆ. 2ನೇ ಮಹಾಯುದ್ಧದ ನಂತರ ಹತ್ತುಹಲವು ಯುದ್ಧಗಳನ್ನು ಜಗತ್ತು ಕಂಡಿದ್ದರೂ, ಈಗಿನ ವಿಷಮ ಪರಿಸ್ಥಿತಿಯು 3ನೇ ಮಹಾಯುದ್ಧದ ಕರಾಳ ಮುನ್ಸೂಚನೆಯಂತೆ ಕಾಣುತ್ತಿದೆ. ಸೌದಿ ಅರೇಬಿಯಾ ಮತ್ತು ಯುಎಇ ಯಂಥ ದೇಶಗಳು ಈ ಸಂಘರ್ಷದಿಂದ ಸಾಕಷ್ಟು ಅಂತರ ಕಾಯ್ದುಕೊಳ್ಳುತ್ತಿವೆ. ಆದರೆ, ಹೀಗೆ ವರ್ತಿಸಲು ಭಾರತಕ್ಕೆ ಸಾಧ್ಯವಾಗುತ್ತಿಲ್ಲ, ಕಾರಣ, ಭಾರತಕ್ಕೆ ಇಸ್ರೇಲ್ ಹೇಗೆ ಹತ್ತಿರವೋ, ಇರಾನ್ ಕೂಡ ಅಷ್ಟೇ ಆಪ್ತ, ಈ ಬಣಗಳ ನಡುವೆ ಶಾಂತಿಯ ಸಂದೇಶ ಬಿತ್ತುತ್ತಾ ಸಮತೋಲನ ಕಾಯ್ದುಕೊಳ್ಳುವುದು ಭಾರತಕ್ಕಿರುವ ಬಹುದೊಡ್ಡ ರಾಜತಾಂತ್ರಿಕ ಸವಾಲು ಕೂಡ ಹೌದು.
ಹಾಗೆ ನೋಡಿದರೆ, ಮಧ್ಯಪ್ರಾಚ್ಯದಲ್ಲಿ ಶುರುವಾಗಿರುವ ಈ ಬಿಕ್ಕಟ್ಟಿಗೆ ಮೂಲ ಕಾರಣವೇ ಅರಬ್ ರಾಷ್ಟ್ರಗಳು. ಆದರೆ, ಹಮಾಸ್ ಜತೆಗಿನ ಈ ಸಂಘರ್ಷ ಏರ್ಪಡುವ ಮುನ್ನವೇ ಇಸ್ರೇಲ್ ಮತ್ತು ಯುಎಇ ಪರಸ್ಪರ ಹತ್ತಿರವಾಗಿದ್ದವು. 2021ರಲ್ಲಿ ಭಾರತ, ಇಸ್ರೇಲ್, ಯುಎಇ ಮತ್ತು ಅಮೆರಿಕ ಒಟ್ಟಾಗಿ ಆರ್ಥಿಕ ಮತ್ತು ಇತರ ಪ್ರಾದೇಶಿಕ ವಿಷಯಗಳ ಸಹಕಾರಕ್ಕಾಗಿ 'ಐ2ಯು2' ವೇದಿಕೆಯನ್ನು ರಚಿಸಿಕೊಂಡಿದ್ದವು. ಅಂತೆಯೇ, ಭಾರತ- ಮಧ್ಯಪ್ರಾಚ್ಯ ಯುರೋಪ್ ಆರ್ಥಿಕ ಕಾರಿಡಾರನ್ನು (ಐಎಂಇಸಿ) ಕಳೆದ ವರ್ಷ ಘೋಷಿಸಲಾಗಿತ್ತು. ಯುದ್ಧ ಆರಂಭವಾದರೆ ಈ ವಾಣಿಜ್ಯಿಕ ಒಪ್ಪಂದಗಳಿಗೆ ತೀವ್ರ ಹೊಡೆತಗಳು ಬೀಳುವ ಸಾಧ್ಯತೆ ಇಲ್ಲದಿಲ್ಲ.
ಇರಾನ್ ಪೂರ್ಣ ಪ್ರಮಾಣದಲ್ಲಿ ಯುದ್ಧದಲ್ಲಿ ಮುಳುಗುವುದರಿಂದ ಕೆಂಪು ಸಮುದ್ರದ ವಾಣಿಜ್ಯ ಮಾರ್ಗದ ಮೇಲೂ ದುಷ್ಪರಿಣಾಮ ಬೀರಬಹುದು .
ಕೆಂಪು ಸಮುದ್ರ ಮಾರ್ಗವು ಭಾರತವನ್ನು ಯುರೋಪ್, ಉತ್ತರ ಅಮೆರಿಕ, ಉತ್ತರ ಆಫ್ರಿಕ ಮತ್ತು ಮಧ್ಯಪ್ರಾಚ್ಯದೊಂದಿಗೆ ಸಂಪರ್ಕಿಸುತ್ತದೆ. ಕಳೆದ ಹಣಕಾಸು ವರ್ಷದಲ್ಲಿ ದೇಶದ ಶೇ.50ರಷ್ಟು ರಫ್ತು ಹಾಗೂ ಶೇ.30ರಷ್ಟು ಆಮದು ಈ ಮಾರ್ಗದ ಮೂಲಕವೇ ನಡೆದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಇಲ್ಲೇನಾದರೂ ವ್ಯತ್ಯಯಗಳಾದರೆ, ಸಾರಿಗೆ ವೆಚ್ಚ ದುಬಾರಿಯಾಗಿ, ವಸ್ತುಗಳ ಬೆಲೆಯೂ ಗಗನಕ್ಕೇರಬಹುದು. ಈ ಉತ್ಪನ್ನಗಳನ್ನು ಆಧರಿಸಿದ ಭಾರತೀಯ ಕಂಪನಿಗಳು ನಷ್ಟ ಅನುಭವಿಸಬಹುದು. ಕಳೆದ ವರ್ಷ ಹೌತಿ ಬಂಡುಕೋರರು ಕೆಂಪು ಸಮುದ್ರ ಮಾರ್ಗದಲ್ಲಿ ಹಡಗುಗಳನ್ನು ಗುರಿಯಾಗಿಸಿದ್ದರಿಂದ ವಾಣಿಜ್ಯ ವ್ಯವಹಾರಕ್ಕೆ ಅಡ್ಡಿ ಆತಂಕ ಸೃಷ್ಟಿಸಿದ್ದವು. ಈ ಸರಕು ಸಾಗಣೆ ವೆಚ್ಚದ ಬಿಸಿ ತಣ್ಣಗಾಗಲು ಹಲವು ಮಾಸಗಳೆ ಹಿಡಿಯಿತು.
ಭಾರತವು ತನ್ನ ಇಂಧನತೈಲ ಅಗತ್ಯದ ಮುಕ್ಕಾಲು ಭಾಗಕ್ಕಿಂತಲೂ ಹೆಚ್ಚು ಪ್ರಮಾಣಕ್ಕಾಗಿ ವಿದೇಶಿ ಮಾರುಕಟ್ಟೆಗಳನ್ನೇ ಅವಲಂಬಿಸಿದೆ. ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ನಂತರ ಕಚ್ಚಾ ತೈಲದ ಬೆಲೆಯ ಏರಿಕೆಯ ಮುನ್ಸೂಚನೆಗಳು ಸಿಗುತ್ತಿವೆ. ಪೆಟ್ರೋಲ್, ಡೀಸೆಲ್ ದರ ಏರಿದರೆ ಭಾರತ ಪೂರೈಕೆ ಸರಪಳಿಯೇ ದುಬಾರಿಯಾಗುವ ಆತಂಕವೂ ಇಲ್ಲದಿಲ್ಲ. ಒಟ್ಟಾರೆಯಾಗಿ ಈ ಯುದ್ಧ ವ್ಯಾಪಿಸಿದರೆ ಆರ್ಥಿಕ ಬಿಕ್ಕಟ್ಟಿನ ವಿಷವರ್ತುಲದಲ್ಲಿ ಸಿಲುಕುವ ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂಬುದನ್ನು ಅಲ್ಲಗಳೆಯುವಂತಿಲ್ಲ. ವಸ್ತುಗಳ ಬೆಲೆ ಏರಿಕೆಯ ಬಿಸಿ. ನಮ್ಮ ಅಡುಗೆಮನೆ ತನಕ ಬರಲೂಬಹುದು. ಭಾರತವು ಯುದ್ಧ ವಿರೋಧಿಸಲು ಮುಖ್ಯ ಕಾರಣವೇ ಇದು. ಮಧ್ಯಪ್ರಾಚ್ಯದಲ್ಲಿ ಶಾಂತಿ ಮರುಸ್ಥಾಪನೆಗೊಳ್ಳಲಿ ಎಂಬುದು ವಿಶ್ವಸಂಸ್ಥೆ ಹಾಗೂ ಜಗತ್ತಿನ ಎಲ್ಲ ದೇಶಗಳ ಆಶಯವಾಗಿದೆ.
-ಪ್ರೊ ಯಶವಂತರಾಯ ಅಷ್ಠಗಿ
ಉಪಸಂಪಾದಕರು.