ನರಸಿಂಗರಾವ ಹೇಮನೂರ

ನರಸಿಂಗರಾವ ಹೇಮನೂರ

ನರಸಿಂಗರಾವ ಹೇಮನೂರ ಅವರು ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೇಮನೂರು ಗ್ರಾಮದವರು. ತಂದೆ ಮೋನಪ್ಪ ತಾಯಿ ಅಯ್ಯಮ್ಮ. ಸಿಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾದಲ್ಲಿ ಸುಮಾರು 37 ವರ್ಷಗಳ ಕಾಲ ದೇಶದ ವಿವಿಧೆಡೆ ಸೇವೆ ಸಲ್ಲಿಸಿ, ಆ ಕಂಪನಿಯ Regional Manager (,Mkt) (ಪ್ರಾದೇಶಿಕ ಮಾರುಕಟ್ಟೆ ವ್ಯವಸ್ಥಾಪಕ) ರಾಗಿ 2001ರಲ್ಲಿ ನಿವೃತ್ತಿ ಹೊಂದಿದ್ದಾರೆ. ತದನಂತರ ಸೇಡಂನಲ್ಲಿಯ ಸೌತ್ ಇಂಡಿಯಾ ಸಿಮೆಂಟ್ ನಲ್ಲಿಯೂ 8 ವರ್ಷ ಪ್ರಾದೇಶಿಕ (ಮಾರುಕಟ್ಟೆ) ವ್ಯವಸ್ಥಾಪಕರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಸೇಡಂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು. ಸೇಡಂನಲ್ಲಿಯ ನೃಪತುಂಗ ಅಧ್ಯಯನ ಸಂಸ್ಥೆಯ ಸಂಸ್ಥಾಪಕ ಸದಸ್ಯರು. ಇವರಿಗೀಗ 79 ರ ಹರೆಯ.

ಸಾಮಾಜಿಕ ಸೇವೆ: 

1960 ರ ದಶಕದಿಂದಲೇ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ ಶಹಬಾದ, ಕುರಕುಂಟಾ, ಸೇಡಮ್ ಪಟ್ಟಣಗಳಲ್ಲಿ ವಿಶ್ವಕರ್ಮ ಸಂಘಗಳ ಸ್ಥಾಪನೆಗಾಗಿ ಶ್ರಮಿಸಿರುವರು. ಅಖಿಲ ಕರ್ನಾಟಕ ವಿಶ್ಚಕರ್ಮ ಮಹಾಸಭಾದ ಕಲಬುರಗಿ ವಿಭಾಗದ ಪ್ರಧಾನ ಕಾರ್ಯದರ್ಶಿಗಳಾಗಿ ಸಮಾಜವನ್ನು ಸಂಘಟಿಸಿ ಸಭೆ ಸಮ್ಮೇಳನಗಳನ್ನು ಅಯೋಜಿಸಿರುವರು.

ಕಲಬುರಗಿ ವಿಶ್ವಕರ್ಮ ಸಮಾಜದ ಅಧ್ಯಕ್ಷರಾಗಿಯೂ, ತಿಂಥಿಣಿಯ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 

ಸಾಹಿತ್ಯ ಸೇವೆ - ಕೃತಿಗಳು: 

ಕವನ ಸಂಕಲನಗಳು

(1) ಇಂದ್ಯಾಕ ಬಂದಿ (2) ನೆನಪು ನೂರು ನೂರು ತರಹ 

ಸಂಪಾದಿತ ಕೃತಿಗಳು:

(1)ಜ್ಯೋತಿ, (2) ನೃಪತುಂಗನ ನೆಲದಿಂದ , (3) ಮೌನಯಾನ, (4) ವಿಶ್ವರಥ,(5) ವಿಶ್ವರೂಪ, (6)ಸಮರ್ಪಣೆ (7) ವಿಶ್ವದೊಡೆಯ (ಉಪನ್ಯಾಸಗಳ ಸಂಗ್ರಹ). (8) ಶತಕ ಕಂಡ ಶ್ರೀಮಠ (ಲೇಬಗಿರಿ ಶ್ರೀ ಮಠದ ಶತಮಾನೋತ್ಸವ ನಿಮಿತ್ತ ಪ್ರಕಟಿತ ಗ್ರಂಥ) , 

ಅನುವಾದಗಳು:

ಶ್ರೀ ವೀರಬ್ರಹ್ಮೇಂದ್ರ ಶ್ರೀಗಳ ಕಾಲಜ್ಞಾನ (ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದ),ಹಿಂದಿ, ಉರ್ದು ಭಾಷೆಗಳಲ್ಲಿ ಬಂದ ಹಲವಾರು ಶಾಯರಿ, ಗಜಲ್, ಕವನಗಳ ಭಾವಾನುವಾದ. 

ವ್ಯಕ್ತಿಚಿತ್ರಗಳು ಹಾಗೂ ಧರ್ಮಿಕ ಲೇಖನಗಳು: ಎಲೆಮರೆಯ ಕಾಯಿಯಂತಿದ್ದ ಸಾಧಕರ ವ್ಯಕ್ತಿಚಿತ್ರಗಳನ್ನು ಹಾಗೂ ಸಾಮಾಜಿಕ-ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದ ಹಲವಾರು ಲೇಖನಗಳನ್ನು ಬರೆದಿದ್ದಾರೆ.

ಪ್ರಶಸ್ತಿ-ಪುರಸ್ಕಾರಗಳು: 

(1)ಯಾದಗಿರಿ/ಕಲಬುರಗಿಯ ಆನೇಗುಂದಿ ಸಂಸ್ಥಾನ ಮಠದಿಂದ ಸಮಾಜ ಸೇವೆಗಾಗಿ ವಿಶ್ವಕರ್ಮ ಸಮಾಜ ರತ್ನ ಪ್ರಶಸ್ತಿ, (2) ರಾಜ್ಯ ವಿಶ್ವಕರ್ಮ ನೌಕಕರ ಸಂಘದಿಂದ ವಿಶ್ವಕರ್ಮ ಸಮಾಜ ರತ್ನ ಪ್ರಶಸ್ತಿ, (3)ವಿಶ್ವಕರ್ಮ ಹೋರಾಟ ಸಮಿತಿಯಿಂದ ಕನ್ನಡ ಸಿರಿ ಪ್ರಶಸ್ತಿ, (4)ಬೆಂಗಳೂರಿನ ಪತ್ರಿಕಾ ಮಾಧ್ಯಮದಿಂದ ಸುವರ್ಣ ಕರ್ನಾಟಕ ರತ್ನ ಪ್ರಶಸ್ತಿ, (5) ವಿಜಯಪುರ ಜಿಲ್ಲೆಯ ತಿಳಗೂಳದ ಬ್ರಹ್ಮವಿದ್ಯಾಶ್ರಮದಿಂದ ಸಾಹಿತ್ಯ ಬ್ರಹ್ಮ ಪ್ರಶಸ್ತಿ, (6)ಕಲಬುರಗಿ ವಿಶ್ವಕರ್ಮ ಶಿಕ್ಷಣ ಸಂಸ್ಥೆಯಿಂದ ದೇವಾನಾಂಪ್ರಿಯ ಪ್ರಶಸ್ತಿ..

ಅನೇಕ ಕವಿಗೋಷ್ಟಿಗಳಲ್ಲಿ ಕವಿಗಳಾಗಿ, ಅತಿಥಿಗಳಾಗಿ, ಅಧ್ಯಕ್ಷರಾಗಿ ಭಾಗವಹಿಸಿದ್ದಾರೆ. ಇವರ ಕವನ/ ಲೇಖನಗಳು ಪತ್ರಿಕೆಗಳಲ್ಲಿ, ಮಾಸಿಕಗಳಲ್ಲಿ, ಪ್ರಕಟಗೊಂಡಿವೆ. ಆಕಾಶವಾಣಿಯಲ್ಲಿ ಪ್ರಸಾರವಾಗಿವೆ.