ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗೆ : ಗುತ್ತೇದಾರ ಆಗ್ರಹ
ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗೆ ಆಗ್ರಹಿಸಿ ಆ.12ರಂದು ಪ್ರತಿಭಟನೆ
ಕಲಬುರಗಿ: ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಬೆಂಗಳೂರಿನ ಪ್ರೀಡಂಪಾರ್ಕ್ನಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಆ.12ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಯ್ಯ ಬಿ.ಗುತ್ತೇದಾರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2016ಕ್ಕಿಂತಲೂ ಮೊದಲು ನೇಮಕವಾದ ಶಿಕ್ಷಕರಿಗೆ 1-7ರ ಬದಲಾಗಿ 1-5ತರಗತಿಗೆ ಸೀಮಿತಗೊಳಿಸಿರುವುದು ಸರಿಯಲ್ಲ. 2017ರವರೆಗೆ ನೇಮಕವಾದ ಶಿಕ್ಷಕರನ್ನು 1ರಿಂದ 7ಕ್ಕೆ ನೇಮಕವಾದ ಶಿಕ್ಷಕರೆಂದು ಪರಿಗಣಿಸಬೇಕು. ಉಲ್ಲೇಖ 1ರ ಹೊಸ ವೃಂದ ಮತ್ತು ನಿಯಮಗಳು 2017ರ ನಂತರ ನೇಮಕವಾದ ಶಿಕ್ಷಕರಿಗೆ ಅನ್ವಯಗೊಳಿಸಬೇಕು’ ಎಂದು ಆಗ್ರಹಿಸಿದರು.
ಅರ್ಹ ಶಿಕ್ಷಕರಿಗೆ 2016ರ ಪೂರ್ವದಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢಶಾಲೆಗೆ ಬಡ್ತಿ ನೀಡಬೇಕು. 1-7ನೇ ತರಗತಿಗೆ ನೇಮಕವಾದವರನ್ನು ಪಿಎಸ್ಟಿ ಎಂದು ಪದನಾಮ ಮಾಡಿ 1-5ಕ್ಕೆ ಸೀಮಿತಗೊಳಿಸಿರುವುದನ್ನು ಹಿಂಪಡೆಯಬೇಕು. ಅರ್ಹತೆ ಇರುವ 2016ಕ್ಕಿಂತಲೂ ಮೊದಲು ನೇಮಕವಾದ ಎಲ್ಲ 1-8 ತರಗತಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಖ್ಯೆ ಮುಗಿಯುವರೆಗೆ ಅರ್ಹತೆ ಆಧಾರದ ಮೇಲೆ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಎಲ್ಲ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬರಲಾಗಿದೆ. ಆದರೂ ಸಂದಿಸಿಲ್ಲ. ಆದ್ದರಿಂದ ರಾಜ್ಯಮಟ್ಟದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಶಿಕ್ಷಕರನ್ನು ಪ್ರತಿಭಟನೆಗೆ ಇಳಿಯದಂತೆ ತಡೆದು, ಸರ್ಕಾರ ನಮ್ಮ ಮನವಿಗೆ ಸ್ಪಂದಿಸಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬು ಮೌರ್ಯ, ಈಶ್ವರಗೌಡ ಪಾಟೀಲ, ದೇವಿಂದ್ರಪ್ಪ ಗಣಮುಖಿ, ಪರಮೇಶ್ವರ ದೇಸಾಯಿ, ಅನಿಲ್ಕುರ್ಮಾ ಸುಂಠಾಣ ಇತರರಿದ್ದರು.