ಸಂಭ್ರಮದ ಸ್ವಾತಂತ್ರೋತ್ಸವದ ದಿನಾಚರಣೆಗೆ ಡಿ.ಸಿ.ನಿರ್ಧಾರ

ಸಂಭ್ರಮದ  ಸ್ವಾತಂತ್ರೋತ್ಸವದ ದಿನಾಚರಣೆಗೆ ಡಿ.ಸಿ.ನಿರ್ಧಾರ

ನಗರದ ಪ್ರಮುಖ ವೃತ್ತಗಳಿಗೆ ದೀಪಾಲಂಕಾರ ವ್ಯವಸ್ಥೆಗೆ ಡಿ.ಸಿ. ಸೂಚನೆ

ಕಲಬುರಗಿ:

 ಇದೇ ಆಗಸ್ಟ್ 15 ರಂದು ಜಿಲ್ಲೆಯಾದ್ಯಂತ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಸಡಗರ-ಸಂಭ್ರಮದಿಂದ ಆಯೋಜಿಸಲು ಸೋಮವಾರ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧ್ಯಕ್ಷತೆಯಲ್ಲಿ ನಡೆದ‌ ಸಭೆಯಲ್ಲಿ ನಿರ್ಧರಿಸಲಾಯಿತು.

ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರೀಯ ಹಬ್ಬವಾಗಿರುವುದರಿಂದ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿ, ನಿಗಮ-ಮಂಡಳಿ ಕಚೇರಿ, ಗ್ರಾಮ ಪಮಚಾಯತಿ, ಶಾಲಾ-ಕಾಲೇಜು, ಅಂಗನವಾಡಿಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಮತ್ತು ನಮನ ಜೊತೆಗೆ ರಾಷ್ಟ್ರ ಧ್ವಜಾರೋಹಣ ಮಾಡುವಂತೆ ಡಿ.ಸಿ. ಕರೆ ನೀಡಿದರು.

ಅಂದು ಕಲಬುರಗಿ ನಗರದ ಡಿ.ಎ.ಆರ್.ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ ನೆರವೇರಿಸಲಾಗುತ್ತಿದ್ದು, ಶಿಷ್ಠಾಚಾರದಂತೆ ಚುನಾಯಿತ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು. ಎಲ್ಲಿಯೂ ಶಿಷ್ಟಾಚಾರ ಉಲ್ಲಂಘನೆಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು.

ಡಿ.ಎ.ಅರ್. ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು, ಅಧಿಕಾರಿ, ಪತ್ರಕರ್ತರು, ಶಾಲಾ ಮಕ್ಕಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಬೇಕು. ಮಳೆಗಾಲ ಇರುವುದರಿಂದ ವಾಟರ್ ಪ್ರೂಫ್ ಟೆಂಟ್ ಹಾಕಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ, ಮೈದಾನ ಸ್ವಚ್ಛತೆ, ಸೂಕ್ತ ಪೊಲೀಸ್ ಭದ್ರತೆ, ಹೂವಿನ ಅಲಂಕಾರ ಮಾಡಬೇಕು. ಶಾಲಾ ಮಕ್ಕಳಿಂದ ಮೈದಾನದಲ್ಲಿ ಮತ್ತು ಅಂದು ಸಂಜೆ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ರಾಷ್ಟ್ರಭಕ್ತಿ ಸಂದೇಶ ಸಾರುವ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು. ಪೊಲೀಸ್ ಸೇರಿದಂತೆ ವಿವಿಧ ತುಕಡಿಗಳಿಂದ ಮೈದಾನದಲ್ಲಿ ಪಥಸಂಚಲನ ಹಾಗೂ ಇಲಾಖಾ ಪ್ರಗತಿ ಬಿಂಬಿಸುವ ಸ್ಥಬ್ದಚಿತ್ರ ಪ್ರದರ್ಶನ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಡಿ.ಸಿ. ನಿರ್ದೇಶನ ನೀಡಿದರು.

ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯ ವಿತರಣೆ ಮಾಡಬೇಕಿದಲ್ಲಿ ಜಿಲ್ಲಾಡಳಿತಕ್ಕೆ ಆಗಸ್ಟ್ 6 ರೊಳಗೆ ಅಧಿಕಾರಿಗಳು ಮಾಹಿತಿ ನೀಡಬೇಕೆಂದು ಡಿ.ಸಿ. ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಮುಖ ವೃತ್ತದಲ್ಲಿ ದೀಪಾಲಂಕಾರ:

ನಗರದ ಡಾ.ಬಿ.ಆರ್.ಅಂಬೇಡ್ಕರ್, ಬಸವೇಶ್ವರ, ಸರ್ದಾರ ವಲ್ಲಭಭಾಯಿ ಪಟೇಲ್, ಡಾ.ಬಾಬು ಜಗಜೀವನರಾಂ ಪುತ್ತಳಿ ಸೇರಿದಂತೆ ಪ್ರಮುಖ ವೃತ್ತಗಳನ್ನು ದೀಪಾಲಂಕಾರದ ವ್ಯವಸ್ಥೆ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು, ವಾಣಿಜ್ಯ ಅಂಗಡಿ-ಮುಂಗಟ್ಟುಗಳ ಮೇಲೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ದೀಪಾಲಂಕಾರ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಬೇಕು ಎಂದರು.

ಸಭೆಯಲ್ಲಿ ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.