ದಾಸಿಮಯ್ಯ ಕಾನೂನು ಸೇವಾ ಸಂಸ್ಥೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ 134ನೇ ಜಯಂತಿ ಆಚರಣೆ

ದಾಸಿಮಯ್ಯ ಕಾನೂನು ಸೇವಾ ಸಂಸ್ಥೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ 134ನೇ ಜಯಂತಿ ಆಚರಣೆ
ಕಲಬುರಗಿ, ಏಪ್ರಿಲ್ 14 – ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ದಾಸಿಮಯ್ಯ ಕಾನೂನು ಸೇವಾ ಸಂಸ್ಥೆ ಕಾರ್ಯಾಲಯದಲ್ಲಿ ಸಾಯಂಕಾಲ 7 ಗಂಟೆಗೆ ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಸಂಸ್ಥೆಯ ಸದಸ್ಯ ನ್ಯಾಯವಾದಿ ಸತೀಶ ಕುಮಾರ ಜಮಖಂಡಿ ಅವರ ಸ್ವಾಗತ ಭಾಷಣದೊಂದಿಗೆ ಆರಂಭವಾಯಿತು. ನಂತರ ಪ್ರಾಸ್ತಾವಿಕ ಭಾಷಣ ನೀಡಿದ ಸಂಸ್ಥೆಯ ಸಂಚಾಲಕ ಜೆನವೆರಿ ವಿನೋದ ಕುಮಾರ ಮಾತನಾಡುತ್ತಾ, “ನಮ್ಮ ಹಿರಿಯ ವಚನ ಸಾಹಿತ್ಯ ಸಂರಕ್ಷಕ ಫ.ಗು. ಹಳಕಟ್ಟಿ ಅವರು ಕಾನೂನು ತಜ್ಞರಾಗಿ ಬಾಂಬೆ ವಿಧಾನ ಪರಿಷತ್ ಸದಸ್ಯರಾಗಿದ್ದರು, ಅವರು ಅಂಬೇಡ್ಕರ್ ಅವರಿಗೆ ಪ್ರೇರಣೆಯಾದ ವ್ಯಕ್ತಿಗಳಲ್ಲೊಬ್ಬರು” ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ವಕೀಲ ಮಲ್ಲಿಕಾರ್ಜುನ ಕೋಟೆ ಅವರು ಮಾತನಾಡಿ, “ಅಂಬೇಡ್ಕರ್ ಅವರು ಜಗತ್ತಿನ ಎಲ್ಲಾ ಪ್ರಮುಖ ರಾಷ್ಟ್ರಗಳ ಸಂವಿಧಾನಗಳ ಅಧ್ಯಯನ ಮಾಡಿ, ಭಾರತದ ನೆಲೆಗೆ ಸೂಕ್ತವಾಗುವಂತೆ ಸಂವಿಧಾನ ರೂಪಿಸಿದ್ದು, ಅದು ಸಾಮಾಜಿಕ ನ್ಯಾಯದ ತಳಹದಿಯನ್ನು ಒದಗಿಸಿದೆ. ಈ ಸಂವಿಧಾನವನ್ನು ನಾವು ನಿಸ್ಸಂಶಯವಾಗಿ ಪಾಲಿಸಬೇಕು,” ಎಂದು ಹೇಳಿದರು.
ಅವರು ಮುಂದುವರೆದು, “11ನೇ ಶತಮಾನದ ದಾಸಿಮಯ್ಯನವರ ವಚನಗಳು ಮತ್ತು ಶರಣರ ಆಲೋಚನೆಗಳು 12ನೇ ಶತಮಾನದ ಅನುಭವ ಮಂಟಪ ಮಾದರಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕಲ್ಪನೆಗೆ ದಾರಿತೋರಿದವು,” ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶಿವಲಿಂಗಪ್ಪ ಅಷ್ಟಗಿ ಮಾತನಾಡುತ್ತಾ, “ಸಂಸ್ಥೆಯ ಸದಸ್ಯರಿಗೆ ಕಾನೂನು ಅರಿವು ಮೂಡಿಸುವ ನಿಟ್ಟಿನಲ್ಲಿ ಸಣ್ಣ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ,” ಎಂದರು.
ಸಂಸ್ಥೆಯ ಖಜಾಂಚಿ ರಾಜಗೋಪಾಲ ಭಂಡಾರಿ ಅವರು ಮಾತನಾಡಿ, “ಸರ್ವ ಜನಾಂಗದ ಹಿತಕ್ಕಾಗಿ ಅಪ್ಪಿಕೊಂಡ ಸಂವಿಧಾನ ಶ್ರೇಷ್ಠವಾಗಿದ್ದು, ನವಭಾರತದ ನಿರ್ಮಾಣ ಅಂಬೇಡ್ಕರ್ ಅವರ ಚಿಂತನೆಗಳ ಆಧಾರದಲ್ಲಿ ನಡೆಯುತ್ತಿದೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಬಸವರಾಜ ಚನ್ನಾ, ಸಮಾಜ ಸೇವಕ ಶಾಂತಕುಮಾರ ಯಳಸಂಗಿ, ದೇವಾಂಗ ಸಮಾಜದ ಅಧ್ಯಕ್ಷ ಹಣಮಂತ ಕಣ್ಣಿ, ತೊಗಟವೀರ ಸಮಾಜದ ಅಧ್ಯಕ್ಷ ಶ್ರೀನಿವಾಸ ಬಲಪೂರ್, ಛಾಯಾಗ್ರಾಹಕ ರಾಜು ಕೋಸ್ಟಿ ಹಾಗೂ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದರು.
-