ದಕ್ಷಿಣ ದೃವದಿಂ ಉತ್ತರ ದೃವಕೆ..."ಪ್ರವಾಸ ಕಥನ

ಖ್ಯಾತ ಗಜಲ್ ಲೇಖಕ ಡಾ. ಸಿದ್ದರಾಮ ಹೊನ್ಕಲ್ ಅವರ "ದಕ್ಷಿಣ ದೃವದಿಂ ಉತ್ತರ ದೃವಕೆ..."ಪ್ರವಾಸ ಕಥನಕ್ಕೆ ಮನ ಮೋಹಕ ಮುನ್ನುಡಿ ಮಾತು ಹಿರಿಯ ಗಜಲ್ ಲೇಖಕ ಶ್ರಿ ಸಂಗಮೇಶ ಬಾದವಾಡಿಗಿ.
ಯಾದಗಿರಿಯ ಕವಿ, ಸಾಹಿತಿ, ಗಜಲ್ ಕಾರರಲ್ಲದೆ, ಇತ್ತೀಚೆಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಮುಡಿಗೇರಿಸಿಕೊಂಡು, ತಮ್ಮ ಗೌರವದ ರೇಟ ಹೆಚ್ಚಿಸಿಕೊಂಡ ಶ್ರೀ ಸಿದ್ಧರಾಮ ಹೊನ್ಕಲ್‌ರವರು ಈ ಹಿಂದೆ ಕರೆಮಾಡಿ, ನಾವು, ನೀವು ಉತ್ತರ ಪ್ರದೇಶದ ರಾಜಧಾನಿ ಲಕ್ನೊಗೆ ಸಾಂಸ್ಕೃತಿಕ ಸಮ್ಮೇಳನಕ್ಕೆ ಬೇಟಿ ನೀಡಿದ್ದು, ಅದರ ಬಗ್ಗೆ ಪ್ರವಾಸ ಕಥನ ಬರೆಯುತ್ತಿರುವದಾಗಿ ತಿಳಿಸಿದ್ದರು. ಆದರೆ ಅದು ನನಗೆ ಆಶ್ಚರ್ಯನದ ಸಂಗತಿ ಎನಿಸಲಿಲ್ಲ. ಏಕೆಂದರೆ ಅವರು ಈ ಹಿಂದೆ ಪ್ರವಾಸ ಕಥನದ ಪ್ರಕಾರಕ್ಕೆ ಎಂದೋ ರಂಗಪ್ರವೇಶ ಮಾಡಿದವರು.ಹಾಗೂ ಈಗಾಗಲೇ ದೇಶ ವಿದೇಶಗಳ ಭೇಟಿಯ ಆರೇಳು ಪ್ರವಾಸ ಕಥನ ಬರೆದವರು.
ಮತ್ತೆ ಇತ್ತೀಚೆಗೆ ಅವರು ಕರೆಮಾಡಿ ಅಂದುಕೊಂಡಂತೆ ಪ್ರವಾಸ ಕಥನ ಸಿದ್ಧವಾಗಿದೆ, ತಾವು ಅದಕ್ಕೊಂದು ಮುನ್ನುಡಿ ಬರೆದುಕೊಡಿ ಎಂದು ವಿಜ್ಞಾಪಿಸಿದರು. ಈ ಮಾತು ನನಗೆ ಆಶ್ಚರ್ಯ ತಂದಿತಲ್ಲದೇ ಸ್ವಲ್ಪ ಛೇಡಿಸಿದಂತಾಯ್ತು. ಆದರೂ ಸಾವರಿಸಿಕೊಂಡು ನನ್ನನ್ನು ನಾನೇ ಪ್ರಶ್ನಿಸಿಕೊಂಡಿದ್ದು ಹೀಗೆ. ನಾನೂ ಈಗಾಗಲೇಮಪಪಶ ಅನೇಕ ನಾಡು, ಹೊರನಾಡು, ಹೊರದೇಶಗಳನ್ನು ಸುತ್ತಾಡಿಕೊಂಡು ಬಂದವ. ಅದಲ್ಲದೇ ಕೆಲ ಪ್ರವಾಸದ ಅನುಭವಗಳನ್ನು, ಮಾಹಿತಿಗಳನ್ನು ಅಂತರ್ಗತಗೊಳಿಸಿಕೊಂಡು ಒಂದೆರಡು ಪ್ರವಾಸ ಕಥನಗಳನ್ನು ಪ್ರಕಟಿಸಿದ್ದೆ. ಆ ಕಾರಣಕ್ಕಾಗಿರಬಹುದೆಂದು ಭಾವಿಸಿಕೊಂಡರು ಸಹ. ಅದು ನನ್ನ ಅನಿಸಿಕೆಯನ್ನು ಸಮರ್ಥಿಸಿಕೊಳ್ಳಲಾಗಲಿಲ್ಲ. ಏಕೆಂದರೆ ೧೯೯೬ ರಲ್ಲಿಯೇ ಹೊನ್ಕಲ್‌ರವರು *ಪಂಚ ನದಿಗಳ ನಾಡಿನಲ್ಲಿ ಪ್ರವಾಸ* ಎಂಬ ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದ್ದು ಅಲ್ಲದೇ ಅದಕ್ಕೆ ಅದೇ ಅಕಾಡೆಮಿಯ ಪುರಸ್ಕಾರದ ಪ್ರಶಸ್ತಿಯನ್ನು ಸಹ ಪಡೆದ ಹೆಗ್ಗಳಿಕೆ ಅವರದು. ಅದು ತೀರಾ ಚಿಕ್ಕ ವಯಸ್ಸಿನಲ್ಲೇ. ನನ್ನ ಮೊದಲ ಪ್ರವಾಸ ಕಥನ ೨೦೦೪ ರಲ್ಲಿ ಬಂದಿದ್ದರಿಂದ ಅವರೇ ಆ ಕ್ಷೇತ್ರದಲ್ಲಿ ನನಗಿಂತ ಸಿನಿಯರ್.’’ ಎಂಬ ಭಾವ ನನ್ನದು.
ನಮ್ಮ ಈ ಪ್ರೀತಿಯ ಹೊನ್ಕಲ್ ರು ಸುಖಾಸುಮ್ಮನೆ ಕಲ್ಲಿನಂತೆ ಕೂರುವ ಜಾಯಮಾನದವರಲ್ಲ. ಷಡ್ರಸಗಳೊಂದಿಗೆ ಪಾದರಸದಂತೆ ಚಲನಶೀಲತೆಯನ್ನು ಪಡೆದವರು. ಹೊಸತನ್ನು ಕಂಡುಕೊಳ್ಳಬೇಕು. ಅದನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಮಹತ್ವಾಕಾಂಕ್ಷೆ. ಪಾದದಲ್ಲಿ ಚಕ್ರಗಳಿವೆ. ಸುಮ್ಮನೇ ಗಾಣ ಸುತ್ತುವ ಎತ್ತಲ್ಲ. ಮನಸ್ಸು ಹರಿದೆಡೆ ನುಗ್ಗುವ ಗೂಳಿ. ಏನೇ ಎದುರಾದರೂ ಬದುವಿನಲ್ಲಿ ನಿಂತು ನೋಡಿದವರಲ್ಲ. ಎಂಥಹದೇ ಪ್ರಸಂಗವನ್ನು ಸಹ ತನ್ನ ಛಲದಿಂದ ಸಂಗಾತ ಮಾಡಿಕೊಳ್ಳಬಲ್ಲ ಮೋಡಿಗಾರ. ಆತನ ಬರಹದಲ್ಲಿ ಸೊಗಸಿದೆ, ಸೊಗಡಿದೆ, ಸೊಬಗಿದೆ. ಸ್ವಾರಸ್ಯವಿದೆ. ಆಯಸ್ಕಾಂತದಂತೆ ಎಲ್ಲರನ್ನೂ ತನ್ನೆಡೆಗೆ ಸೆಳೆಯುವ ಜಾದು ಇದೆ. ಮತ್ತೊಬ್ಬರಿಗೆ ಸಹಾಯ ಮಾಡುವ ಸಹೃದಯತೆ ಇದೆ. ಇದರಿಂದ ಗುರು, ಅಣ್ಣ, ದೋಸ್ತ ಎನ್ನುವ ಪದವಿಗಳನ್ನು ಪಡೆದರೆ, ಮಹಿಳೆಯರಲ್ಲಿ ಅಣ್ಣನಾಗಿ, ತಮ್ಮನಾಗಿ, ಅಳಿಯನಾಗಿ,ತಂದೆಯಾಗಿ, ಮಾವನಾಗಿ, ಸ್ನೇಹಿತನಾಗಿದ್ದಾನೆ.
ನಾವೆಷ್ಟೇ ತಮಾಷೆ ಮಾಡಿ ಮಾತನಾಡಿದರು ಖುಷಿಯಿಂದ ನಗುವ ಉದಾರ ಮನಸ್ಸಿನ ಸ್ವಭಾವ ಅವರದು.ಕಾದಂಬರಿ ಒಂದು ಹೊರತು ಪಡಿಸಿ ಎಲ್ಲಾ ಪ್ರಕಾರದಲ್ಲಿ ಕೃಷಿ ಮಾಡಿ ಎಪ್ಪತೈದಕಿಂತ ಹೆಚ್ಚು ಕೃತಿ ಪ್ರಕಟಿಸಿದ ಕ.ಕ.ದಲ್ಲಿ ಗಂಭೀರವಾಗಿ ಪರಿಗಣಿಸಬಹುದಾದ ಕೆಲವೇ ಲೇಖಕರಲ್ಲಿ ಇವರು ಒಬ್ಬರೆಂಬ ಹೆಮ್ಮೆ ನಮ್ಮದು.ನಮ್ಮಿರ್ವರ ಮಾತುಗಳು ಸದಾ ತಮಾಷೆಯಿಂದಲೇ ಪ್ರಾರಂಭವಾಗಿ ತಮಾಷೆಯಲ್ಲಿಯೇ ಮುಗಿತವೆ.ನೀವು ರಾಜಧಾನಿಯಲ್ಲಿರೋರು.ನಾನು ಹಳ್ಳಿಗಾಡಿನಲ್ಲಿರುವವ ಸರ್. ನೀವು ಅಕಾಡೆಮಿ, ಪರಿಷತ್ ಎಲ್ಲಾ ಕಡೆ ಮಾಡಿ ಬಿಟ್ಟಿದ್ದೆ ಈಗ ನಾವು ಕಲಿತಾ ಇದ್ದಿವಿ. ನಾನು ಎತ್ತಿಕೊಂಡವರ ಕೈಗೂಸು, ನಿಮ್ಮ ಸಲಹೆ ಸಹಕಾರ ಇರಲಿ ಎಂದೇ ಎಲ್ಲರಿಗೂ ಗೌರವಿಸಿ ಮಾತಾಡುವ ವಿನಯತೆ ಇವರದು.
*ಕೂತು ಕೆಟ್ಟವರಿಲ್ಲ, ತಿರುಗಿ ಕೆಟ್ಟವರಿಲ್ಲ* ವೆನ್ನುವ ಹಾಗೆ ಮೊಬೈಲ್ ತೆಗೆದರೆ ಸಾಕು, ನನ್ನ ನಡೆ ಕಲ್ಬುರ್ಗಿಯ ಕಡೆಗೆ, ಬೆಂಗಳೂರೋ, ಕೊಪ್ಪಳವೊ, ಹೀಗೆ ಆ ಕಡೆ ಎಂದು ಕಾರಿನ ಕಿಡಕಿ ಮೂಲಕ ಗೋಣು ಹಾಕಿ ಕೈಬೀಸುತ್ತಾರೆ. ಬಾಗಿಲಿಗೆ ಬೀಗ ಜಡಿದು ಹೆಗಲಿಗೆ ಬ್ಯಾಗ ನೇತಾಡಿಸಿ, ಟಿಪಟಾಪ್ ಡ್ರೆಸ್ಸಿಗೆ ಸೇಂಟು (ಅತ್ತರ) ಸವರಿಕೊಂಡು ಹೊಂಟೆನೋ ಮಾರಾಯ ಅಂದ್ರ ಸವರಸೋದು ಎಷ್ಟೊತ್ತು ಅಂತ ಎದ್ದು ಬಿಡ್ತಾರೆ, ಅದು ಅವರ ಸ್ಪೇಷಾಲಿಟಿ. ಇದು ನಾಡಿನ ಒಳಗೂ, ಹೊರಗೂ, ದೇಶದ ಒಳಗೂ ಹೊರ ದೇಶಕ್ಕೆ ಆದರೂ ಅಷ್ಟೇ.
ಸಿದ್ಧರಾಮ ಹೊನ್ಕಲ್‌ರವರು ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಕೃಷಿ ಮಾಡಿದ್ದರೂ ಇತ್ತೀಚೆಗೆ ಆತ `*ಗಜಲ್’ ಸಾಹಿತ್ಯದ ಬ್ರಾಡ್ ಅಂಬಾಸಿಡರ್* ಆಗಿ ಬೆಳೆಯುತ್ತಿದ್ದಾರೆ. ಮತ್ಲಾ, ಮಕ್ತಾ, ರದೀಪ, ಕಾಫಿಯಾಗಳಲ್ಲಿ, ಕೈಯಾಡಿಸಿ ಅನೇಕ ಹೊಸ ಹೊಸ ಗಜಲ್‌ಕಾರರನ್ನು ಸೃಷ್ಟಿಸುವಲ್ಲಿ ಮತ್ತು ಅದರ ಪಟ್ಟು ಕಲಿಸುವ ಜಟ್ಟಿಯಾಗಿದ್ದಾರೆ. ಇವರು ಗಜಲ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಾಗಿನಿಂದ ಎಲ್ಲೆಡೇ ಈಗ ಇವರದೇ ಹೆಸರು. ಅದು ತಮ್ಮ ಅಪಾರ ಗಜಲ್ ಕೃತಿಗಳ ಸಾಧನೆ ಮೂಲಕ ಮತ್ತು ಗಜಲ್ ಕ್ಷೇತ್ರಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ಒಂದು ಗಜಲ್ ಗೆ ಆದ ನಾಡೋಜ ಶಾಂತರಸರ ಹೆಸರಿನಲ್ಲಿ ಪುರಸ್ಕಾರ ಸ್ಥಾಪಿಸುವ ಮೂಲಕ ತಮ್ಮ ಅಕಾಡೆಮಿ ಸದಸ್ಯತ್ವಕ್ಕೆ ಸಾರ್ಥಕತೆ ತಂದುಕೊಂಡರು. ಇದು ಗಜಲ್ ಕ್ಷೇತ್ರಕ್ಕೆ ಎಂದು ಮರೆಯಲಾಗದ ಕೊಡುಗೆ ಇವರದು.
ಲಕ್ನೊ ದ ಕನ್ನಡ ಸಂಘ ಮತ್ತು ಮಂಗಳೂರಿನ ಹೃದಯವಾಹಿನಿಯವರು ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನದ ಸಮಾರಂಭವನ್ನು ಆಯೋಜಿಸಿದ್ದರು.ನಾನು ಆ ಸಮ್ಮೇಳನದ ಸರ್ವಾಧ್ಯಕ್ಷನಾಗಿದ್ದೆ. ಅದಕ್ಕಿಂತ ಮೊದಲು ನಾನು ನನ್ನ ಗೆಳೆಯರ ದಂಡಿನೊಂದಿಗೆ ಒಂದು ವಾರ ಕಾಲ ``ಅಂಡಮಾನ ನಿಕೋಬಾರಕ್ಕೆ ಪ್ರವಾಸ ಹೊರಟಾಗ ಸಿದ್ಧರಾಮ ಹೊನ್ಕಲ್ ರವರು ನಮ್ಮ ಜೊತೆಗೂಡುವ ಆಸೆಯಿಂದ ತಾವೂ ಬರುವ ಪ್ರಸ್ತಾವನೆ ಇಟ್ಟಿದ್ದರು. ಅದು ಸಮಯಾಭಾವದಿಂದ ಕೈಗೂಡಲಿಲ್ಲ. ಆದುದರಿಂದ ಈ ಸಮ್ಮೇಳನಕ್ಕಾದರೂ ನಮ್ಮೊಡನೆ ಲಕ್ನೊಗೆ ಬರಲಿ ಎಂಬ ಕಾರಣದಿಂದ ಅವರಿಗೆ ಕರೆ ಮಾಡಿ ನೀವು ಬರುವದಾದರೆ, ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ಅಥವಾ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರ ಬದುಕು, ಬರಹ ಕುರಿತು ಮಾತನಾಡಲು ಬಂದರೆ ಮುಖ್ಯ ವೇದಿಕೆಯಲ್ಲಿ ನೀವಿರುತ್ತೀರಿ, ಬನ್ನಿ ಅಲ್ಲದೇ ಅಯೋಧ್ಯೆಯ ಶ್ರೀರಾಮನ ದರ್ಶನದ ವ್ಯವಸ್ಥೆ ಇದೆ ಎಂದೇಳಿದ್ದೇ.
“ಅವರು ಸರ್, ಶ್ರೀರಾಮನ ದರ್ಶನಕ್ಕಿಂತ ನಿಮ್ಮ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸುವದೇ ಸಂತೋಷವೆಂದೆನ್ನುತ್ತಾ, ವಿಮಾನ ಏರಿಯೇಬಿಟ್ಟರು. ವಿಮಾನ ಹಾರಾಟದಲ್ಲಿ ಕಂಡು ಬಂದ ಆತಂಕದ ಸನ್ನಿವೇಶಗಳು ಈ ಕಥಾನಕದಲ್ಲಿ ಕಾಣಿಸಿವೆ.’’
ಪ್ರವಾಸ ಎನ್ನುವದು ಮೈಮನಗಳನ್ನು, ಮುದಗೊಳಿಸುವ ಹುರಿಗೊಳಿಸುವ, ಹುರುಪುಗೊಳಿಸುವ ಸಂಜೀವಿನಿ. ಒಂದಷ್ಟು, ಮನಸ್ಸಿಗೆ ಚೇತೋಹಾರಿ, ಆನಂದದಾಯಕ ಕ್ಷಣಗಳನ್ನು ಕಟ್ಟಿಕೊಡುತ್ತದೆ. ಅನುಭವ ದ್ರವ್ಯಕ್ಕೆ ರಸಾಯನ ಒದಗಿಸುತ್ತದೆ.
ಅಪೂರ್ವ ತಾಣಗಳ ವೀಕ್ಷಣೆ, ಅಲ್ಲಿ ಸಂಸ್ಕೃತಿ, ಇತಿಹಾಸ ಪರಂಪರೆ, ನೈಪುಣ್ಯದ ಕಲಾಕೃತಿಗಳು, ಕಥಾ ವೈಭವಗಳು, ಸುಂದರ ಹಸಿರು ಹರಿದ್ವರ್ಣದ ಸೊಬಗು, ವನ್ಯ ಜೀವಿಗಳ ವಿಸ್ಮಯ, ಜೊತೆಗೆ ಒಂದಿಷ್ಟು ಮೋಜು, ಮಸ್ತಿಯ ಪ್ರಸಂಗಗಳು ಜಡತ್ವಕ್ಕೊಂದು ಚೈತನ್ಯ ತರುತ್ತದೆ. ``ಇರುವದೆಲ್ಲವ ಬಿಟ್ಟು ಇರದುದೆಡೆಗೆ ನಡಿಯುವ ಮನಸ್ಸನ್ನು ಅದರ ಸೆಳೆತಕ್ಕೆ ಒಪ್ಪಿಸಬೇಕು.’’ ಇತ್ತೀಚೆಗೆ ನಡೆದ ವಿಮಾನ ದುರಂತ, ಪ್ರವಾಹ, ಕಾಲ್ತುಳಿತ, ಪಹಲ್ಗಾಮ ದಾಳಿಗಳಿಂದ ಪ್ರವಾಸಿ ಪ್ರಪಂಚಕ್ಕೆ ಆಘಾತ ತಂದಿದ್ದರೂ, ತುಡಿವ ಮನಸ್ಸಿಗೆ ಬ್ರೇಕ್ ಬಿದ್ದಿಲ್ಲ. ಆದರೂ ಸುರಕ್ಷತೆಯು ಪ್ರವಾಸಿತನದ ಒಂದು ಭಾಗವಾಗಿ ಎಚ್ಚರಿಕೆ ವಹಿಸುವದು ಸೂಕ್ತ.
ಇಲ್ಲಿ ಹೊನ್ಕಲ್‌ರ ಕೃತಿಯನ್ನು ಅವಲೋಕಿಸಿದಾಗ, ಇದನ್ನು ಎರಡು ಭಾಗವಾಗಿ ಓದಬಹುದು. ಒಂದು ಸಾಹಿತ್ಯ, ಸಂಸ್ಕೃತಿ, ಸಮಾವೇಶ ಹಿನ್ನೆಲೆಯಲ್ಲಿ ಕಥಾನಕವಿದ್ದರೆ, ಇದನ್ನು ಸಾಹಿತ್ಯ ಪ್ರವಾಸೋದ್ಯಮವೆಂದು ಕರೆಯಬಹುದು. ಇನ್ನರ್ಧ ಭಾಗ ಅವರು, ಕಾಶಿ, ಅಯೋಧ್ಯ ಇತ್ಯಾದಿ ಸ್ಥಳಗಳ ಬಗ್ಗೆ ಇರುವದರಿಂದ ಧಾರ್ಮಿಕ ಪ್ರವಾಸೋದ್ಯಮವೆಂದು ಹೆಸರಿಸಬಹುದು. ಆದರೆ ಎರಡನೇ ಭಾಗ ಪ್ರವಾಸ ಕಥನದ ಜೊತೆ ಜೊತೆಯಲಿ ಸ್ಥಳ ಪರಿಚಯದ ಬಗ್ಗೆಯೂ ಸ್ವಲ್ಪ ಸಮಯ ನೀಡಿದೆ.
ಲಕ್ನೊ ಪ್ರವಾಸ, ಸಾಂಸ್ಕೃತಿಕ ಹಿನ್ನೆಲೆಯಲ್ಲಿದ್ದುದರಿಂದ ನಮ್ಮವರೇ ಅಲ್ಲಿಗೆ ಹೋಗಿ ಉದ್ಯೋಗ, ವಸತಿ, ಇತರೇ ಕಾರಣದಿಂದ ಅಲ್ಲಿನವರ ಜೊತೆ ಒಂದಾಗಿದ್ದರೂ ಸಹ, ತಮ್ಮತನ ಮರೆಯದೇ ಕನ್ನಡದ ಸಂಸ್ಕೃತಿ, ಕಲೆ, ಭಾಷೆಗಳು ಮರವಿಗೆ ಹೋಗದಂತೆ ಕಾಪಿಟ್ಟುಕೊಂಡು ಬದುಕುತ್ತಿದ್ದಾರೆ. ಅವರೆಲ್ಲರನ್ನು ಅಲ್ಲಿ ಕಂಡಾಗ, ಅವರ ಜೀವನಕ್ರಮ ಬದಲಾಗಿರಬಹುದು. ಬದುಕು ಬದಲಾಗಿಲ್ಲ. ಅಲ್ಲಿ ಬದುಕು ಬದಲಾಗುವುದಿಲ್ಲ. ಕನ್ನಡಿಗರೆಂದೂ ಸನ್ನಿವೇಶಗಳಿಗೆ ತಕ್ಕಂತೆ ಬದಲಾಗುವವರಲ್ಲ. ಬದಲಾಗುವದಿಲ್ಲ. ಎಲ್ಲಗೋ ಹೋಗಿ ನೆಲೆಸಿದರೂ, ಅವರ ನುಡಿ ಬದಲಾಗುವದಿಲ್ಲ. ಭಾಷೆ ಬದಲಾಗುವದಿಲ್ಲ. ಅಡುಗೆ ಮನೆ ಆಹಾರ ಸಂಸ್ಕೃತಿ ಬದಲಾಗುವದಿಲ್ಲ. ಹಬ್ಬ, ಹರಿದಿನಗಳು ಮರೆಯಾಗಲ್ಲ, ನಗರದಲ್ಲಿ ಎಲ್ಲರೂ ಒಂದೆಡೆ ಸೇರಿ ಸಾಂಸ್ಕೃತಿಕತೆಯ ಪರಂಪರೆಯೊಂದಿಗೆ ಸಹೃದಯತೆಯನ್ನು ಹಂಚಿಕೊಳ್ಳುತ್ತಾರೆ. ಇದಕ್ಕೆ ಲಕ್ನೊ ಕನ್ನಡಿಗರು ಹೊರತಾಗಿಲ್ಲ. ಇದನ್ನೇ ಹೊನ್ಕಲ್ ರು ತಮ್ಮ ಈ ಕಥನದಲ್ಲಿ ವಿವರಿಸಿದ್ದಾರೆ. ಹಾಗೆ ಈ ಸಮಾಗಮ, ಕಲಾತಂಡಗಳ ಪ್ರದರ್ಶನ, ಊಟೋಪಚಾರ, ವಾಸ್ತವ್ಯದ ಅನುಕೂಲ ಆನಾನುಕೂಲಗಳನ್ನು ತಮ್ಮದೆ ಆದ ಧಾಟಿಯಲ್ಲಿ ಬರೆದಿದ್ದಾರೆ.
ಲಕ್ನೊ ಒಂದು ಐತಿಹಾಸಿಕ ಶಕ್ತಿಯೊಂದಿಗೆ, ಸಾಂಸ್ಕೃತಿಕ, ಧಾರ್ಮಿಕ ಪಾರಮ್ಯ ಮೆರೆದಿರುವ ನಗರ, ಒಂದು ಕಾಲಕ್ಕೆ ಹಿಂದೆ ಭಯ, ಕಾನೂನು ಅವ್ಯವಸ್ಥೆಯ ನಾಡೆಂದು ಕರೆಯುತ್ತಿದ್ದರು. ಈಗ ಅದು ತಹಬಂದಿಗೆ ಬಂದಿದೆ. ಲಕ್ನೊ ನವಾಬಿನಗರವೆಂದು ಕರೆಸಿಕೊಳ್ಳುತ್ತಿದ್ದು ನವಾಬರು ಕಟ್ಟಿಸಿದ ಪಾರಂಪರಿಕ ಕಟ್ಟಡಗಳಿದ್ದು, ಅಂದಿನ ಆಳರಸರ ನೆನಪಿನ ಮಹಲುಗಳು, ಮಸೀದಿಗಳಿವೆ. ಇವನ್ನು ಅವುಗಳ ಹಿನ್ನೆಲೆ ಆಧರಿಸಿ ಅದರ ಮಹತ್ವ ವಿವರಿಸಿದ್ದಾರೆ. ಲಕ್ನೊದಲ್ಲಿ ಅತಿ ಪ್ರಸಿದ್ಧ ಸ್ಥಳವೆಂದರೆ ಉತ್ತರ ಪ್ರದೇಶದ ಅಂದಿನ ಮುಖ್ಯಮಂತ್ರಿ ಮಾಯಾವತಿ ನಿರ್ಮಿಸಿದ ಡಾ. ಅಂಬೇಡ್ಕರವರ ಪಾರ್ಕು. ಅಲ್ಲಿ ಅವರ ಜೀವನ ಗಾಥೆಯ ಎಲ್ಲ ಮುಖಗಳನ್ನು ದರ್ಶಿಸುವ ಹಾಗೆ ನಿರ್ಮಿಸಿದ್ದಾರೆ. ಅಲ್ಲಿ ಕಲ್ಲಿನ ಆನೆಗಳ ಸಮೂಹಗಳನ್ನು ಇರಿಸಲಾಗಿದೆ.
ಒಟ್ಟಿನಲ್ಲಿ ನಾವು, ಹೊನ್ಕಲ್ ಅವರು ಹಾಗೂ ಇನ್ನೊಬ್ಬ ಸ್ನೇಹಿತ ಬಂಗಾರಶೆಟ್ಟರ ಒಡನಾಟದಲ್ಲಿ ಲಕ್ನೊ ಸುತ್ತಿದ್ದು, ಪ್ರಸಿದ್ಧ ಚಿಕಣಿ ಬಟ್ಟೆ ಖರೀದಿ, ಹೊನ್ಕಲ್ ರು ಅಲ್ಲಿನ ಫೇಮಸ್ ಚಿಕನ್ ಸವಿದಿದ್ದು ಎಲ್ಲವನ್ನು ದಾಖಲಿಸಿ, ಮಾರ್ಗದರ್ಶನ ಮಾಡಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ, ಅಲ್ಲಿನ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಬಾಬು ಕೆಂಚಪ್ಪನವರ ಹಾಗೂ ಸಂಘದ ಪದಾಧಿಕಾರಿಗಳವರ ಆತಿಥ್ಯ ಸತ್ಕಾರ, ಆದರದಿಂದ ನಮ್ಮನ್ನು ಕಂಡದ್ದು ಮರೆಯಲಾರದಂತಹುದು.
ಇನ್ನುಳಿದ ಅರ್ಧಭಾಗ ಅವರ ಪತ್ನಿಯ ಒತ್ತಾಸೆಗೆ ಅಯೋಧ್ಯೆ, ಕಾಶಿ, ದೆಹಲಿ,ಶಿರಡಿ, ತಿರುಪತಿ ಸಂದರ್ಶಿಸಿ ಬರೆದಿದ್ದಾರೆ. ಇದು ಕನ್ನಡದೊಳ್ ಭಾವಿಸಿದ ಜನಪದವೆನ್ನುವುದನ್ನು ಓದುಗರು ನಿರ್ಧರಿಸಬೇಕು.
*ಸಂಗಮೇಶ ಬಾದವಾಡಗಿ*
ಹಿರಿಯ ಲೇಖಕರು ಹಾಗೂ ವಿಶ್ರಾಂತ ಕಸಾಪ ಗೌರವ ಕಾರ್ಯದರ್ಶಿಗಳು,ಕೇ.ಕ.ಸಾ.ಪ., ನಿಕಟಪೂರ್ವ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು ಬೆಂಗಳೂರು.