"ಇಬ್ಬನಿ” (ಹನಿಗವನ )ಸಿದ್ದರಾಮ ರಾಜಮಾನೆ

ಕವಿ ಸಿದ್ದರಾಮ ರಾಜಮಾನೆ ಅವರ ಚುಟುಕುಗಳ ಪ್ರಥಮ ಸಂಕಲನದ ಶೀರ್ಷಿಕೆ "ಇಬ್ಬನಿ”
"ಇಬ್ಬನಿ” ರಾತ್ರಿಯ ಕನಸಿನ ಕೊಡುಗೆ. ಇಬ್ಬನಿಯು ಗರಿಕೆಯ ಎಸಳಿನ ತಲೆಯ ಮೇಲೆ ಕುಳಿತು, ಗರಿಕೆಯ ಪಾಲಿನ ಕಿರೀಟವಾಗಿ ಕಂಗೊಳಿಸುತ್ತದೆ. 'ಗರಿಕೆ' ಸಸ್ಯ ಸಂಕುಲದಲ್ಲಿ ಉಪೇಕ್ಷಿತವಾದ ಪ್ರಬೇದ. ಅಂತೆಯೇ ಇಬ್ಬನಿಯು ಸಹ ಪ್ರವಾಹವಾಗಿ ಹರಿದಾಡುವ ನೀರಲ್ಲ. ಮಿಂಚು-ಗುಡುಗುಗಳಿಂದ ಆರ್ಭಟಿಸಿ ಬೀಳುವ ಮಳೆಯಲ್ಲ. ಕಮಲದ ದಳದ ಮೇಲೆ ಗರಿಕೆಯ ತಲೆಯ ಮೇಲೆ ಆಪ್ತವಾಗಿ ಆವಿರ್ಭರಿಸುವ ನೀರಿನ ಸೂಕ್ಷ್ಮ ಅಂಶ. ಝಳಪಿಸುವ ಸೂರ್ಯನನ್ನು ಕಂಡರೆ ಸಾಕು ಈ ಇಬ್ಬನಿ ತಲೆಮರೆಸಿಕೊಳ್ಳುತ್ತದೆ. ಇದರ ಗೆಳೆತನ ಏನಿದ್ದರೂ ತಾರೆಗಳ ಒಟ್ಟಿಗೆ, ಚಂದ್ರನ ಜೊತೆಗೆ.
ಅಂದರೆ, ಇಲ್ಲಿ ಉಪೇಕ್ಷಿತ ವರ್ಗಕ್ಕೆ ಸೇರಿದ "ಇಬ್ಬನಿ" ಹಾಗೂ “ಗರಿಕೆ" ಗಳ ಸಮಾಗಮ ಎಂದೇ ತಿಳಿಯಬೇಕು. ಸೂರ್ಯನ ಆಗಮನದ ಪ್ರಖರತೆಗೆ ವಿನಯದಿಂದ ಪಕ್ಕಕ್ಕೆ ಸರಿಯುವ ಇಬ್ಬನಿ ಮತ್ತೆ ಮುಂಜಾವಿನಲ್ಲಿ ಪ್ರತ್ಯಕ್ಷವಾಗಿ ನಿಲ್ಲುತ್ತದೆ. ಇದು ನಿಸರ್ಗದ ಸಮಾನತೆಯ ಧರ್ಮ. ಅಂದ ಹಾಗೆ ಇಬ್ಬನಿಯನ್ನು ನೀರಿನ ತಣಿಸುವ ಗುಣವಿದೆ. ಕಿರಿದಾದ ಗರಿಕೆಯಲ್ಲೂ ಜೀವ ಚೈತನ್ಯದ ಸೆಲೆಯಿದೆ.
ಇದೇ ಮಾತು “ಚುಟುಕು" – "ಹನಿಗವಿತೆ" ಗಳಿಗೂ ಅನ್ವಯವಾಗುತ್ತವೆ. "ಇಬ್ಬನಿ" ಶೀರ್ಷಿಕೆಯ ಬಗೆಗಿನ ಲಹರಿ ಅದೆಷ್ಟು ಸುಂದರವಾಗಿ ಮುಂದುವರೆಯುತ್ತದೆ. ಇನ್ನೂ, ಸಿದ್ಧರಾಮ ರಾಜಮಾನೆ ಅವರ ಕಾವ್ಯನಾಮ
ಸಿರಾ". ಸಿರಾ ಎಂದರೆ ಎಲ್ಲರ ಬಾಯಿಯಲ್ಲೂ ನೀರುರೂತ್ತದೆ. ಅದು ಸಿಹಿಯಾದ, ರುಚಿಯಾದ ಖಾದ್ಯ ಸಹಜವಾಗಿ ಎಂತಹ ಸಿಹಿಯಾದ ಕಾವ್ಯನಾಮ ಕವಿಯ ಪಾಲಿಗೆ ದಕ್ಕಿದೆ ಎಂಬುದೇ ಸಂತೋಷ.
ಅವರ ಕಾವ್ಯದಲ್ಲಿ ಇರಬಹುದಾದ ಸಿರಾವನ್ನು ಸವಿಯಲು ನಾನು ಕಾತುರ ಮತ್ತು ಕುತೂಹಲಗಳಿಂದ ಗಮನಿಸುತ್ತಿದ್ದೇನೆ.
ಪರಿಚಯ
ನಾನು
ಯಾರಿಗೂ ಅಲ್ಲ
ಖಾರ
ನಿಮ್ಮ
ಪ್ರೀತಿಯ
ಸಿರಾ
“ಸಿರಾ” ಎಂದೇ ತಮ್ಮ ಕಾವ್ಯಧಾರೆಯನ್ನು ಪ್ರಾರಂಭಿಸಿದ್ದಾರೆ. "ಚುಟುಕು" ಎಂದರೆ ಅಲ್ಲಿ ಹಾಸ್ಯ, ವಿಡಂಬನೆ, ಕುಟುಕು, ಇರಲೇಬೇಕು. ಅದು ಸಹೃದಯನ ನಿರೀಕ್ಷೆವೂ ಆಗಿರುತ್ತದೆ.
ಸ್ಥಾ(ಮಾ)ನ
ಮಹಿಳೆಗೆ
ನೀಡುತ್ತಿದ್ದಾರೆ
"ಸ್ಥಾನ"
ಕಳೆಯುತ್ತಲೇ
ಇದ್ದಾರೆ
“ಮಾನ”
"ಮಾನ". ಮಹಿಳೆಯರನ್ನು ಶೋಷಿಸಬಾರದು, ಆಕೆಯನ್ನು ಅಬಲೆಯಾಗಿ ಕಾಣಬಾರದು. ಎಲ್ಲಾ ರೀತಿಯಲ್ಲೂ ಸಮಾನಳು ಎಂಬ ಘೋಷಣೆಗಳು ಮೊಳಗುತ್ತವೆ. ಏಕ ಕಾಲದಲ್ಲಿ ಅತ್ಯಾಚಾರ, ಆಕ್ರಮಣಗಳು
ಪರಿಸ್ಥಿತಿ
ಸ್ವಾಮೀಜಿ,
ರಾಜಕಾರಣಿಗಳಿಗೆ
ಚಿನ್ನದ ಕಿರೀಟ
ಬಡವರಿಗೆ
ಸಿಗುತ್ತಿಲ್ಲ
ತೆಂಗಿನ ಕರಟ
ಎಲ್ಲವನ್ನೂ ತ್ಯಜಿಸುವ ಸ್ವಾಮಿಜಿಗಳಿಗೆ ಸಮಾಜ ಸೇವೆ - ಈಶ ಸೇವೆ ಎನ್ನುವ ರಾಜಕಾರಣಿಗಳಿಗೆ ಚಿನ್ನ - ಬೆಳ್ಳಿಯ ಕಿರೀಟಗಳನ್ನು ತೊಡಿಸುವ ಕ್ರಮ ಎಷ್ಟು ಸಮಂಜಸ ! ಎಂಬ ಇಲ್ಲಿನ ಧ್ವನಿ ಅರ್ಥಗರ್ಭಿತವಾಗಿದೆ
ತಿನ್ನಲು ತಟ್ಟೆ, ಕನಿಷ್ಠ ಕರಟವನ್ನು ಕಾಣದ ಕಡು ಬಡತನದ ಮುಂದೆ ಚಿನ್ನ - ಬೆಳ್ಳಿಯನ್ನು ತಲೆಯ ಮೇಲೆ ಹೊತ್ತು ಕೂರುವುದು ಅದೆಷ್ಟು ಸಮಂಜಸ ಎಂಬ ಪ್ರಶ್ನೆ ಮನಕಲಕುತ್ತದೆ. ಉಳ್ಳವರು ಇಲ್ಲದವರನ್ನು ಕಂಡು ಅಣಕಿಸುವ ಪ್ರವೃತ್ತಿಯಂತೆ ಕಾಣುತ್ತದೆ. ಒಂದು ಉತ್ತಮ ಧ್ವನಿಯುಳ್ಳ ಚುಟುಕು ಇದಾಗಿದೆ.
ಪ್ರಕೃತಿ, ಕರ್ತೃ-ಕೃತಿ, ಪ್ರಮಾಣ, ಕಾರ್ಯ ಇಂತಹ ಹಲವಾರು ಉತ್ತಮ ಚುಟುಕುಗಳು ಈ ಸಂಕಲನದಲ್ಲಿರುವದು ವಿಶೇಷ. ಲೋಕದ ಡೊಂಕುಗಳನ್ನು ಕವಿ ಎತ್ತಿ ತೋರಿಸಲೇಬೇಕು, ಅವು ಜನಜಾಗೃತಿಗೆ ಪೂರಕವಾಗಿ ನಿಲ್ಲಬೇಕು.
ಸಮಾಜದ ಮುಂದೆ ಕಣ್ಣುಗಳನ್ನು ತೆರೆದು ಜಾಗೃತವಾಗಿ ಕಾಯುತ್ತಿರುವ ಕವಿ ಸಿದ್ಧರಾಮ ರಾಜಮಾನೆ ಅವರಿಗೆ ಬೇಕಾದ ಕವಿತೆಯ ವಸ್ತುಗಳು ವಿಫುಲವಾಗಿ ಸಿಗುತ್ತಿರಲಿ. ಅವರ ಕಾವ್ಯ ಕೃಷಿ ನಿರಂತರವಾಗಿ ಸಾಗಲಿ
-ಜರಗನಹಳ್ಳಿ ಶಿವಶಂಕರ್
'ಇಬ್ಬನಿ" ಹನಿಗವನ ಸಂಕಲನ ,
ಲೇಖಕರು ಸಿದ್ದರಾಮ ರಾಜಮಾನೆ,
ಪ್ರಕಾಶಕರು, ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ಕಲಬುರಗಿ,ಪ್ರಥಮ ಮುದ್ರಣ -2022
ಪುಟಗಳು-116
ಬೆಲೆ-120
Isbn-978-93-91650-01-8