ವಸಂತದೂತ' ಪುಸ್ತಕ ವಿಮರ್ಶೆ
ಪರಿಸರ ಕಾಳಜಿ ಹೊತ್ತ 'ವಸಂತದೂತ'ನ ಅಳಲು ಆಲಿಸೋಣ ಬನ್ನಿ
ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ೨೦ನೆಯ ಶತಮಾನ ಅತ್ಯಂತ ವಿಶಿಷ್ಟವಾದದ್ದು. ಈ ಸಂದರ್ಭದಲ್ಲಿ ಮಹಾಕಾವ್ಯ, ಭಾವಗೀತೆ, ಸಣ್ಣಕತೆ, ಕಾದಂಬರಿ, ಪ್ರಬಂಧ, ನಾಟಕ, ವಿಚಾರಸಾಹಿತ್ಯ ಮೊದಲಾದವುಗಳನ್ನು ಮೈಗೂಡಿಸಿಕೊಂಡು ಕನ್ನಡ ಸಾಹಿತ್ಯ ಸಮೃದ್ಧವಾಗಿ ಬೆಳೆದಿದೆ. ಇವುಗಳಲ್ಲಿ 'ಮಕ್ಕಳ ಸಾಹಿತ್ಯ'ವೂ ಒಂದು. ಈ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಹೋದರ ರಾಜು ಪವಾರ ಅವರು 'ವಸಂತದೂತ' ಎಂಬ ಗೀತಾನಾಟಕದ ಮೂಲಕ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ರಾಜು ಪವಾರ ನಮ್ಮ ಬೀದರ ತಾಲೂಕಿನ ಚಿಲ್ಲರ್ಗಿ ಗ್ರಾಮದ ಹುಡುಗ. ಕ್ರಿ.ಶ 2001 ಎಪ್ರಿಲ್ 02 ರಂದು ರಂಗಾಬಾಯಿ ಮಾರುತಿ ಪವಾರ ಎಂಬ ಬಡ ದಂಪತಿಗಳ ಪುಣ್ಯ ಉದ್ಧಾರದಲ್ಲಿ ಜನಿಸಿದನು. ಹೊಲದಲ್ಲಿ ದುಡಿದರೆ ಮಾತ್ರ ಹೊಟ್ಟೆಗೆ ಹಿಟ್ಟು ಎಂಬುವಂತ ಕಡುಬಡತನದ ಪರಿಸ್ಥಿತಿಯಲ್ಲಿಯೂ ತನ್ನ ಸಾಹಿತ್ಯ ಸೇವೆಯನ್ನು ನಿರಂತರವಾಗಿ ಮಾಡುತ್ತಿರುವ ನಮ್ಮ ಜಿಲ್ಲೆಯ ಒಬ್ಬ ಗಟ್ಟಿ ಬರಹಗಾರ. ವಯಸ್ಸಲ್ಲಿ ನನಗಿಂತ ಐದು ವರ್ಷ ಚಿಕ್ಕವನು, ಆದರೆ ಬುದ್ಧಿಯಲ್ಲಿ ನನಗಿಂತ ತುಂಬಾ ದೊಡ್ಡವನು. ಸರಳ ಜೀವನ ಸಮೃದ್ಧಿ ಮನಸ್ಸು ಎಲ್ಲರನ್ನೂ ಗೌರವದಿಂದ ಕಾಣುವ ಹಸನ್ಮುಖಿ ಯುವಕ.
ಪ್ರಸ್ತುತ ವಸಂತದೂತ ಮಕ್ಕಳ ಗೀತನಾಟಕ ಐದು ಸಣ್ಣ ಸಣ್ಣ ದೃಶ್ಯ ಒಳಗೊಂಡ ಒಂಬತ್ತು ಪಾತ್ರಗಳಿಂದ ಕೂಡಿದ ಪರಿಸರ ಕಾಳಜಿಯುಳ್ಳ ಒಂದು ಮೌಲ್ಯಯುತವಾದ ಕೃತಿ.
ಮಾನವ ತನ್ನ ಸ್ವಾರ್ಥದಿಂದಾಗಿ ಪ್ರಕೃತಿಯ ಸಿರಿ ಮಡಿಲಿಗೆ ಕೊಡಲಿ ಬೀಸಿ ಬರಡು ಭೂಮಿಯನ್ನಾಗಿ ಮಾಡುತ್ತಿದ್ದಾನೆ. ತನ್ನ ಐಷಾರಾಮಿಯ ಜೀವನ ಕೋಸ್ಕರ ಹಕ್ಕಿ ಪಕ್ಷಿಗಳ ಅವನತಿಗೆ ಕಾರಣನಾಗುತ್ತಿದ್ದಾನೆ. ಅನೇಕ ಹಕ್ಕಿಗಳು ಅಳಿವಿನಂಚಿಗೆ ಬಂದು ನಿಂತಿವೆ. ಕಾಡೆ ಇಲ್ಲದ ಮೇಲೆ ಕಾಡನ್ನೆ ಅವಲಂಬಿಸಿದ ಕೋಟ್ಯಾನುಕೋಟಿ ಜೀವರಾಶಿಗಳು ಏನಾಗಬೇಕು.? ಎಂಬ ಇತ್ಯಾದಿ ಹಲವಾರು ಪ್ರಕೃತಿಯ ಅಳಲನ್ನು ಈ ಗೀತನಾಟಕವು ತೆರೆದಿಡುವುದಷ್ಟೇ ಅಲ್ಲದೆ, ಮಾನವನಿಗೆ ಪರಿವರ್ತನೆಗೊಳಿಸಿ ಇದಕ್ಕೆ ಪರಿಹಾರದ ಮಾರ್ಗ ಸಹ ಸೂಚಿಸುತ್ತದೆ.
ನಾಟಕದ ಕಥಾ ಹಂದರ, ಶಬ್ದ ಅಲಂಕಾರ ಎಲ್ಲವು ತುಂಬಾ ಉತ್ಕೃಷ್ಟದಿಂದ ಕೂಡಿವೆ. ವಸಂತ ಋತುವಿನಲ್ಲಿ ಬಾಲಕ ಗದ್ದೆಯಲ್ಲಿ ಸುತ್ತಾಡುತ್ತಾ ಮಾಮರದ ಮೇಲೆ ಕುಂತ ವಸಂತದೂತ ಎನ್ನುವ ಕೋಗಿಲೆಯನ್ನು ಕಂಡು...
"ವಸಂತದೂತನೆ ಬಾರಯ್ಯಾ!
ಹಾಡೊಂದು ಹಾಡು, ಬಾ!!"
ಎಂದು ಹಾಡಲು ಹೇಳುತ್ತಾನೆ. ಆಗ ವಸಂತದೂತನಿಂದ ಯಾವುದೇ ರೀತಿಯ ಉತ್ತರ ಬರುವುದಿಲ್ಲ. ಬಾಲಕ ಮತ್ತೆ ಮತ್ತೆ ವಿನಂತಿಸಿಕೊಳ್ಳುತ್ತಾನೆ. ಎಷ್ಟೇ ವಿನಂತಿಸಿಕೊಂಡರು ವಸಂತದೂತ ಮೌನವಾಗಿರುವುದನ್ನು ಕಂಡು ಬಾಲಕ ಏನ್ ಅನಾಹುತ ಆಗಿದೆಯೋ ಎಂದು ಮತ್ತೆ ವಿನಮ್ರತೆಯಿಂದ ಪರಿಪರಿಯಾಗಿ ಕೇಳಿಕೊಳ್ಳುವನು. ಬಾಲಕನ ವಿನಮ್ರತೆಯನ್ನು ಕಂಡು ವಸಂತದೂತ...
"ಏನು ಹಾಡಲಣ್ಣಾ, ಮನಸ್ಸಿಲ್ಲ ಬೀಡಣ್ಣಾ!
ಕರಕರೆ ಕೊಡಬೇಡಣ್ಣಾ! ಓ ದಮ್ಮಯ್ಯಾ!!"
ಎಂದು ದುಃಖದಿಂದ ಗದ್ಗರಿಸುತ್ತ ಹತಾಶೆಯಿಂದ ನುಡಿಯುತ್ತದೆ. ಆಗ ಬಾಲಕ...
"ಓ ವಸಂತದೂತನೆ, ಬಸಂತದ ಹಿಗ್ಗಿಲ್ಲವೆ
ಈ ಋತುಮಾನದಲ್ಲಿ, ನಿನ್ನ ನಲಿವು ಬಲ್ಲೆ
ಹಸಿರೆಲೆ ಚಿಗುರಿದೆ; ಹೂವು ಜೇನಾಗಿದೆ
ಸವಿಜೇನುಂಡು ಹಾಡಣ್ಣಾ, ಕಲಕಂಠನೆ!"
ಎಂದು ಹುರಿದುಂಬಿಸಲು ಪ್ರಯತ್ನಿಸುತ್ತಾನೆ. ಆಗ ವಸಂತದೂತ..
"ನಿಮಗಿದು ವಸಂತ ಹಬ್ಬದ ಹಿಗ್ಗು
ನಮಗಿದು ಕೊರಳೆ ಬಿಗಿದ ನೇಣು
ನಮ್ಮಾರ್ತನವನ್ ಕೇಳುವವರಾರು?
ನಮ್ಮ ಸ್ಥಿತಿಯನ್ನರಿಯುವವರಾರು?"
"ನರಮಾನವನೇ ವಿನಾಶದ ಪ್ರತೀಕ!
ಕೊಲ್ಲುತಿಹನೆಮ್ಮ ತನ್ನಯ ಸ್ವಾರ್ಥಕ್ಕೆ!
ಪಾಳುಗೈಯ್ಯುತಿಹನು ಪ್ರಕೃತಿಸಂಪದ
ತನ್ನಾಸೆಗೆ ದೂರಾಸೆಗೆ; ಕಪಿಮಾನವ!"
"ನಾವು ನಿಮಗಾದರೆ ನೀವು ನಮಗಿಲ್ಲ
ಹಾವು ನಮ್ಮದ್ದೆ! ವಿಷವು ನಿಮ್ಮದ್ದೂ!
ಹಾನಿ ಎಂದೆಂದಿಗೂ ಬಡಜೀವದ್ದೂ!"
ಎಂದು ನುಡಿಯುವ ಮಾತಿನಲ್ಲಿ ಮಾನವನ ದುರಾಸೆಗೆ ಬಲಿಯಾಗುತ್ತಿರುವ ಹಕ್ಕಿಗಳ ಅಂತರಾತ್ಮದ ರೋಧನೆಯ ನೋವಿದೆ. ವಸಂತದೂತನ ಈ ಮಾತು ಕೇಳಿ ದುಃಖಿತನಾದ ಬಾಲಕ ...
"ಚಿಂತೆಯೇಕೆ? ಶಿವನು ಸಲಹುವನಯ್ಯಾ!
ಮನುಜನಿಗೆ ಸನ್ಮತಿಯ ಕೊಡುವನಯ್ಯಾ"
ಎಂದು ಸಮಾಧಾನಪಡಿಸಲು ನೋಡುತ್ತಾನೆ. ಬಾಲಕನ ಮಾತಿಗೆ; "ಮಂತ್ರ ತಂತ್ರಗಳನ್ನು ಪಠಿಸುತ ದೇವ ದೇವತೆಗಳ ಪಾದಕೆರಗುವ ಈ ಮಾನವನಲ್ಲಿ ಕನಿಕರತೆ ಎಂಬುದು ಇಲ್ಲ. ಸನ್ಮತಿ, ಸದಾಚಾರ, ಸದ್ಭಾವವಿಲ್ಲ. ದುರಾಸೆಯಿಂದಾಗಿ ಬರಿ ದುರ್ಗುಣಗಳೆ ತುಂಬಿವೆ." ಎಂದು ವಸಂತದೂತ ಎಂಬ ಕೋಗಿಲೆಯ ಮೂಲಕ ಲೇಖಕರು ಹೇಳುವ ಮಾತುಗಳು ಸತ್ಯದಿಂದ ಕೂಡಿವೆ. ಮುಂದುವರಿದು ....
"ನಿನ್ನಜ್ಜ ಸತ್ಪುರುಷ, ಸದ್ವಿಚಾರವ ಒರೆದ
ಅನಕ್ಷರಜ್ಜನಿಗಿರ್ಪ ಮತಿ ಅಕ್ಕರಿಗರಿಗಿಲ್ಲ"
ಎಷ್ಟೇ ಅಕ್ಷರ ಕಲಿತರೇನು ತಲೆಯಲ್ಲಿ ಬುದ್ಧಿ ಇಲ್ಲದ ಮೇಲೆ.! ವಸಂತದೂತ ಮೇಲೆ ಹೇಳುವ ಈ ಮಾತುಗಳು ಇಂದಿನ ಆಧುನಿಕ ಮಾನವ ನಾಚುವಂತಿದೆ. ಇಷ್ಟಾದರೂ ಕೋಗಿಲೆ ಹಾಡಿಗೆ ಬಾಲಕ ಪರಿಪರಿಯಾಗಿ ಬೇಡಿಕೊಂಡಾಗ, ಕೋಗಿಲೆಯು ದುಃಖದಿಂದ ಹಾಡುವ ಪರಿ ಇದು
ಅಂದೋ:
ನಮ್ಮಯ ಕಾಡು, ನಮ್ಮಯ ನಾಡು
ಸುಂದರ ಬಾಳ್ವೆಗೆ ನಮ್ಮಯ ಬೀಡು
ಉಸಿರಿಗೆ ಕಾಡು! ಬಾಳಿಗೆ ನಾಡು!
ಹಸಿರೂ ತುಂಬಿ ತಬ್ಬಿದ ಗೂಡು!
ಇಂದೊ:
ಕಾಲ ಬದಲಾಗಿದೆ; ಆಧುನಿಕತೆ ಬಂದಿದೆ
ತಂತ್ರಜ್ಞಾನವ ತುಂಬಿ, ಜೀವನ ನಿಂತಿದೆ
ಚಂದಿರಲೋಕಕ್ಕೆ ಮಾನವ ಪಯಣ!
ಭೂಲೋಕಕ್ಕೆ ಮಾಡಿತಿಹನೊ ಕ್ಷೀಣ!
ಮರ ಕಡಿದು ಮಾಡುತಿಹನೊ ವನನಾಶ!
ಜೀವಿಗಳ ಜೀವನ ವಾಸವೊ ಸರ್ವನಾಶ!
ಕಾಲದೊಂದಿಗೆ ಕಾಲವಾಯ್ತಿ ಒಳ್ಳೆತನ?
ಕಬ್ಬಿಣದ ಕಡಲೆಯಂತೆ ಈ ಜೀವನ!
ಹಾಡಲೇನೆಂದು? ನಲಿಯಲೇನೆಂದು?
ನಾನು; ಏನು ನುಡಿಯಲಿ ಹೇಳಣ್ಣಾ?
(ಮುಂದುವರಿದು ವಸಂತದೂತ...)
"ರೋಧಾಗ್ನಿಯುರಿತೈತಿ ಧಗಧಗ ಉರದಲಿ
ಕುಡಿಯಲು ಹನಿ ನೀರಿಲ್ಲಾ; ತಿನ್ನಲೇನು
ಹಣ್ಣು ಹಂಪಲವಿಲ್ಲ? ಗೂಡು ಕಟ್ಟಲು
ಮರಗಳಿಲ್ಲದಂತಾಗುತ್ತಿದೆಯಲ್ಲಾ? ಶಿವನೆ!
ಬಾವಿ ಒಣಗೈತಿ! ಕೆರೆಯೂ ಒಣಗೈತಿ!
ನದಿ ಒಣಗೈತಿ! ಜೀವನವೆ ಸೊರಗೈತಿ!
ಹಾಳೈತಿ ಹಾಳ್ಳೆತಿ ಎಲ್ಲೆಲ್ಲಿಯು ಹಾಳು!"
ಎಂದು ವಸಂತದೂತ ಮಾನವನ ದುರಾಸೆಯಿದಾಗಿ ಪ್ರಕೃತಿಯ ಸಂಪತ್ತು ನಾಶವಾಗಿರುವುದರ ಬಗ್ಗೆ ತುಂಬಾನೇ ದುಃಖದಿಂದ ಕಳವಳವನ್ನು ವ್ಯಕ್ತಪಡಿಸುತ್ತದೆ. ವಸಂತದೂತನ ಅಳಲನ್ನು ಆಲಿಸಿದ ಬಾಲಕನಿಗೆ ಎಲ್ಲವೂ ಅರಿವಾಗುತ್ತದೆ.
"ಮನ್ನಿಸು ಅಣ್ಣಯ್ಯಾ ಎನ್ನ,
ನಿನ್ನುಡಿಯ ಕೇಳಿ ಕಂಬನಿಯ ಚಿನುಮೆ
ಮಾನವನಿವನು ಕಲಿಯುಗದ ದಾನವನು ಮಾನವತೆಯಿಲ್ಲದ ಮನುಜರೆ ಮನುಜರಲ್ಲ"
ಎಂದು ಭಾವುಕನಾಗಿ ವಸಂತದೂತನಿಗೆ ಹೇಳುತ್ತಾನೆ. ಇಬ್ಬರ ನಡುವೆ ದುಃಖದ ವಾತಾವರಣದೊಂದಿಗೆ ಮೌನ ಆವರಿಸಿದಾಗ ಗಿಳಿಯೊಂದು ಹಾರುತ್ತ ಬಂದು ಮರದ ಮೇಲೆ ಕುಳಿತುಕೊಳ್ಳುತ್ತದೆ. ಗಿಳಿಯನ್ನು ಕಂಡ ಬಾಲಕ ಮೆಲ್ಲನೆ....
"ಏ ಗಿಳಿಯಣ್ಣಾ, ಕಲಿಯುಗವೆಂಥದಣ್ಣಾ?
ಲೋಕಾಚಾರವು ನೀ ಬಲ್ಲೆ. ತಿಳಿಸಣ್ಣಾ?"
ಎಂದಾಗ ಗೀಳಿಯು...
"ಏನುಸರಲಣ್ಣಾ, ಪಂಜರದಿ ಪರಿಜನ:
ಕಲಿಯುಗವು ಕೆಟ್ಟದ್ದು, ನೋಡಣ್ಣಾ!
ಇಲ್ಲಾರಿಗು ಯಾರಿಲ್ಲಾ, ತಿಳಿಯಣ್ಣಾ!
ಬಿಂಕದ ಬಣ್ಣದಾ ಮಾತಿವರದಣ್ಣಾ!"
ಎಂದು ವಾಸ್ತವಿಕತೆಯನ್ನು ಎತ್ತಿ ತೋರಿಸ್ತದೆ. ಮತ್ತೊಂದು ಕಡೆ ಕೆಂಬೂತ ಎನ್ನುವ ಪಕ್ಷಿ ತೆವಳುತ್ತ ಬಂದು ಕರುಣೆಯ ಸಂದೇಶವುಳ್ಳ ಸಿದ್ದಾರ್ಥ ಗೌತಮ ಮತ್ತು ದೇವದತ್ತನ ನಡುವೆ ನಡೆದ ಹಂಸದ ಕಥೆ ಹೇಳುತ್ತದೆ.
ನಂತರ ಹಾರುತ್ತ ಬಂದ ಕಾಗೆ...
"ಹೆಚ್ಚುತೈತ್ತೆ ತಾಪ ದಿನದಿಂದ ದಿನಕೆ
ಸಾಯ್ತಿವೆ ಜೀವ ಕ್ಷಣದಿಂದ ಕ್ಷಣಕೆ
ಹಸುರಿಲ್ಲದೆ ಜೀವಕುಸಿರಿರುವುದೇ?
ತಿನ್ನಕ್ಕೆ ಕೂಳು; ಕುಡಿಯಕ್ಕೆ ಸಲಿಲ
ಗೂಡು ಕಟ್ಟಕ್ಕೆ ಜೊಂಪೆಯ ರೆಂಬೆ
ಮುಂದು ಸಿಗುವುದೆಂಬ ತುಮುಲ"
ಎಂದು ತನ್ನ ನೋವಿನ ರೋಧನೆಯನ್ನು ಹೊರ ಹಾಕುತ್ತದೆ. ಹಾಗೆ ಗುಬ್ಬಚ್ಚಿಯೂ ಸಹ ತನ್ನ ನೋವನ್ನು ತೋಡಿಕೊಳ್ಳುತ್ತಾ...
"ತಂತಿಜಾಲದಲಿ ನಶಿಸುತಿದೆನ್ನ ಸಂತತಿ
ಕಿವಿಗೊಡಲು ಆರಿಲ್ಲ ಮೂಕಜನರಿಲ್ಲಿ
ನಾಳೆ ಹೊತ್ತಿಗೆಲಿ ನಮ್ಚಿತ್ರ ಕಾಣುವಿರಿ
ನಮ್ಮನುಳಿಸಿರಣ್ಣಾ; ನಿಮ್ಮಲ್ಲಿ ಬೇಡುವೆ!
ಧರಣಿಗೆ ನೋಯಿದಷ್ಟು ನೀವಳುವಿರಿ;
ಕ್ರಮಕೆ ಹೊಂದಷ್ಟು ಚೆನ್ನ ಬಾಳುವಿರಿ!"
ಎಂದು ತನ್ನನ್ನುಳಿಸಲು ಮಾನವನಲ್ಲಿ ಕರುಣಾಜನಕವಾಗಿ ಬೇಡಿಕೊಳ್ಳುತ್ತದೆ. ಹಾಗೆಯೇ ನವಿಲು ಸಹ....
"ಕಾಡಿಲ್ಲದೆ ಮಳೆಯಿಲ್ಲ; ಮಳೆಯಿಲ್ಲದೆ
ಬೆಳೆಯಿಲ್ಲ!! ಬೆಳೆಯಿಲ್ಲದೆ ಕೂಳದಿಲ್ಲ!
ತೋಟ ಬೀದಿಯಾಯ್ತು; ಹೆಬ್ಬೆಟ್ಟ
ಗಣಿಯಾಯ್ತು; ಸಮತಳ ಬುವಿ
ಕಂದರವಾಯ್ತು; ಕಾಲಗತಿಯಲ್ಲಿ
ಖಗಮಿಗ ವನ ಮರೆಯಾಯ್ತು!"
ಎನ್ನುತ್ತಾ ಬಾಲಕನೊಂದಿಗೆ ಕಳವಳವನ್ನು ವ್ಯಕ್ತಪಡಿಸುತ್ತದೆ. ಹಾಗೆಯೇ ಕಾಜಾಣ ಎನ್ನುವ ಹಕ್ಕಿಯು ಈ ಜಗವು ವಿನಾಶದತ್ತ ಮುನ್ನುಗುತಿದೆ ಎಂದು ಕೆಂಡಮಂಡಲವಾಗಿ ರೋಷವನ್ನು ಹೊರ ಹಾಕುತ್ತದೆ. ಕೊನೆಗೆ ಮರವು ನುಡಿಯುತ್ತ ...
"ಆಧುನಿಕನಾಗು! ಅತ್ಯಾಧುನಿಕನಾಗದಿರು!
ಮಾನವಮತಿಯಾಗು! ಸಹೃದಯನಾಗು!"
ಎಂದು ಮಾನವನಿಗೆ ಬುದ್ಧಿ ಹೇಳುವ ಈ ಪರಿ ತುಂಬಾ ಮಹತ್ವದ್ದು. ಮುಂದುವರೆದು ಮರವು ದಯನೀಯ ಧ್ವನಿಯಿಂದ..
"ನಮಗು ಜೀವವಿದೆ: ಸಣ್ಣ ಜೀವನವಿದೆ
ನಮಗು ಮನಸ್ಸಿದೆ; ಸದ್ಭಾವನೆಗಳಿವೆ!!
ಹೇ ಮಾನವ: ನಮ್ಮನ್ನುಳಿಸಿ ಬೆಳೆಸು!
ನಾವುಳಿದರೆ, ನೀನುಳಿದೂ ಬಾಳುವೆ!
ನಾವಳಿದರೆ ಉಸಿರುಗಟ್ಟಿ ಸಾಯುವೆ!
ನೀಂ ಬಾಳುವಿಯೆ? ಸಾಯುವಿಯೆ?
ನೀ ಬದುಕು. ನಿನೀ ಬಾಳೆಯಲ್ಲಿ
ನಮ್ಮಗೂ ನೀ ಬದುಕಲು ಬೀಡು!"
ಎಂದು ಹೇಳುವಾಗ ಕಲ್ಲು ಹೃದಯಗಳ ಸಹ ಕರಗದೇ ಇರಲಾರವು. ಈ ಎಲ್ಲಾದರ ಮಾತುಗಳನ್ನು ಕೇಳಿದ ಬಾಲಕ ಪ್ರಕೃತಿಯ ನಾಶಕ್ಕೆ ಮರಮರ ಮರುಗುತ್ತ..
"ಓ ಮಾನವರೆ, ವಿನಂತಿಯ ಕೇಳಿರಯ್ಯಾ:
ವಿಶ್ವ ಮಂದಿರದಲಿ; ನಿಸರ್ಗವೇ ದೇವರು
ಓ ಬನ್ನಿ ಗೆಳೆಯರೆ, ಕಂಕಣಕಟ್ಟುವಿಂದು:
ಪ್ರಕೃತಿ ರಕ್ಷೆಗೆ ನಾವಿರಬೇಕಯ್ಯಾ ಮುಂದು
ಸಸಿಯ ನೆಟ್ಟು ಮರವಾಗಿ ಬೆಳೆಸೋಣ
ಹಚ್ಚಹಸುರಾದ ಕಾಡನೂ ಉಳಿಸೋಣ
ಕಾಡೂಳಿಸಿ. ನಾವು ನಾಡು ಬೆಳಗೋಣ
ಪರೋಪಕಾರಿಯಾಗುವ ನಾವು
ಸಹಬಾಳ್ವೆಯಿಂದ ಜೀವಿಸೋಣ
ಎಲ್ಲಾರೂ ಬಾಳೋಣ, ಎಲ್ಲಾರೂ ಹಾಡೋಣ"
ಎಂದು ಮಾನವ ಕುಲಕೋಟಿಗೆ ಬುದ್ಧಿ ಹೇಳುವುದರ ಮೂಲಕ ನಾಟಕ ಮುಕ್ತಾಯಗೊಳ್ಳುತ್ತದೆ.
ಇದೊಂದು ಪರಿಸರ ಕಾಳಜಿಯುಳ್ಳ ಮೌಲ್ಯಯುತ ಕೃತಿ, ಇಂತಹ ಒಂದು ಉತ್ತಮ ಕೃತಿ ಮಕ್ಕಳಿಗೆ ಪಠ್ಯವಾಗಬೇಕು. ಶಾಲಾ ಕಾಲೇಜಿನ ಗ್ರಂಥಾಲಯಗಳಲ್ಲಿ ರಾರಾಜಿಸಬೇಕು. ಪ್ರತಿಯೊಬ್ಬರೂ ಓದಲೇಬೇಕೆಂದು ನನಗನಿಸುತ್ತದೆ. ಇದು ಅನುವಾದಕರ ಕಣ್ಣಿಗೆ ಬಿದ್ದರೆ ಮುಂದೊಂದು ದಿನ ಅನ್ಯ ಭಾಷೆಗೆ ಅನುವಾದ ಗೊಂಡೆ ಗೊಳ್ಳುತ್ತದೆ ಅಂತ ನನ್ನ ಮನಸ್ಸು ಹೇಳುತ್ತಿದೆ. ಇಂತಹ ಒಂದು ಒಳ್ಳೆಯ ಪುಸ್ತಕ ಕೊಂಡು ಓದುವುದರ ಮೂಲಕ ಇದರ ಸ್ವಾದವನ್ನು ಸವಿಯಿರಿ.
ಪ್ರತಿಗಳಿಗಾಗಿ ಸಂಪರ್ಕಿಸಿ:- 85500 34356
ಅಶ್ವಜೀತ ದಂಡಿನ
ಮಾಳೆಗಾಂವ, ಬೀದರ