ಡಾ.ರಮೇಶ ಮೂಲಗೆ ಅಭಿಮತ | ಕಮಲನಗರದಲ್ಲಿ ಸೌಂದರ್ಯ ಮೀಮಾಂಸೆ ವಿಶೇಷ ಉಪನ್ಯಾಸ ಕಾವ್ಯ ಮೀಮಾಂಸೆಗೆ ಜಿಎಸ್‌ಎಸ್ ಕೊಡುಗೆ ಅಪಾರ
ಡಾ.ರಮೇಶ ಮೂಲಗೆ ಅಭಿಮತ | ಕಮಲನಗರದಲ್ಲಿ ಸೌಂದರ್ಯ ಮೀಮಾಂಸೆ ವಿಶೇಷ ಉಪನ್ಯಾಸ
ಕಾವ್ಯ ಮೀಮಾಂಸೆಗೆ ಜಿಎಸ್‌ಎಸ್ ಕೊಡುಗೆ ಅಪಾರ
ಕಮಲನಗರ :ಕನ್ನಡ ಕಾವ್ಯ ಮತ್ತು ಕಾವ್ಯ ಮೀಮಾಂಸೆಯ ಕ್ಷೇತ್ರಕ್ಕೆ ಜಿ.ಎಸ್.ಎಸ್ ಕೊಡುಗೆ ಅಪಾರ. ಪಾಶ್ಚಾತ್ಯ ಹಾಗೂ ಭಾರತೀಯ ಕಾವ್ಯ ಮೀಮಾಂಸೆ ಕುರಿತ ಅವರ ದೃಷ್ಟಿಕೋನ ಶ್ರೇಷ್ಠಮಟ್ಟದ್ದು ಎಂದು ಮಹಾರಾಷ್ಟçದ ಉದಯಗಿರಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ರಮೇಶ ಮೂಲಗೆ ಹೇಳಿದರು.
ಪಟ್ಟಣದ ಡಾ.ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆಯ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚಕೋರ ಸಾಹಿತ್ಯ ವಿಚಾರ ವೇದಿಕೆ ಸಹಯೋಗದಲ್ಲಿ ಗುರುವಾರ ಜಿ.ಎಸ್.ಶಿವರುದ್ರಪ್ಪ ಅವರ ಕನ್ನಡ ಸಾಹಿತ್ಯದಲ್ಲಿ ಸೌಂದರ್ಯ ಮೀಮಾಂಸೆ ಕುರಿತು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನವೋದಯದ ಸಂದರ್ಭದಲ್ಲಿ ರಮ್ಯ ಕವಿತೆಗಳ ಮೂಲಕ ಕಾವ್ಯಯಾನ ಆರಂಭಿಸಿದ ಅವರು ನಂತರ ತಮ್ಮದೇ ಆದ ಭಿನ್ನ ಕಾವ್ಯಮಾರ್ಗವನ್ನು ರೂಪಿಸಿಕೊಂಡರು. ಎಪ್ಪತ್ತರ ದಶಕದಲ್ಲಿ ಜಿ.ಎಸ್.ಎಸ್ ಹೋರಾಟಗಾರರಿಗೆ ಸ್ಫೂರ್ತಿಯಾಗಿದ್ದರು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಹೋರಾಟದ ಮಾರ್ಗವನ್ನು ತೋರಿಸಿದವರು ಅವರು. ಆಧುನಿಕ ಜೀವನ ಶೈಲಿಯ ಯಾಂತ್ರಿಕ ಬುದುಕನ್ನು ಅವರು ತಮ್ಮ ಮುಂಬೈ ಜಾತಕ ಕವನದಲ್ಲಿ ಮನಮುಟ್ಟುವಂತೆ ನಿರೂಪಿಸಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ಕನ್ನಡ ಸಾಹಿತ್ಯ ಪರಂಪರೆ ಶ್ರೇಷ್ಠವಾದದ್ದು. ಉದಯೋನ್ಮುಖ ಕವಿಗಳು ಹಳೆಯ ಕಾವ್ಯಗಳನ್ನು ಅಧ್ಯಯನ ಮಾಡುವುದರಿಂದ ಜ್ಞಾನದ ಹರಿವು ಹೆಚ್ಚುತ್ತದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ ಮಾತನಾಡಿ, ಪಾಶ್ಚಾತ್ಯ ಹಾಗೂ ಭಾರತೀಯ ಕಾವ್ಯ ಮೀಮಾಂಸೆಯ ಸೇತುವಂತೆ ಜಿ.ಎಸ್.ಎಸ್ ಕೆಲಸ ಮಾಡಿದ್ದಾರೆ. ಜತೆಗೆ ಪಾಶ್ಚಾತ್ಯ ಹಾಗೂ ಭಾರತೀಯ ಕಾವ್ಯ ಮೀಮಾಂಸೆಯ ಸಾಮ್ಯತೆಗಳನ್ನು ಅವರು ಗುರುತಿಸಿದರು. ಅವರು ಕನ್ನಡ ಸಾಹಿತ್ಯದಲ್ಲಿ ವಿಮರ್ಶೆಯ ದೃಷ್ಟಿಕೋನವನ್ನು ಬೆಳೆಸಿದ ಕವಿ ಹೃದಯಿ ವಿದ್ವಾಂಸರಾಗಿದ್ದರು ಎಂದರು.
ತಾಪA ಇಒ ಹಣಮಂತರಾಯ ಕೌಟಗೆ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಜಿ.ಎಸ್.ಎಸ್ ಕವಿಯಾಗಿಯೂ, ವಿದ್ವಾಂಸರಾಗಿಯೂ ಗುರುತಿಸಿಕೊಂಡವರು. ಅವರು ಕೇವಲ ವ್ಯಕ್ತಿಗಳನ್ನು ಬೆಳೆಸದೆ ಸಮುದಾಯವನ್ನು ಕಟ್ಟುವ ಪ್ರಯತ್ನ ಮಾಡಿದರು. ಪ್ರಸ್ತುತ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗಂಭೀರವಾದ ಸಂಶೋಧನೆ ನಡೆಯಬೇಕು ಎಂದರು.
ಚಕೋರ ಸಾಹಿತ್ಯ ವಿಚಾರ ವೇದಿಕೆ ಜಿಲ್ಲಾ ಸಂಚಾಲಕಿ ಡಾ.ಮಕ್ತುಂಬಿ ಎಂ, ಪಿಎಸ್‌ಐ ಆಶಾ ರಾಠೋಡ ಮಾತನಾಡಿದರು.
ಭಾಲ್ಕಿ ಹಿರೇಮಠದ ಪೂಜ್ಯ ಮಹಾಲಿಂಗ ದೇವರು ದಿವ್ಯ ಸಾನಿಧ್ಯ ವಹಿಸಿದ್ದರು. ಆಡಳಿತ ಅಧಿಕಾರಿ ಚನ್ನಬಸವ ಘಾಳೆ ಅಧ್ಯಕ್ಷತೆ ವಹಿಸಿದ್ದರು.
ಕಸಾಪ ಗೌರವಾಧ್ಯಕ್ಷ ಪ್ರೊ.ಎಸ್.ಎನ್.ಶಿವಣಕರ, ಉಪಾಧ್ಯಕ್ಷ ಧನರಾಜ ಭವರಾ, ಮಡಿವಾಳಪ್ಪ ಮಹಾಜನ, ಸಂತೋಷ ಸುಲಾಕೆ, ತಾಪಂ ಮಾಜಿ ಅಧ್ಯಕ್ಷ ಶ್ರೀರಂಗ ಪರಿಹಾರ, ಡಾ.ಎಸ್.ಎಸ್.ಮೈನಾಳೆ, ಮನೋಜ ಹಿರೇಮಠ, ಮಹಾದೇವ ಬಿರಾದಾರ, ರಾಜೇಶ್ವರಿ ಬಿರಾದಾರ, ಪಲ್ಲವಿ ನಾಯಕ್, ಶಿವಕುಮಾರ ಏಕಲಾರೆ, ಸುಭಾಷ ಧರಣೆ, ಜ್ಞಾನೋಬಾ ಹಂಡೆ, ದೇವಿದಾಸ ಡಾಂಗೆ, ನಿಜಲಿಂಗಯ್ಯ ಸ್ವಾಮಿ, ಶರಣಬಸವ ಗೋರ್ಟಾ ಇತರರಿದ್ದರು.
ಡಾ.ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆ ಮಕ್ಕಳು ನಾಡಗೀತೆ ಹಾಡಿದರು. ಸಾಹಿತಿ ಸಂಗಮೇಶ ಮುರ್ಕೆ ಸ್ವಾಗತಿಸಿದರು. ಮಹಾದೇವ ಮಡಿವಾಳ ನಿರೂಪಣೆ ಮಾಡಿದರು.
ಕನ್ನಡ ಜಂಗಮರಾಗಿದ್ದ ಲಿಂಗೈಕ್ಯ ಡಾ.ಚನ್ನಬಸವ ಪಟ್ಟದ್ದೇವರ ಹುಟ್ಟೂರಾದ ಗಡಿಭಾಗದ ಕಮಲನಗರದಲ್ಲಿ ಸಾಹಿತಿಗಳ, ಕವಿಗಳ ಕುರಿತು, ಕನ್ನಡ ಸಾಹಿತ್ಯದ ಶ್ರೇಷ್ಠತೆಯನ್ನು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುತ್ತ ಬರುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ನಿಜಕ್ಕೂ ಅಭಿನಂದನೀಯ.
ಪೂಜ್ಯ ಮಹಾಲಿಂಗ ದೇವರು, ಹಿರೇಮಠ ಸಂಸ್ಥಾನ ಭಾಲ್ಕಿ
