ಚರಂಡಿ, ಫುಟ್ ಪಾತ್ ಕಾಮಗಾರಿಗೆ ಶಾಸಕ ಪ್ರಭು ಚವ್ಹಾಣ ಚಾಲನೆ
ಚರಂಡಿ, ಫುಟ್ ಪಾತ್ ಕಾಮಗಾರಿಗೆ ಶಾಸಕ ಪ್ರಭು ಚವ್ಹಾಣ ಚಾಲನೆ
ಔರಾದ(ಬಿ) ಪಟ್ಟಣದ ಬಹು ಬೇಡಿಕೆಯ ಕಾಮಗಾರಿ ಅಗ್ನಿ ಬಸವಣ್ಣ ದೇವಸ್ಥಾನದಿಂದ ಬಸ್ ನಿಲ್ದಾಣದವರೆಗೆ 1.5 ಕೋಟಿ ಅನುದಾನದಲ್ಲಿ ಕೈಗೊಂಡಿರುವ ಸಿಸಿ ಚರಂಡಿ ಹಾಗೂ ಫುಟ್‌ಪಾತ್ ನಿರ್ಮಾಣ ಕಾಮಗಾರಿಗೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ. ಚವ್ಹಾಣ ಅವರು ಜ.26ರಂದು ಭೂಮಿಪೂಜೆ ನೆರವೇರಿಸಿದರು.
ಪಟ್ಟಣದ ಪ್ರಮುಖ ಹಾಗೂ ಜನಸಂಚಾರ ಹೆಚ್ಚಿರುವ ಈ ಮಾರ್ಗದಲ್ಲಿ ಸಿಸಿ ಚರಂಡಿ ಮತ್ತು ಫುಟ್‌ಪಾತ್ ನಿರ್ಮಾಣವಾಗುತ್ತಿದೆ. ಈ ಕಾಮಗಾರಿ ಪೂರ್ಣಗೊಂಡ ನಂತರ ಮಳೆಗಾಲದಲ್ಲಿ ಉಂಟಾಗುತ್ತಿದ್ದ ನೀರು ನಿಲ್ಲುವ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ಜೊತೆಗೆ ಪಾದಚಾರಿಗಳಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿದಂತಾಗಲಿದೆ ಎಂದು ಶಾಸಕರು ತಿಳಿಸಿದರು.
ಔರಾದ(ಬಿ) ಪಟ್ಟಣದ ಸಮಗ್ರ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ. ಮೂಲಸೌಕರ್ಯ ಬಲವರ್ಧನೆಗೆ ಯಾವುದೇ ಕೊರತೆ ಬಾರದಂತೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯಲಿವೆ ಎಂದರು.
ತಾಲ್ಲೂಕು ಕ್ರೀಡಾಂಗಣ ರಸ್ತೆ ಕಾಮಗಾರಿಗೆ ಚಾಲನೆ:bತಾಲ್ಲೂಕು ಕ್ರೀಡಾಂಗಣಕ್ಕೆ ಓಡಾಡಲು ಅನುಕೂಲವಾಗುವಂತೆ ಔರಾದ-ಬೀದರ ರಾಷ್ಟ್ರೀಯ ಹೆದ್ದಾರಿಯಿಂದ ಕ್ರೀಡಾಂಗಣದ ವರಗೆ 50 ಲಕ್ಷ ಮೊತ್ತದಲ್ಲಿ ಕೈಗೊಂಡಿರುವ ಸಿಸಿ ರಸ್ತೆ ಕಾಮಗಾರಿಗೆ ಶಾಸಕರು ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿ, ಮಳೆಗಾಲದ ಸಂದರ್ಭದಲ್ಲಿ ಸೂಕ್ತ ರಸ್ತೆಯಿರದ ಕಾರಣ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ಅನಾನುಕೂಲ ಆಗುತ್ತಿರುವುದನ್ನು ಗಮನಿಸಿ ಹಿಂದೆ ಭೇಟಿ ನೀಡಿದಾಗ ರಸ್ತೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದೆ. ಅದರಂತೆ ಅವಶ್ಯಕ ಅನುದಾನ ಒದಗಿಸಿದ್ದು ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಪಟ್ಟಣದಲ್ಲಿ ಚಾಲ್ತಿಯಲ್ಲಿರುವ ಎಲ್ಲ ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡಬೇಕು. ಎಲ್ಲವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಅಧಿಕಾರಿಗಳು ಕೆಲಸದ ಮೇಲೆ ಸರಿಯಾಗಿ ನಿಗಾ ವಹಿಸಬೇಕು. ಕಾಮಗಾರಿ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕೆಂದು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವರಾಜ ಅಲ್ಮಾಜೆ, ದಯಾನಂದ ಘೂಳೆ, ಖಂಡೋಬಾ ಕಂಗಟೆ, ಕೇರಬಾ ಪವಾರ, ಸಂತೋಷ ಪೋಕಲವಾರ, ಸಂಜು ವಡೆಯರ್, ಸಂಜು ವಡೆಯರ್, ಬಸವರಾಜ ಹಳ್ಳೆ, ಸಂದೀಪ ಪಾಟೀಲ, ಪ್ರಕಾಶ ಅಲ್ಮಾಜೆ, ಅಶೋಕ ಅಲ್ಮಾಜೆ ಸೇರಿದಂತೆ ಪಕ್ಷದ ಮುಖಂಡರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
