ಕಾಮದಹನದ ಸಂದೇಶ: ದುಷ್ಟತೆ, ದುರಾಸೆಯನ್ನು ಸುಡುವುದು – ಡಾ. ಸ್ವಾಮಿರಾವ ಕುಲಕರ್ಣಿ
ಕಾಮದಹನದ ಸಂದೇಶ: ದುಷ್ಟತೆ, ದುರಾಸೆಯನ್ನು ಸುಡುವುದು – ಡಾ. ಸ್ವಾಮಿರಾವ ಕುಲಕರ್ಣಿ
ಕಲಬುರಗಿ: ಅತಿಯಾದ ಆಸೆ ಮತ್ತು ದುರಾಸೆಯಿಂದ ಹುಟ್ಟುವ ದುರ್ಗುಣಗಳನ್ನು ನಾಶಮಾಡುವ ಸಂದೇಶವೇ ಕಾಮದಹನ ಆಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಹೇಳಿದರು.
ನಗರದ ವಿದ್ಯಾನಗರದಲ್ಲಿರುವ ಶ್ರೀ ಮಲ್ಲಿಕಾರ್ಜುನ ತರುಣ ಸಂಘದ ವತಿಯಿಂದ ಹೋಳಿ ಹಬ್ಬದ ನಿಮಿತ್ತ ಆಯೋಜಿಸಿದ ಕಾಮದಹನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಕಾಮದಹನದ ಅರ್ಥ, ಮಹತ್ವ ಮತ್ತು ಅದರ ಪೌರಾಣಿಕ ಹಿನ್ನೆಲೆಯನ್ನು ವಿವರಿಸಿದ ಅವರು, ಅತಿಯಾದ ಆಸೆ ದುರಾಸೆಗೆ ಕಾರಣವಾಗಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಮುಂತಾದ ದುರ್ಗುಣಗಳಿಗೆ ದಾರಿ ಮಾಡಿಕೊಡುತ್ತದೆ. ಈ ದುರ್ಗುಣಗಳನ್ನು ಮನಸ್ಸಿನಿಂದ ದೂರ ಮಾಡುವ ಮೂಲಕ ಸಾಮರಸ್ಯ, ಸಮಾಧಾನ ಮತ್ತು ಸಂತೋಷದ ಬದುಕು ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಅವರು ತರುಣ ಸಂಘದ ೨೯ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನಗು ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿ, ತಮ್ಮ ಜೀವನದಲ್ಲಿ ನಡೆದ ಹಾಸ್ಯಮಯ ಘಟನೆಗಳನ್ನು ವಿವರಿಸಿ ನೆರೆದಿದ್ದವರನ್ನು ಮನರಂಜಿಸಿದರು. ಅವರ ಮಾತುಗಳಿಗೆ ಸಭಿಕರು ಬಿದ್ದುಬಿದ್ದು ನಕ್ಕರು.
ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಉಪಾಧ್ಯಕ್ಷ ಉಮೇಶ ಶೆಟ್ಟಿ ಹಾಗೂ ತರುಣ ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಂತರ ತರುಣ ಸಂಘದ ಪದಾಧಿಕಾರಿಗಳು ಹೋಳಿ ಹಾಡುಗಳನ್ನು ಹಾಡುತ್ತಾ ಸಂಪ್ರದಾಯಬದ್ಧವಾಗಿ ಕಾಮದಹನ ಆಚರಣೆ ನೆರವೇರಿಸಿದರು. ಕಾರ್ಯಕ್ರಮದ ಮಧ್ಯದಲ್ಲಿ ಕುಸನೂರಿನ ಜನಪದ ಕಲಾವಿದ ವಿಶ್ವನಾಥ ತೋಟ್ನಳ್ಳಿ ಅವರು ಪೋತರಾಜನ ವಿಶೇಷ ವೇಷಭೂಷಣದಲ್ಲಿ ತಮ್ಮಟೆ ಸದ್ದಿನೊಂದಿಗೆ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ಅವರ ವಿಶಿಷ್ಟ ಕಲೆ ಪ್ರದರ್ಶನಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಯಿತು ಎಂದು ತರುಣ ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
