ಚಿತ್ತಾಪುರದಲ್ಲಿ ಚಿಣ್ಣರ ಸಂತೆ – ಮಕ್ಕಳ ಕೈಯಲ್ಲಿ ವ್ಯಾಪಾರ, ಮನಸ್ಸಿನಲ್ಲಿ ಆತ್ಮವಿಶ್ವಾಸ
ಚಿತ್ತಾಪುರದಲ್ಲಿ ಚಿಣ್ಣರ ಸಂತೆ – ಮಕ್ಕಳ ಕೈಯಲ್ಲಿ ವ್ಯಾಪಾರ, ಮನಸ್ಸಿನಲ್ಲಿ ಆತ್ಮವಿಶ್ವಾಸ
ಚಿತ್ತಾಪುರ:ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ವಿದ್ಯಾನಿಕೇತನ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಚಿತ್ತಾಪುರದಲ್ಲಿ ಆಯೋಜಿಸಿದ್ದ ‘ಚಿಣ್ಣರ ಸಂತೆ’ ಮಕ್ಕಳಿಗೂ ಪಾಲಕರಿಗೂ ಸಂತಸ ತಂದಿತು. ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ (ರಿ)ಯ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮ ಮಕ್ಕಳಿಗೆ ಆಟದ ಜೊತೆಗೆ ಬದುಕಿನ ಪಾಠ ಕಲಿಸಿತು.
ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಪೆಂದು ಚಾಲನೆ ನೀಡಿದರು. ಮಾತನಾಡಿದ ಅವರು, “ಮಕ್ಕಳಲ್ಲಿ ಬಾಲ್ಯದಲ್ಲೇ ಶ್ರಮದ ಮೌಲ್ಯ ಮತ್ತು ಹಣದ ಅರಿವು ಬೆಳೆಸಬೇಕು. ಇಂತಹ ಕಾರ್ಯಕ್ರಮಗಳು ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುತ್ತವೆ” ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂತೋಷ ಹಾವೇರಿ ಮಾತನಾಡಿ, ಪಠ್ಯದ ಜೊತೆಗೆ ಅನುಭವ ನೀಡುವ ಶಿಕ್ಷಣ ಅಗತ್ಯವಾಗಿದೆ. ಚಿಣ್ಣರ ಸಂತೆ ಮಕ್ಕಳಲ್ಲಿ ಉದ್ಯಮಶೀಲ ಮನೋಭಾವ ಬೆಳೆಸುವ ಉತ್ತಮ ಪ್ರಯತ್ನ ಎಂದು ಹೇಳಿದರು.
ಶಾಲೆಯ ಮುಖ್ಯ ಗುರು ರಮೇಶ ಯಾದವಾಡ ಹಾಗೂ ಶಿಕ್ಷಕರು ಮಕ್ಕಳಿಗೆ ಸಂಪೂರ್ಣ ಮಾರ್ಗದರ್ಶನ ನೀಡಿದರು. ಮಕ್ಕಳು ತಮ್ಮದೇ ಸ್ಟಾಲ್‌ಗಳನ್ನು ಸಿದ್ಧಪಡಿಸಿ, ವಸ್ತುಗಳಿಗೆ ಬೆಲೆ ನಿಗದಿ ಮಾಡಿ, ಗ್ರಾಹಕರೊಂದಿಗೆ ಮಾತನಾಡಿ, ಹಣ ಸ್ವೀಕರಿಸಿ ಚಿಲ್ಲರೆ ನೀಡುವ ಮೂಲಕ ನೈಜ ವ್ಯಾಪಾರದ ಅನುಭವ ಪಡೆದರು.
ಸಂತೆಯಲ್ಲಿ ಹೂ, ಹಣ್ಣು, ತರಕಾರಿ, ದಿನಸಿ ವಸ್ತುಗಳು, ಭಜ್ಜಿ, ಬೊಂಡಾ, ಸಮೋಸ, ರೊಟ್ಟಿ, ಶೇಂಗಾ–ಹೋಳಿಗೆ, ಸ್ನ್ಯಾಕ್ಸ್, ಶೇಕ್‌ಗಳು, ಆಟಿಕೆಗಳು, ಬಳೆ ಅಂಗಡಿ, ಪುಸ್ತಕ ಮಳಿಗೆ ಸೇರಿದಂತೆ ಹಲವಾರು ಅಂಗಡಿಗಳು ಗಮನ ಸೆಳೆದವು. ಶಾಲೆ ಒಂದು ದಿನ ಪೂರ್ತಿ ಮಾರುಕಟ್ಟೆಯಾಗಿ ಬದಲಾಗಿತ್ತು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಮಕ್ಕಳೇ ರೂಪಿಸಿದ ‘ಸ್ಕೇರಿ ಹೌಸ್ (ಭೂತ್ ಬಂಗ್ಲಾ)’ ಎಲ್ಲರ ಗಮನ ಸೆಳೆಯಿತು. ಮಕ್ಕಳು ಹಾಗೂ ಪಾಲಕರು ಉತ್ಸಾಹದಿಂದ ಒಳಗೆ ಹೋಗಿ ಅನುಭವಿಸಿದರು.
ಈ ಸಂದರ್ಭದಲ್ಲಿ ರಾಜಶೇಖರ ಬಳ್ಳಾ , ಪ್ರಹ್ಲಾದ ಬಡಿಗೇರ, ಮಲ್ಲಿಕಾರ್ಜುನ ಬೆಣ್ಣೂರಕರ್, ರಾಜಶೇಖರ ಭಂಕಲಗಾ, ನಿರ್ಮಲಾ ಭಂಗಿ, ರಾಜು ಮೂಡಬೂಳ, ಶ್ರೀದೇವಿ ಸಿಂಪಿ, ಪೂಜಾ ಭಂಕಲಗಿ , ಸುರೇಶ ವಿಶ್ವಕರ್ಮ, ಶರಣು ಮುತ್ತಗಾ, ವಿಶ್ವರಾಜ ನೆನೆಯಕ್ಕಿ, ಜಹೀರ ಜುನೈದಿ ಸೇರಿದಂತೆ ಹಲವಾರು ಗಣ್ಯರು, ಶಿಕ್ಷಣಪ್ರೇಮಿಗಳು, ಪಾಲಕರು ಹಾಗೂ ಊರಿನವರು ಉಪಸ್ಥಿತರಿದ್ದು ಮಕ್ಕಳನ್ನು ಪ್ರೋತ್ಸಾಹಿಸಿದರು.
ಒಟ್ಟಾರೆ ‘ಚಿಣ್ಣರ ಸಂತೆ’ ಮಕ್ಕಳಲ್ಲಿ ಅಡಗಿರುವ ಪ್ರತಿಭೆ, ಸೃಜನಶೀಲತೆ ಮತ್ತು ಆತ್ಮವಿಶ್ವಾಸವನ್ನು ಹೊರತಂದಿತು. ಪು
