ನವಣಿ ಮನೆತನದ ಕುಟುಂಬಗಳ ಪುನರ್ಮಿಲನ ಸಮಾರಂಭ ನವಣಿ ಕುಟುಂಬೋತ್ಸವ

ನವಣಿ ಮನೆತನದ ಕುಟುಂಬಗಳ ಪುನರ್ಮಿಲನ ಸಮಾರಂಭ ನವಣಿ ಕುಟುಂಬೋತ್ಸವ

ನವಣಿ ಮನೆತನದ ಕುಟುಂಬಗಳ ಪುನರ್ಮಿಲನ ಸಮಾರಂಭ ನವಣಿ ಕುಟುಂಬೋತ್ಸವ

ಕಲಬುರಗಿಯ ನವಣಿ ಮನೆತನದ ಕುಟುಂಬಗಳ ಪುನರ್ಮಿಲನ ಸಮಾರಂಭ ನವಣಿ ಕುಟುಂಬೋತ್ಸವ 2025 " ನಗರದ ವರಪ್ರದಾ ಹೆರಿಟೇಜ್‌ನ ಸಭಾಭವನದಲ್ಲಿ ಜರುಗಿತು.

ಸುಮಾರು 700 ವರ್ಷಗಳ ಇತಿಹಾಸ ಹೊಂದಿರುವ, 19 ನೇ ಶತಮಾನ ಮತ್ತು 20ನೇ ಶತಮಾನದ ಪೂರ್ವಾರ್ಧದಲ್ಲಿ ಕಲಬುರಗಿಯ ಕೆಲವೇ ಕೆಲವು ಪ್ರತಿಷ್ಠಿತ, ಸುಸಂಸ್ಕೃತ ಮತ್ತು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಮನೆತನದ ಸ್ಥಳೀಯ ಹಾಗೂ ದೂರದೂರುಗಳಿಂದ ಬಂದ 150ಕ್ಕೂ ಹೆಚ್ಚು ಹಿರಿಕಿರಿಯರು ಒಂದೇ ಸೂರಿನಡಿ ಸೇರಿ ಸಂಭ್ರಮಿಸಿದರು. ಈಗೀಗ 'ಫ್ಯಾಮಿಲಿ ರೀಯೂನಿಯನ್' ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಸಿನಿಮಾ ಹಾಡು, ಡೀಜೆ ಕುಣಿತ, ಆಹಾರ ವಿಹಾರಗಳೇ ಪ್ರಾತಿನಿಧ್ಯ ಪಡೆಯುವುದು ಕಾಣುತ್ತೇವೆ. ಆದರೆ " ನವಣಿ ಕುಟುಂಬೋತ್ಸವ " ಇದಕ್ಕೆ ಅಪವಾದದಂತಿತ್ತು.

ಆಧುನಿಕ ಕಾಲದ ಅನಿವಾರ್ಯತೆಗಳ ಪ್ರವಾಹದಲ್ಲಿ ಹೊಸ ಬದುಕು ಕಟ್ಟಿಕೊಳ್ಳಲು ಚದುರಿ ಹೊರ ರಾಜ್ಯಗಳಲ್ಲಿ, ವಿದೇಶಗಳಲ್ಲಿ ನೆಲೆಸಿರುವ ಕುಟುಂಬ ಸದಸ್ಯರು 40 ವರ್ಷಗಳ ಹಿಂದೆ 100 ಕ್ಕೂ ಹೆಚ್ಚು ಅವಿಭಕ್ತ ಕುಟುಂಬ ಸದಸ್ಯರು ವಾಸಿಸಿದ ಭವ್ಯ " ನವಣಿ ನಿವಾಸ "ದ ತಮ್ಮ ಕೂಡುಕುಟುಂಬ ಜೀವನಗಳ ಅನುಭವ, ಮನೆತನದ ಪರಂಪರೆ, ಸಮಾಜ ಸೇವೆ ಹಾಗೂ ಹಿರಿಯರ ಸಾಧನೆಗಳ ಬಗ್ಗೆ ಹೊಸ ಪೀಳಿಗೆಗೆ ಪರಿಚಯಿಸಿ ಅವರಲ್ಲಿ ಹೆಮ್ಮೆ ತುಂಬಿ ಪ್ರೋತ್ಸಾಹಿಸಿದ್ದು ಮನತಟ್ಟುವಂತಿತ್ತು. 94 ವರ್ಷದ ಹಿರಿಯ ಜೀವಿಗಳಿಂದ ಹಿಡಿದು 10 ವರ್ಷದ ಮಕ್ಕಳೂ ಉತ್ಸಾಹದಿಂದ ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ವಿಶೇಷ ಸಾಧನೆಗೈದ ಹಿರಿ ಕಿರಿಯರಿಗೆ ಸನ್ಮಾನ ಕೂಡ ನೆರವೇರಿತು.

ಇಂದಿನ ಧಾವಂತದ ಜೀವನದೋಟದಲ್ಲಿ ಹಿರಿಯರ-ಕಿರಿಯರ ನಡುವಿನ ಕೊಂಡಿಗಳು ಕಳಚಿಕೊಂಡಿರುವ ಈ ದಿನಗಳಲ್ಲಿ ತಮ್ಮ ಮೂಲ ಬೇರುಗಳೆಡೆಗೆ ಹೊಸ ಪೀಳಿಗೆಯ ಧ್ಯಾನ ಸೆಳೆಯುವ ಸದುದ್ದೇಶದಿಂದ ಈ 'ಪುನರ್ಮಿಲನ'ದ ಸಂಪೂರ್ಣ ಆತಿಥ್ಯವನ್ನು ವಹಿಸಿಕೊಂಡು, ತಮ್ಮ 80 ನೇ ಹುಟ್ಟು ಹಬ್ಬದ ಸಂಧರ್ಭದಲ್ಲಿ ಅರ್ಥಪೂರ್ಣವಾಗಿ ಆಯೋಜಿಸಿದವರು ಕಲಬುರಗಿಯ ಶ್ರೀಮತಿ ಪಾರ್ವತಿ ನೀಲಕಂಠ ನವಣಿಯವರು. ಈ ಸಂಧರ್ಭದಲ್ಲಿ ನವಣಿ ಮನೆತನದ ಇತಿಹಾಸ, ಸಾಧನೆ, ವಂಶಾವಳಿ ಹಾಗೂ ಈಗಿನ ಬಳಗದ ಸಂಪೂರ್ಣ ಮಾಹಿತಿ ಹಾಗೂ ಹಳೆಯ ಹೊಸ ಪೀಳಿಗೆಯ ಭಾವಚಿತ್ರಗಳನ್ನೊಳಗೊಂಡ ಸುಂದರ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಎಲ್ಲರಿಗೂ ವಿತರಿಸಲಾಯಿತು.