ಗ್ಯಾರಂಟಿ ಯೋಜನೆಗಳಿಂದ ಹಿಂದುಳಿದ ವರ್ಗಗಳಿಗೆ ಸರ್ಕಾರದಿಂದ ಮೋಸ: ದೇವೇಂದ್ರ ದೇಸಾಯಿ ಕಲ್ಲೂರ ಕಿಡಿ
ಗ್ಯಾರಂಟಿ ಯೋಜನೆಗಳಿಂದ ಹಿಂದುಳಿದ ವರ್ಗಗಳಿಗೆ ಸರ್ಕಾರದಿಂದ ಮೋಸ: ದೇವೇಂದ್ರ ದೇಸಾಯಿ ಕಲ್ಲೂರ ಕಿಡಿ
ಕಲಬುರಗಿ: ಪ್ರಸ್ತುತ ಸರ್ಕಾರವು ಅಧಿಕಾರಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದಲ್ಲಿ ಅತೀ ಹೆಚ್ಚು ಜನಸಂಖ್ಯೆಯಲ್ಲಿರುವ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡುತ್ತಿದೆ. ಇದರಿಂದ ಆರ್ಥಿಕವಾಗಿ ದಿವಾಳಿಯತ್ತ ಸರ್ಕಾರ ಸಾಗುತ್ತಿದೆಯೇ ಎಂದು ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ನಗರಾಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ಕಿಡಿಕಾರಿದ್ದಾರೆ.
ರಾಜ್ಯದಲ್ಲಿನ ಸಾರಿಗೆ ನಿಗಮಗಳಿಗೆ ಸರ್ಕಾರದಿಂದ ಸುಮಾರು ೬ ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ ಎಂಬ ಮಾಹಿತಿ ಅಲ್ಲಿನ ನೌಕರರ ಸಂಘಗಳ ನಡೆದ ಸಭೆಯಲ್ಲಿ ಬಹಿರಂಗವಾಗಿದೆ. ಅಲ್ಲದೇ ಹಿಂದುಳಿದ ವರ್ಗಗಳ ವಿವಿಧ ಅಭಿವೃದ್ಧಿ ನಿಗಮಗಳಲ್ಲಿನ ಯೋಜನೆಗಳಿಗೆ ಹಣಕಾಸಿನ ಕೊರತೆ ಇದೆ ಎನ್ನಲಾಗಿದೆ. ನಾಮಕವಾಸ್ತೆ ಸಾಲಸೌಲಭ್ಯದ ಸಬ್ಸಿಡಿಗಾಗಿ ಅರ್ಜಿಗಳು ಮಾತ್ರ ಕರೆಯುತ್ತಿದ್ದಾರೆ. ಆದರೆ ಅಭಿವೃದ್ಧಿ ನಿಗಮಗಳಿಗೆ ಇದುವರೆಗೂ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಉಚಿತ ಯೋಜನೆಗಳಿಗೆ ಹಣಕಾಸಿನ ಕೊರತೆಯಾದರೂ ಸರ್ಕಾರದಲ್ಲಿ ಹಣ ಇದೆ ಎಂದು ಹೇಳಿ ಜನಸಾಮನ್ಯರಿಗೆ ಹೊರೆಯಾಗುವಂತೆ ಪೆಟ್ರೋಲ್ ಸೆಸ್ ದರ ಹೆಚ್ಚಳ ಮಾಡಿದ್ದಾರೆ. ಇದರಿಂದಾಗಿ ಸಾಗಾಟ ವೆಚ್ಚವು ಅಧಿಕವಾಗುವದರಿಂದ ಸಾಮಾನ್ಯವಾಗಿ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತವೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಹಗರಣದಲ್ಲಿ ಇರುವುದು ಮೇಲ್ನೋಟಕ್ಕೆ ಕಂಡ ಬಂದರೂ ಮುಖ್ಯಮಂತ್ರಿಗಳು ಭಂಡತನವನ್ನು ತೋರುತ್ತಿದ್ದಾರೆ. ವಿರೋಧ ಪಕ್ಷಗಳ ಮೇಲೆಯೇ ಗೂಬೆ ಕುಡಿಸುವಂತ ಕೆಲಸ ಮಾಡುವದು ಕಾಂಗ್ರೆಸ್ಸಿಗರ ಕೆಲಸ ಎನ್ನುವದು ಮತದಾರರಲ್ಲಿ ಗೊತ್ತಾಗುತ್ತಿದೆ.
ಹಿಂದುಳಿದ ವರ್ಗಗಳಿಂದ ಮೇಲೆ ಬಂದ ಮುಖ್ಯಮಂತ್ರಿಯವರು ಹಿಂದುಳಿದ ವರ್ಗಗಳಿಗೆ ಮೋಸ ಮಾಡುತ್ತಿದ್ದಾರೆ. ಕೂಡಲೇ ಹಿಂದುಳಿದ ವರ್ಗಗಳ ವಿವಿಧ ಅಭಿವೃದ್ಧಿ ನಿಗಮಗಳಿಗೆ ಹಣಕಾಸಿನ ನೆರವು ಬಿಡುಗಡೆ ಮಾಡಬೇಕು. ಮತ್ತು ವಿವಿಧ ಗ್ಯಾರಂಟಿ ಯೋಜನೆಗಳನ್ನು ಕೂಡಲೇ ಕೈಬಿಡಬೇಕು ಎಂದು ದೇವೇಂದ್ರ ದೇಸಾಯಿ ಕಲ್ಲೂರ ಆಗ್ರಹಿಸಿದ್ದಾರೆ.