ಕೆರೆ ದುರಸ್ತಿ, ಸೇತುವೆ ಕಾಮಗಾರಿಗೆ ಶಾಸಕ ಪ್ರಭು ಚವ್ಹಾಣ ಚಾಲನೆ
ಕೆರೆ ದುರಸ್ತಿ, ಸೇತುವೆ ಕಾಮಗಾರಿಗೆ ಶಾಸಕ ಪ್ರಭು ಚವ್ಹಾಣ ಚಾಲನೆ
ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಾಲ್ಲೂಕಿನ ಯನಗುಂದಾ ಗ್ರಾಮದ ಬಳಿ ಸೇತುವೆ, ಬೋಂತಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕೆರೆ ದುರಸ್ತಿ ಕಾಮಗಾರಿಗಳಿಗೆ ಫೆ.22ರಂದು ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಪ್ರತಿ ಮಳೆಗಾಲದಲ್ಲಿ ದೊಡ್ಡ ಮಟ್ಟದ ಅಡಚಣೆ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಯನಗುಂದಾ ಗ್ರಾಮದ ಬಳಿ ಸೇತುವೆ ನಿರ್ಮಾಣದ ಅಗತ್ಯತೆ ಬಹಳ ದಿನಗಳಿಂದ ಕೇಳಿಬರುತ್ತಿತ್ತು. ಕಳೆದ ಮಳೆಗಾಲದ ಸಂದರ್ಭದಲ್ಲಿ ತೀವ್ರ ಮಳೆಯಿಂದಾಗಿ ಸೇತುವೆ ಮುಚ್ಚಿ ಹೋಗಿರುವುದರಿಂದ ಸಾಕಷ್ಟು ದಿನ ಈ ರಸ್ತೆಯ ಮೇಲೆ ಸಂಪೂರ್ಣ ಸಂಚಾರ ಸ್ಥಗಿತಗೊಂಡು ಶಾಲಾ ಮಕ್ಕಳು, ರೈತರು ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಅನಾನುಕೂಲ ಆಗಿತ್ತು.
ನಂತರ ಸರ್ಕಾರದ ಮೇಲೆ ನಿರಂತರ ಒತ್ತಡ ತಂದು ಸೇತುವೆಗೆ 3 ಕೋಟಿ ಅನುದಾನ ತಂದಿದ್ದು, ಇದೀಗ ಸೇತುವೆ ನಿರ್ಮಾಣವಾಗುವುದರಿಂದ ಗ್ರಾಮಸ್ಥರ ಸಂಚಾರ ಸುಗಮವಾಗಲಿದೆ. ರೈತರ ಕೃಷಿ ಉತ್ಪನ್ನಗಳ ಸಾಗಣೆಗೆ ಸಹಾಯವಾಗಲಿದೆ. ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ತೊಡಕು ಬರದಂತೆ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು ಸೂಚಿಸಿದರು.
ಇದಕ್ಕೂ ಮುನ್ನ ರಾಮಸಿಂಗ್ ನಾಯಕ್ ತಾಂಡಾ ಬಳಿ ಅತ್ಯಧಿಕ ಮಳೆಯಿಂದ ಕೊಚ್ಚಿಕೊಂಡು ಹೋಗಿದ್ದ ಕೆರೆ ದುರಸ್ತಿಯ 1.5 ಕೋಟಿ ಮೊತ್ತದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ಭಾಗದಲ್ಲಿ ಜನ ಜಾನುವಾರುಗಳಿಗೆ ನೀರಿನ ಮೂಲವಾಗಿದ್ದ ಕೆರೆ ಕೊಚ್ಚಿಕೊಂಡು ಹೋಗಿದ್ದರಿಂದ ಬೇಸಿಗೆ ಅವಧಿಯಲ್ಲಿ ನೀರಿನ ಅಭಾವ ಉಂಟಾಗುವ ಭೀತಿ ಎದುರಾಗಿತ್ತು. ಆದ್ದರಿಂದ ಬಹಳಷ್ಟು ಒತ್ತು ಕೊಟ್ಟು ಶಿಥಿಲಗೊಂಡ ಎಲ್ಲ ಕೆರೆಗಳ ದುರಸ್ತಿಗಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದು, ನಿರಂತರ ಒತ್ತಡ ಹೇರುತ್ತಾ ಬರುತ್ತಿದ್ದೇನೆ. ಇದೀಗ ಕೆರೆ ನಿರ್ಮಾಣ ಆರಂಭವಾಗಿದ್ದು ಜನತೆಗೆ ಸಂತೋಷವಾಗಿದೆ. ಬೇಸಿಗೆ ಅವಧಿಯಲ್ಲಿ ಜನ-ಜಾನುವಾರುಗಳಿಗೆ ವರದಾನವಾಗಿ ಪರಿಣಮಿಸುವ ಕೆರೆಯ ಕಾಮಗಾರಿ ಅತ್ಯಂತ ಗುಣಮಟ್ಟದಿಂದ ಮಾಡಬೇಕು. ಕಾಮಗಾರಿಯ ಬಗ್ಗೆ ಯಾವುದೇ ರೀತಿಯ ದೂರುಗಳು ಬಾರದ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗ್ರಾಮೀಣ ಭಾಗದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನಾನು ಸದಾ ಬದ್ಧನಾಗಿದ್ದು, ಜನತೆಗೆ ಅತ್ಯವಶ್ಯಕವಿರುವ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಆದ್ಯತೆಯ ಮೇರೆಗೆ ಮಾಡುತ್ತಾ ಬಂದಿದ್ದೇನೆ. ಬಾಕಿ ಉಳಿದಿರುವ ಎಲ್ಲ ಕೆಲಸಗಳನ್ನು ಹಂತ ಹಂತವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ಶಿವರಾಜ ಅಲ್ಮಾಜೆ, ಖಂಡೋಬಾ ಕಂಗಟೆ, ಪ್ರತೀಕ ಚವ್ಹಾಣ, ಶಿವಕುಮಾರ ಮಜಗೆ, ನಾಗನಾಥ ಲಕ್ಕಾ, ರಮೇಶ ಗೌಡಾ, ಜಗದೀಶ ಪಾಟೀಲ, ಅಶೋಕ ಅಲ್ಮಾಜೆ, ಶಿವಕುಮಾರ ಪಾಟೀಲ, ಸೂರ್ಯಕಾಂತ ಅಲ್ಮಾಜೆ, ನಾಗನಾಥ ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
