ಟೆಂಗಳಿ ಅಗಸಿ ರಿಪೇರಿಗೆ ಮನವಿ – ಶಿವರಾಜ ಅಂಡಗಿ
ಟೆಂಗಳಿ ಅಗಸಿ ರಿಪೇರಿಗೆ ಮನವಿ – ಶಿವರಾಜ ಅಂಡಗಿ
ಕಾಳಗಿ ತಾಲ್ಲೂಕಿನ ಟೆಂಗಳಿ ಗ್ರಾಮದಲ್ಲಿರುವ ಐತಿಹಾಸಿಕ ಕೋಟೆಯ ಹೆಬ್ಬಾಗಿಲು (ಅಗಸಿ) ಅನೇಕ ವರ್ಷಗಳಿಂದ ಅವನತಿ ಸ್ಥಿತಿಯಲ್ಲಿದ್ದು, ಅದನ್ನು ತುರ್ತಾಗಿ ರಿಪೇರಿ ಮಾಡಿ ಗ್ರಾಮದ ಐತಿಹಾಸಿಕ ಪರಂಪರೆಯನ್ನು ಉಳಿಸಬೇಕೆಂದು ಟೆಂಗಳಿ ಅಂಡಗಿ ಪ್ರತಿಷ್ಠಾನ ಅಧ್ಯಕ್ಷರಾದ ಶ್ರೀ ಶಿವರಾಜ ಅಂಡಗಿ ಅವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಭಂವರಸಿಂಗ್ ಮೀನಾ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಸರ್ಕಾರದ ಗ್ರಾಮೀಣಾಭಿವೃದ್ಧಿಯನ್ನು ವೇಗಗೊಳಿಸಿ ಸ್ವಾವಲಂಬಿ ಹಾಗೂ ಸಶಕ್ತ ಗ್ರಾಮ ನಿರ್ಮಿಸುವ ಉದ್ದೇಶದಿಂದ ರೂಪಿಸಲಾದ ಕಾಯಕ ಗ್ರಾಮದ ಕಾರ್ಯಕ್ರಮ ಯೋಜನೆಯಡಿಯಲ್ಲಿ ಗ್ರಾಮಗಳ ಆರ್ಥಿಕ, ಸಾಮಾಜಿಕ, ಪರಿಸರ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಈ ಹಿನ್ನೆಲೆ ಟೆಂಗಳಿ ಗ್ರಾಮದ ಕೋಟೆಯು ನೃಪತುಂಗ ರಾಜನ ಕಾಲದಲ್ಲಿ ನಿರ್ಮಾಣಗೊಂಡ ಮಹತ್ವದ ಐತಿಹಾಸಿಕ ಸ್ಮಾರಕವಾಗಿದ್ದು, ಅದರ ಹೆಬ್ಬಾಗಿಲು (ಅಗಸಿ) ಜೀರ್ಣೋದ್ಧಾರ ಅಗತ್ಯವಾಗಿದೆ ಎಂದು ಶಿವರಾಜ ಅಂಡಗಿ ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ 17.05.2025 ರಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆಯೋಜಿಸಿದ್ದ ಸಾರ್ವಜನಿಕ ಫೋನ್-ಇನ್ ಕಾರ್ಯಕ್ರಮದಲ್ಲಿ ಶಿವರಾಜ ಅಂಡಗಿ ಅವರು ಸಮಸ್ಯೆಯನ್ನು ಪ್ರಸ್ತಾಪಿಸಿದ್ದು, ಅದಕ್ಕೆ ಸ್ಪಂದಿಸಿದ ಶ್ರೀ ಭಂವರಸಿಂಗ್ ಮೀನಾ ಅವರು ತಾಲೂಕು ಅಧಿಕಾರಿಗಳಿಗೆ ಅಗಸಿ ರಿಪೇರಿ ಕಾಮಗಾರಿಗೆ ಅಂದಾಜು ವೆಚ್ಚ (ಎಸ್ಟಿಮೇಟ್) ತಯಾರಿಸುವಂತೆ ಆದೇಶ ನೀಡಿದ್ದರು. ಅದರಂತೆ ತಾಲೂಕು ಅಧಿಕಾರಿಗಳು ಈಗಾಗಲೇ ಸುಮಾರು 16 ಲಕ್ಷ ರೂ. ಮೊತ್ತದ ಅಂದಾಜು ಎಸ್ಟಿಮೇಟ್ ತಯಾರಿಸಿ ಸಲ್ಲಿಸಿರುವುದಾಗಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸದರಿ ಕಾಮಗಾರಿಯನ್ನು ಕಾಯಕ ಗ್ರಾಮದ ಕಾರ್ಯಕ್ರಮ ಯೋಜನೆಯಡಿಯಲ್ಲಿ ಅಥವಾ ಜಿಲ್ಲಾ ಪಂಚಾಯತ್ ಅಭಿವೃದ್ಧಿ ಕಾಮಗಾರಿಯ ಅಡಿಯಲ್ಲಿ ಶೀಘ್ರವಾಗಿ ಅನುಷ್ಠಾನಗೊಳಿಸಿ, ಟೆಂಗಳಿ ಗ್ರಾಮದ ಅಮೂಲ್ಯ ಐತಿಹಾಸಿಕ ಪರಂಪರೆಯನ್ನು ಉಳಿಸಬೇಕೆಂದು ಮನವಿ ಪತ್ರದಲ್ಲಿ ಕೋರಲಾಗಿದೆ. ದಿನಾಂಕ 26.12.2025 ರಂದು ಈ ಮನವಿಯನ್ನು ಸಲ್ಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
