"ಸಾಹಿತಿಗಳ ಜೊತೆ ಮುಕ್ತ ಸಂವಾದ "ದಲ್ಲಿ ಕಾದಂಬರಿಕಾರ ನಾಗರಾಜ ವಸ್ತಾರೆ ಹೇಳಿಕೆ
"ಸಾಹಿತಿಗಳ ಜೊತೆ ಮುಕ್ತ ಸಂವಾದ "ದಲ್ಲಿ ಕಾದಂಬರಿಕಾರ ನಾಗರಾಜ ವಸ್ತಾರೆ ಹೇಳಿಕೆ
ಕಥೆ,ವಿನ್ಯಾಸ, ಜೀವನಕ್ಕೂ ಗಾಢ ಸಂಬಂಧ ಹೆಣೆದಿದೆ
(ವರದಿ : ಡಾ. ಸದಾನಂದ ಪೆರ್ಲ) ಕಲ್ಯಾಣ ಕಹಳೆ ವಾರ್ತೆ
ಕಲಬುರಗಿ : ಕತೆಗೆ ಚೌಕಟ್ಟು ಇದ್ದಂತೆ ವಾಸ್ತು ವಿನ್ಯಾಸಕ್ಕೆ ಮತ್ತು ಜೀವನಕ್ಕೆ ತನ್ನದೇ ಆದ ಚೌಕಟ್ಟು ಇದ್ದರೆ ಮಾತ್ರ ಗಾಢವಾದ ಸಂಬಂಧ ಬೆಳೆದು ಯಶಸ್ಸಿನ ಹೆಜ್ಜೆ ಹಾಕಲಾಗುತ್ತದೆ ಎಂದು ಖ್ಯಾತ ಕತೆಗಾರ ಕಾದಂಬರಿಕಾರ, ವಾಸ್ತು ವಿನ್ಯಾಸಕಾರ ನಾಗರಾಜ ವಸ್ತಾರೆ ಅಭಿಪ್ರಾಯಪಟ್ಟರು.
ಕಲಬುರಗಿಯ ಶರಣಬಸವೇಶ್ವರ ಕೆರೆಯ ದೋಣಿ ವಿಹಾರ ಕೇಂದ್ರದಲ್ಲಿ ಡಿ. 14ರಂದು (ಭಾನುವಾರ) ಇಂಡಿಯನ್ ಇನ್ಸ್ಟಿಟ್ಯೂಟ್ ಆರ್ಕಿಟೆಕ್ಟ್ ಕಲಬುರಗಿ ಕೇಂದ್ರದ ಡಿಸೈನ್ ತತ್ವಗಳು ಸರಣಿಯ ಅಂಗವಾಗಿ ಏರ್ಪಡಿಸಿದ ಸಾಹಿತಿಗಳೊಡನೆ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ಕತೆ,ಕವನ ಕಟ್ಟುವ ಬಗೆ ಅನಾವರಣಗೊಳ್ಳುವುದು ಚೌಕಟ್ಟಿನ ಮೇಲೆಯೇ ಹೊರತು ಕೇವಲ ಅಕ್ಷರ ಜೋಡಣೆಯಿಂದ ಅಲ್ಲ. ಹಾಗೆಯೇ ವಾಸ್ತು ವಿನ್ಯಾಸ ಒಂದು ಚೌಕಟ್ಟಿನಲ್ಲಿ ರೂಪು ಪಡೆದರೆ ಮಾತ್ರ ಅದಕ್ಕೊಂದು ಸೌಂದರ್ಯ ಒದಗುತ್ತದೆ.ಅದೇ ರೀತಿ ಜೀವನವು ಕಷ್ಟ ಸುಖಗಳ ನಡುವೆ ಏರಿಳಿತಗಳ ನಡುವೆ ಸಾಗುವಾಗ ನಿರ್ದಿಷ್ಟ ಚೌಕಟ್ಟನ್ನು ಒದಗಿಸಿದರೆ ವ್ಯಕ್ತಿತ್ವ ಬೆಳೆದು ಅರ್ಥವಂತಿಕೆ ಪಡೆಯುತ್ತದೆ. ಕವಿತೆ, ಕತೆ, ಕಾದಂಬರಿಗಳ ಸೌಂದರ್ಯ ಆಸ್ವಾದನೆ ವಾಸ್ತು ವಿನ್ಯಾಸದ ಸುಂದರ ಸೊಬಗು ಹಾಗೂ ಜೀವನದ ಯಶಸ್ಸಿನ ಮೆಟ್ಟಿಲು ಎಲ್ಲವೂ ಚೌಕಟ್ಟುಗಳ ನಡುವೆ ಗಾಢ ಸಂಬಂಧ ಹೊಂದಿರುತ್ತದೆ ಎಂದರು.
ನಿಯುಕ್ತಿ ಪುರಾಣ, ಹಕೂನ ಮಟಾಟ, ನಿಯುಕ್ತಿ ಪುರಾಣ ನಿರವಯವ, ನೂರೆಂಭತ್ತನೆ ಡಿಗ್ರಿ _ 180, ವಸ್ತಾರೆ ಪದ್ಯಗಳು, ಕಮಾನು ಕಟ್ಟುಕಥೆ ಕಟ್ಟುಪಾಡು ಮುಂತಾದ ಮೌಲಿಕ ಸಾಹಿತ್ಯ ಕೃತಿಗಳನ್ನು ನೀಡಿ ಅಂಕಣಕಾರರಾಗಿ ಗುರುತಿಸಿಕೊಂಡ ವಸ್ತಾರೆ ಅವರು ಸಾಹಿತಿಗಳ ಪ್ರಶ್ನೆಗೆ ಉತ್ತರಿಸುತ್ತ ಭಾಷೆ ಇದಕ್ಕುವುದು ಅಕ್ಷರಗಳ ಸಾಧನೆಯಿಂದ ಅಲ್ಲ. ಅನುಭವದ ಮತ್ತು ವಾಸ್ತವಿಕತೆಯ ನೆಲೆಗಟ್ಟಿನಲ್ಲಿ, ಹಾಗೆಯೇ ಹಸಿವು ವ್ಯಕ್ತಿಗೆ ಗುರಿಯನ್ನು ತೋರುತ್ತದೆ. ಕನ್ನಡ ಕಳೆದು ಹೋಗುತ್ತಿರುವ ರಾಜಧಾನಿಯಲ್ಲಿ ಇಂಗ್ಲೀಷ್ ಭಾಷೆ ವೃತ್ತಿಗೆ ಆಸರೆಯಾದರೂ ಭಾಷಾ ಪ್ರೇಮದಿಂದ ಕನ್ನಡವನ್ನು ಗಟ್ಟಿಯಾಗಿ ಹಿಡಿಯುವಂತೆ ಮಾಡಿದೆ. ವಾಸ್ತು ಮೌಢ್ಯವೆಂದು ಜರೆಯುವವರ ನಡುವೆ ಬಲುದೊಡ್ಡ ವಿಶ್ವಾಸಿಗರ ಗುಂಪು ಬಲವಾಗಿ ನೆಲೆಗೊಂಡಿದೆ. ಇವೆರಡನ್ನು ಸರಿ ತೂಗಿಸುವ ತಾಳ್ಮೆ, ವ್ಯವಧಾನ ರೂಡಿಸ ಬೇಕು. ಲೇಖಕನಿಂದ ವಾಸ್ತವಿಕ ನೆಲಗಟ್ಟಿನ ಬರಹ ಸೃಜನೆಯಾದರೆ ಓದುಗರನ್ನು ಆಕರ್ಷಿಸುವ ಶಕ್ತಿ ಸಾಧ್ಯ. ವಾಸ್ತು ವಿನ್ಯಾಸಕಾರನಾಗಿದ್ದರೂ ಸಾಹಿತ್ಯ ಕೃಷಿ ರೂಢಿಸಿ ಎರಡರಲ್ಲೂ ಯಶಸ್ವಿ ಹೆಜ್ಜೆ ಇಡಲು ಸಾಧ್ಯವಾಗಿರುವುದು ಬದುಕಿನ ಅನಿವಾರ್ಯತೆಯ ಭೂಮಿಕೆಯಲ್ಲಿ ಎಂದು ಸ್ಪಷ್ಟಪಡಿಸಿದರು.
ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಸಂವಾದಕ್ಕೆ ಚಾಲನೆ ನೀಡಿ ವಾಸ್ತು ವಿನ್ಯಾಸಕಾರನೊಬ್ಬ ಸಾಹಿತಿಯಾಗಿ ಬೆಳೆದು ಬಂದ ಬಗೆಯನ್ನು ಪ್ರಶ್ನಿಸಿದರೆ, ಕವಿತೆ ಮತ್ತು ವಾಸ್ತುವಿಗೆ ಚೌಕಟ್ಟಿನ ಸಂಬಂಧವನ್ನು ಕಟ್ಟಿದ ಬಗ್ಗೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ವಿಕ್ರಮ ವಿಸಾಜಿ ಕೇಳಿದರು. ಶಂಕ್ರಯ್ಯ ಘಂಟಿಯವರು "ಲಿವಿಂಗ್ ಟುಗೆದರ್"ಕಥೆಯಲ್ಲಿ ಜೀವಪರತೆ ಮೂಡಿದ ಚಿತ್ರಣ ಹಾಗೂ ತಳದಿಂದ ಮುಗಿಲು ಮುಟ್ಟುವ ದಿವ್ಯಾನುಭೂತಿಯ ಆಶಯವನ್ನು ಹೇಳಿದ ಬಗೆಯು ಮಹಾದೇವಿಯಕ್ಕನ ಆಶಯವನ್ನು ಹೊಂದಿದೆ ಎಂದು ಗುರುತಿಸಿ ವಿಶ್ಲೇಷಿಸಿದರು. ರಾಘವೇಂದ್ರ ಮೈಲಾಪುರವರು ವಾಸ್ತು ಮೂಢನಂಬಿಕೆಯೆ? ಎಂದು ಪ್ರಶ್ನಿಸುವ ಮೂಲಕ ವಾಸ್ತು ವಿನ್ಯಾಸದ ನಿಜ ನೋಟವನ್ನು ತೆರೆದು ಕೊಡುವಂತೆ ಮಾಡಿದರು. ಇತಿಹಾಸ ಆಧಾರಿತ ಕಥೆ ಹೆಣೆಯುವ ಭರದಲ್ಲಿ ಕಥೆ ಬೆಳೆಸುವ ಏರಿಳಿತದಲ್ಲಿ ಇತಿಹಾಸಕ್ಕೆ ಅಪಚಾರವಾಗುವದಿಲ್ಲವೇ? ಎಂದು ಇತಿಹಾಸ ತಜ್ಞ ಡಾ. ಶಂಭುಲಿಂಗ ವಾಣಿ ಉತ್ತರ ಬಯಸಿದರು. ಸಂವಾದ ಕಾರ್ಯಕ್ರಮಕ್ಕೆ ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದ ವಾಸ್ತು ವಿನ್ಯಾಸಕಾರ ಭರತ್ ಭೂಷಣ್ ನಂತರ ನಿಯುಕ್ತಿ ಪುರಾಣ ಕೃತಿಯ ಕುರಿತು ಉಲ್ಲೇಖಿಸಿ ಲೇಖಕನ ಮನೋಧರ್ಮವನ್ನು ತೆರೆದುಕೊಡಲು ಗಮನ ಸೆಳೆದರು.
ಸಂವಾದದಲ್ಲಿ ಬಸವ ಪ್ರಭು, ಮಹಾಂತೇಶ ನವಲಕಲ್, ಬಸವರಾಜ್ ಖಂಡೆ ರಾವ್, ಡಾ. ಶಂಕರಪ್ಪ ಹತ್ತಿ ಕೋದಂಡರಾಮ ಬಾಬುರಾವ್, ಪರಶುರಾಮ್, ಸಿ.ಸಿ ಪಾಟೀಲ್, ಸುನಿಲ್ ಕುಲಕರ್ಣಿ, ಆಕಾಶ್ ತೊನಸನಹಳ್ಳಿ, ಸ್ವರೂಪ್ ಶೆಟಕಾರ್,ಅಶುತೋಷ್ ಬಿ, ಇಷ್ಟಲಿಂಗ ಮಹಾ ಗಾವ್ಕರ್ ದೌಲತ್ ರಾಯ್ ದೇಸಾಯಿ ಗುರುಲಿಂಗ ಅರಳಿ,ಬಾಬು ರಾವ್ ಶೇರಿಕಾರ್ ಮತ್ತಿತರರು ಪಾಲ್ಗೊಂಡರು. ನಂತರ ನಾಗರಾಜ ವಸ್ತಾರೆ ಮತ್ತು ಸೇರಿದಂತೆ 25ಕ್ಕೂ ಹೆಚ್ಚು ಸಾಹಿತಿಗಳು ದೋಣಿ ವಿಹಾರ ನಡೆಸಿ ಶರಣಬಸವೇಶ್ವರ ಕೆರೆಯ ಸೌಂದರ್ಯವನ್ನು ಸವಿದರು.
