ಒಂಟಿಧ್ವನಿ
" ಒಂಟಿಧ್ವನಿ "
ಅದೆಲ್ಲಿಂದಲೋ
ತೇಲಿ ಬರುತಿರುವ
ಹಿತವಾದ ಸಂಗೀತವನು
ಕೇಳುವಾಗಲೂ
ಎಂಥದೋ ಒಂದು ಸಂಕಟಭರಿತ
ಚೀತ್ಕಾರದ ಧ್ವನಿಯೊಂದು
ನನ್ನ ಚಿತ್ತವನ್ನು ಸದಾ
ಕೆದುಕುತ್ತಲೇ ಇದೆ.
ದೂರದ ಎಲ್ಲೋ ಒಂದು
ಏಕಾಂಗಿ ದೇಗುಲದ
ಸುಂದರ ಮೌನದಲಿ ಕೇಳುವ
ಘಂಟೆ ನಾದದಲೂ ಕೂಡ
ಹಿಂದೆ ಅಡಗಿರುವ
ಕರಾಳ ಕತ್ತಲೆಯಲಿ ಹುದುಗಿರುವ
ದೇವದಾಸಿಯರ ರಕ್ತಮಾಂಸದ ಗದ್ದಲು
ನನ್ನ ಜಿಗುಪ್ಸೆಗೆ ಕಾರಣವಾಗುತ್ತಿದೆ.
ಅಗೋ ಅಲ್ಲಿ
ಆ ತಾಯಿ ಮಮತೆಯ
ಲಾಲಿ ಹಾಡಿನ ಹಿಂದೆಯೇ
ಮತ್ತಂಥದೇ ಹೆಣ್ಣಿನ
ಕರ್ಕಶ ನರಳಾಟದ ರಿಂಗಣ
ಕರುಳ ಹಿಂಡಿದಂತಾಗುತ್ತಿದೆ.
ಇಲ್ಲ...
ಪ್ರತೀ ಹೆಣ್ಣಿನ ಕಥೆಯೇ ಇಷ್ಟು
ಸಾಗುವ ಪ್ರತೀ ಹಾದಿಗೂ
ಒಂದೊಂದು ಅದ್ಭುತ ಗೋಡೆ.
ಹತಾಶೆಯಿಂದ ಬೇಯುವುದು ಮಾತ್ರ
ಅನಿವಾರ್ಯವೇನೋ.
ಸುಮ್ಮನೇ ನೋಡಲ್ಲಿ
ಆ... ಪ್ರೇಮ ಪಕ್ಷಿಗಳ
ಪಿಸುಮಾತಿನ ಸಂವಾದ
ನನ್ನಲ್ಲಿ ನಶೆಯ ಅಲೆಗಳನ್ನೇನೋ ಸೃಷ್ಟಿಸಿದೆ.
ಆದರೆ,
ಮೋಸ ವಂಚನೆಗಳ
ಕರಾಳ ಛಾಯೆಯೊಂದು
ಮನಃಪಟಲದಲಿ
ಸುಳಿದು ಹೋದಂತಾಗುತಿದೆ.
ನಿಜಾ...
ಆ ಒಂಟಿ ಧ್ವನಿಯ
ಕರೆಯನು ಕೇಳಿದಾಗಲೆಲ್ಲ
ಅಂತಿಮ ಯಾತ್ರೆಯ
ಪ್ರಶಾಂತ ಅನುಭೂತಿಯೊಂದು ಮಾತ್ರ
ಬೆಚ್ಚಗೆ ಕಾದು ಕುಳಿತುಬಿಟ್ಟಿದೆ.
*ಡಾ. ನಾಗರತ್ನಾ ಅಶೋಕ ಭಾವಿಕಟ್ಟಿ*