ಅಟ್ಟಿಸಿಕೊಂಡು ಹೋಗುತ್ತಿದ್ದಾಗ ಇಬ್ಬರು ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ

ಅಟ್ಟಿಸಿಕೊಂಡು ಹೋಗುತ್ತಿದ್ದಾಗ ಇಬ್ಬರು ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ

ಕುಖ್ಯಾತ ದರೋಡೆಕೋರ ಅವತಾರ ಸಿಂಗ್ ಕಾಲಿಗೆ ಗುಂಡು

ಕಲಬುರಗಿ: ನಗರ ಹೊರವಲಯದ ಬೇಲೂರು ಕ್ರಾಸ್ ಬಳಿ ಕುಖ್ಯಾತ ದರೋಡೆಕೋರ ಅವತಾರ ಸಿಂಗ್ ಕಾಲಿಗೆ ಗುಂಡು ಹಾರಿಸಲಾಗಿದೆ. ಡಕಾಯಿತ ಪ್ರಕರಣವೊಂದರಲ್ಲಿ ಬಂಧನಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ. 

 ಜೀವ ಬೆದರಿಕೆ, ಡಕಾಯಿತಿ ಸೇರಿದಂತೆ 13 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ರೌಡಿ ಶೀಟರ್, ಪಂಚಶೀಲನಗರದ ನಿವಾಸಿ ಅವತಾರ್ ಸಿಂಗ್‌ ತನ್ನನ್ನು ಬೆನ್ನಟ್ಟಿದ ಇಬ್ಬರು ಪೊಲೀಸರ ಮೇಲೆ ಚಾಕುವಿನಿಂದ ಶನಿವಾರ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ‍ಸಬ್ ಅರ್ಬನ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಸಂತೋಷ ತಟ್ಟೆಪಳ್ಳಿ ಅವರು ಆತ್ಮರಕ್ಷಣೆಗಾಗಿ ರೌಡಿ ಶೀಟರ್ ಕಾಲಿಗೆ ಗುಂಡು ಹಾರಿಸಿದ್ದಾರೆ. 

ಗಾಯಗೊಂಡ ಸಬ್ ಅರ್ಬನ್ ಠಾಣೆಯ ಪೊಲೀಸ್ ಸಿಬ್ಬಂದಿ ಭೀಮಾ ನಾಯಕ್, ಮಂಜುನಾಥ್ ಹಾಗೂ ಆರೋಪಿ ಅವತಾರ್ ಸಿಂಗ್‌ನನ್ನು ಜಿಮ್ಸ್‌ನ ಟ್ರಾಮಾ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಏಪ್ರಿಲ್ ತಿಂಗಳಲ್ಲಿ ಕಲಬುರಗಿ–ಆಳಂದ ರಸ್ತೆಯ ಪಟ್ಟಣ ಕ್ರಾಸ್‌ನಲ್ಲಿರುವ ಡಾಬಾವೊಂದರಲ್ಲಿ ಅವತಾರ್ ಸಿಂಗ್ ದರೋಡೆ ನಡೆಸಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆತನ ಹುಡುಕಾಟದಲ್ಲಿದ್ದರು.

ಶನಿವಾರ ಬೇಲೂರು ಕ್ರಾಸ್‌ನ ಸಿದ್ಧಾರೂಡ ಕಾಲೊನಿಯಲ್ಲಿರುವ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಲು ಮುಂದಾಗಿ ಆತನನ್ನು ಬೆನ್ನಟ್ಟಿದರು. ಈ ಸಂದರ್ಭದಲ್ಲಿ ತನ್ನನ್ನು ಹಿಡಿಯಲು ಬಂದ ಭೀಮಾ ನಾಯಕ್ ಮತ್ತು ಮಂಜುನಾಥ ಅವರಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ. 

ತಕ್ಷಣ ಕಾರ್ಯಪ್ರವೃತ್ತರಾದ ಪಿಐ ಸಂತೋಷ ಅವರು ಆತ್ಮರಕ್ಷಣೆಗಾಗಿ ಅವತಾರ್ ಸಿಂಗ್‌ ಬಲ ಗಾಲಿಗೆ ಗುಂಡು ಹಾರಿಸಿದರು. ಗಾಯಗೊಂಡ ಪೊಲೀಸ್ ಸಿಬ್ಬಂದಿ ಹಾಗೂ ಆರೋಪಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.

2023ರ ಜೂನ್‌ನಲ್ಲಿ ಜೇವರ್ಗಿಯ ಹುಲ್ಲೂ‌ರು ಗ್ರಾಮದ ಬಳಿ ಮರಳು ಅಕ್ರಮ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರ್ಯಾಕ್ಟರ್ ಮಾಲೀಕ, ರೌಡಿ ಶೀಟರ್ ಸಾಯಿಬಣ್ಣ ಕರ್ಜಗಿಯನ್ನು ಕರೆತರುವ ವೇಳೆ ಪಿಎಸ್‌ಐ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಕ್ಕೆ ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು. ಅದಾದ ಬಳಿಕ ಶೂಟೌಟ್‌ಗಳು ವಿರಳವಾಗಿದ್ದವು. ಈಗ ಮತ್ತೆ ಗುಂಡಿನ ಸದ್ದು ಕೇಳಿಬಂದಿದೆ.