ಕಬ್ಬು ಬೆಳೆಗಾರರ ಹಿತಕ್ಕಾಗಿ ಡಿ.9 ರಿಂದ ಕಲಬುರಗಿಯಲ್ಲಿ ಧರಣಿ ಸತ್ಯಾಗ್ರಹ
ಕಬ್ಬು ಬೆಳೆಗಾರರ ಹಿತಕ್ಕಾಗಿ ಡಿ.9 ರಿಂದ ಕಲಬುರಗಿಯಲ್ಲಿ ಧರಣಿ ಸತ್ಯಾಗ್ರಹ
ಕಲಬುರಗಿ: ಕಬ್ಬು ಬೆಳೆಗಾರರ ಸಂರಕ್ಷಣೆ ಹಾಗೂ ರೈತರ ಬೇಡಿಕೆಗಳು ಇಡೇರಿಕೆಯನ್ನು ಒತ್ತಾಯಿಸಿ ಡಿಸೆಂಬರ್ 9 ರಿಂದ ಡಿಸಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಆರಂಭವಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತಗೌಡ ನಂದಿಹಳ್ಳಿ ತಿಳಿಸಿದ್ದಾರೆ.
ಭಾನುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದ್ದು, ಕಬ್ಬಿಗೆ ಏಕರೂಪದ ದರ ನಿಗದಿ ಮಾಡುವುದೇ ಪ್ರಮುಖ ಬೇಡಿಕೆ ಎಂದರು.
ಪ್ರಸ್ತುತ ಕಬ್ಬು ಟನ್'ಗೆ ₹3,300 ದರ ನಿಗದಿ ಮಾಡಬೇಕು, ಸಕ್ಕರೆ ಇಳುವರಿಯಲ್ಲಿ ನಡೆಯುತ್ತಿರುವ ಅನ್ಯಾಯ ತಡೆಯಬೇಕು ಹಾಗೂ ತೂಕದಲ್ಲಿ ನಡೆಯುವ ಮೋಸಕ್ಕೆ ಅಳವಡಿಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಬ್ಬಿನ ಉಪ ಉತ್ಪನ್ನಗಳಲ್ಲಿ 50% ಲಾಭಾಂಶವನ್ನು ರೈತರಿಗೆ ನೀಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಕೇಳಿಕೊಂಡರು. ಟನ್'ಗೆ ₹3,165 ದರ ನೀಡುವುದಾಗಿ ಸುಳ್ಳು ಭರವಸೆ ನೀಡಿದ ಆಹಾರ ಇಲಾಖೆಯ ಉಪ ನಿರ್ದೇಶಕರನ್ನು ಅಮಾನತು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಮಾತನಾಡಿ, ಕೆಎಂಎಫ್ ಮಾದರಿಯಲ್ಲಿ ತೊಗರಿ ಖರೀದಿ ಕೇಂದ್ರ ತೆರೆಯಬೇಕು, ಕ್ವಿಂಟಾಲ್'ಗೆ ಇರುವ ₹8,000 ಎಂ.ಎಸ್.ಪಿ ದರಕ್ಕೆ ಕೇಂದ್ರ–ರಾಜ್ಯ ಸರ್ಕಾರಗಳು ತಲಾ ₹1,000 ಪ್ರೋತ್ಸಾಹ ಧನ ನೀಡಬೇಕೆಂದರು. ತೊಗರಿ ಸೇರಿ ಎಲ್ಲ ಬೆಳೆಗಳಿಗೆ ಎಂಎಸ್‌ಪಿ ಕಾನೂನು ಜಾರಿಗೊಳಿಸುವುದು ತುರ್ತು ಅಗತ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಮಾಪತಿ ಪಾಟೀಲ್, ಶಿವರಾಜ ಪಾಟೀಲ್ ಗೊಣಗಿ, ಸುಂದರ ಡಿ. ಸಾಗರ, ವೀರಣ್ಣ ಗಂಗಾಣಿ , ಸುಶೀಲಾ ಎಂ. ಪೂಜಾರಿ, ಸಿದ್ದು ಎಸ್.ಎಲ್., ಮಂಜುಳಾ ಭಜಂತ್ರಿ, ಕರೆಪ್ಪ ಕರಗೊಂಡ ,ಜಗನ್ನಾಥ ಅಲಬಾ, ಮಹಾದೇವಿ ಭಜಂತ್ರಿ ಸೇರಿದಂತೆ ಅನೇಕ ರೈತ ನಾಯಕರು ಉಪಸ್ಥಿತರಿದ್ದರು.
ರೈತರ ಸಾಲ ಮನ್ನಾ ಮಾಡಿ ಆತ್ಮಹತ್ಯೆ ಪ್ರಕರಣಗಳಿಗೆ ತಡೆಗಟ್ಟುವ ಕ್ರಮ ಕೈಗೊಳ್ಳಬೇಕು. ಪಂಪಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ 12 ಗಂಟೆಗಳ ನಿರಂತರ ವಿದ್ಯುತ್ ಪೂರೈಕೆ ಒದಗಿಸಬೇಕು ಹಾಗೂ ತೊಗರಿ ಬೋರ್ಡ್ ಅನ್ನು ಬಲಪಡಿಸಲು ಸರ್ಕಾರ ಮುಂದಾಗಬೇಕು ಎಂಬುದು ಸಭೆಯಲ್ಲಿ ವ್ಯಕ್ತವಾದ ಮತ್ತೊಂದು ಒತ್ತಾಯ.
ಎಲ್ಲ ಬೆಳೆಗಳಿಗೆ ಎಂಎಸ್‌ಪಿ ಕಾನೂನು, ಸಾಲ ಮನ್ನಾ ಮತ್ತು 12 ಗಂಟೆಗಳ ಹಗಲು ವಿದ್ಯುತ್ ಪೂರೈಕೆಯನ್ನು ತಕ್ಷಣ ಜಾರಿಗೊಳಿಸುವಂತೆ
- ಮಹಾಂತಗೌಡ ನಂದಿಹಳ್ಳಿ
- ಅಧ್ಯಕ್ಷರು -ಕರ್ನಾಟಕ ರಾಜ್ಯ ರೈತ ಸಂಘ
ವರದಿ ಹಣಮಂತ ದಂಡಗುಲ್ಕರ್
