ಎಬಿಇಸಿಟಿ ಟ್ರಸ್ಟ್‌ನಿಂದ 100 ಹಾಸಿಗೆಗಳ ನವೀನ ಆಸ್ಪತ್ರೆ—ಡಿ.7ರಂದು ಲೋಕಾರ್ಪಣೆ
ಕಲಬುರಗಿಯಲ್ಲಿ 100 ಹಾಸಿಗೆ ಸಾಮರ್ಥ್ಯದ ಅಲ್-ಬದರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಲೋಕಾರ್ಪಣೆ
ಕಲಬುರಗಿ: ನಗರದ ಬಡೇಪುರ ಕಾಲೋನಿಯ ಮನ್ನಬ್ಬಾರ್ ಲೇಔಟ್‌ನಲ್ಲಿ ಎಬಿಇಸಿಟಿ ಟ್ರಸ್ಟ್ ಮೂಲಕ ನಿರ್ಮಿಸಲಾದ 100 ಹಾಸಿಗೆ ಸಾಮರ್ಥ್ಯದ ಅಲ್-ಬದರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (ಎಬಿಎಂಎಸ್)ಯ ಲೋಕಾರ್ಪಣೆ ಡಿಸೆಂಬರ್ 7ರಂದು ಬೆಳಗ್ಗೆ 11.30ಕ್ಕೆ ನಡೆಯಲಿದೆ ಎಂದು ಆಸ್ಪತ್ರೆಯ ಚೇರ್ಮನ್ ಡಾ. ಎಂ.ಎ. ಮುಜೀಬ್ ತಿಳಿಸಿದ್ದಾರೆ.
ನೂತನ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಜರತ್ ಖಾಜಾ ಬಂದಾನವಾಜ್ ದರ್ಗಾದ ಸಜ್ಜಾದ ನಶೀನ್ ಹಾಗೂ ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಕುಲಪತಿ ಹಫೀಜ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ಸಾಹೇಬ್ ಅವರ ಸಾನ್ನಿಧ್ಯದಲ್ಲಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಐಟಿ–ಬಿಟಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡುವರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ಸಂಸದ ರಾಧಾಕೃಷ್ಣ ಡಿ, ಕ್ಷೇಣ–ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ. ಅಜಯಸಿಂಗ್, ಕರ್ನಾಟಕ ರೇಷ್ಮೆ ಉದ್ಯಮ ನಿಗಮದ ಅಧ್ಯಕ್ಷೆ ಹಾಗೂ ಕಲಬುರಗಿ ಉತ್ತರ ಶಾಸಕ ಕನೀಜ್ ಫಾತಿಮಾ, ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ, ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಅಳಂದ ಶಾಸಕ ಬಿ.ಆರ್. ಪಾಟೀಲ್ ಮುಂತಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಆಸ್ಪತ್ರೆಯ ಸೌಲಭ್ಯಗಳು
100 ಹಾಸಿಗೆ ಸಾಮರ್ಥ್ಯದ ಈ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ
* ನೇತ್ರ
* ದಂತ
* ಬಾಯಿ ಮತ್ತು ಮುಖಸೌಂದರ್ಯ ಶಸ್ತ್ರಚಿಕಿತ್ಸೆ
* ಇಂಟರ್ನಲ್ ಮತ್ತು ಜನರಲ್ ಮೆಡಿಸಿನ್
* ಅರ್ಥೋಪೀಡಿಕ್ಸ್ ಹಾಗೂ ಟ್ರಾಮಾ ಕೇರ್
* ಮಕ್ಕಳ ಚಿಕಿತ್ಸಾ ವಿಭಾಗ
* ಶ್ವಾಸಕೋಶ ಚಿಕಿತ್ಸಾ ವಿಭಾಗ
* ಪ್ರಸೂತಿ ಮತ್ತು ಹೆರಿಗೆ
* ಕಿವಿ–ಮೂಗು–ಗಂಟಲು (ENT) ವಿಭಾಗಗಳು ಚಾಲನೆಯಲ್ಲಿದ್ದವು ಎಂದು ಡಾ. ಮುಜೀಬ್ ವಿವರಿಸಿದರು.
ಹೆಚ್ಚಿನ ಸೌಲಭ್ಯವಾಗಿ 20 ಹಾಸಿಗೆ ಸಾಮರ್ಥ್ಯದ ಐಸಿಯು ಮತ್ತು 5 ಹಾಸಿಗೆ ಸಾಮರ್ಥ್ಯದ ಎನ್‌ಐಸಿಯು ವ್ಯವಸ್ಥೆ ಅಳವಡಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಎಬಿಇಸಿಟಿ ಟ್ರಸ್ಟ್ ಸಂಸ್ಥಾಪಕ ಟ್ರಸ್ಟಿ ಡಾ. ಸೈಯದ್ ರಹಮತುಲ್ಲಾ, ಟ್ರಸ್ಟಿಗಳಾದ ಎಂ.ಎ. ನಜೀಬ್, ಸೈಯದ್ ಸನಾವುಲ್ಲಾ, ಡಾ. ಸೈಯದ್ ಝಕಾವುಲ್ಲಾ, ಡಾ. ಅರ್ಷದ್ ಹುಸೇನ್, ಎಂ.ಅಮನ್ ಮುಜೀಬ್, ಡಾ. ರಿಜ್ವಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
