ಬೀದರ್‌ನಲ್ಲಿ ಎಸ್.ಎಂ. ಜನವಾಡಕರ್ ಬದುಕು-ಬರಹ ಕುರಿತು ವಿಶೇಷ ಉಪನ್ಯಾಸ
ಬೀದರ್‌ನಲ್ಲಿ ಎಸ್.ಎಂ. ಜನವಾಡಕರ್ ಬದುಕು-ಬರಹ ಕುರಿತು ವಿಶೇಷ ಉಪನ್ಯಾಸ
ಬೀದರ್: ಶಬನಮ್ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ (ನೋಂ), ಭಾಲ್ಕಿ ಇವರ ವತಿಯಿಂದ ನವೆಂಬರ್ 5, 2025 ರಂದು ಬೀದರ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಹಿರಿಯ ಸಾಹಿತಿ ಎಸ್.ಎಂ. ಜನವಾಡಕರ್ ಅವರ “ಬದುಕು ಮತ್ತು ಬರಹ” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಚಾರ್ಯ ಡಾ. ಎಸ್. ಪ್ರಭು ಉದ್ಘಾಟಿಸಿದರು. ಅವರು ಮಾತನಾಡಿ, “ಎಸ್.ಎಂ. ಜನವಾಡಕರ್ ಅವರು ಬೀದರ ಜಿಲ್ಲೆಯ ಹಿರಿಯ ಸಾಹಿತಿಗಳು. ಅವರನ್ನು ನೋಡಿಯೇ ನಾವು ಬೆಳೆದವರು. ಇಂತಹ ವ್ಯಕ್ತಿತ್ವಗಳನ್ನು ಯುವ ಪೀಳಿಗೆಗೆ ಪರಿಚಯಿಸುವುದು ಅತ್ಯುತ್ತಮ ಕಾರ್ಯ. ಇಂದಿನ ಮಕ್ಕಳು ಮೊಬೈಲ್ ಬಿಟ್ಟು ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು, ಏಕೆಂದರೆ ಜ್ಞಾನವೇ ಎಲ್ಲದಕ್ಕೂ ಮೂಲ,” ಎಂದರು.
ವಿಶೇಷ ಉಪನ್ಯಾಸ ನೀಡಿದ ಯುವ ಸಾಹಿತಿ ಪವನ ಬಾಲೇರ ಅವರು, ಜನವಾಡಕರ್ ಅವರ ಜೀವನ ಮತ್ತು ಕನ್ನಡಪರ ಸೇವೆಯನ್ನು ವಿವರಿಸಿದರು. ಅವರ ಸಾಹಿತ್ಯ ಕನ್ನಡದ ಸಾಂಸ್ಕೃತಿಕ ಚೇತನವನ್ನು ಬಲಪಡಿಸಿದೆ ಎಂದು ಹೇಳಿದರು.
ಆಶಯ ನುಡಿಯಲ್ಲಿ ಸ್ವತಃ ಎಸ್.ಎಂ. ಜನವಾಡಕರ್ ಮಾತನಾಡಿ, “ನನ್ನ ಬಗ್ಗೆ ಕಾರ್ಯಕ್ರಮ ಆಯೋಜಿಸಿರುವುದು ಸಂತೋಷದ ಸಂಗತಿ. ಇಂತಹ ಸಂದರ್ಭಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಹಿತ್ಯ ಸೇವೆ ಮಾಡಲು ಪ್ರೇರಣೆ ನೀಡುತ್ತವೆ,” ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಹಿರಿಯ ಕಥೆಗಾರ ಗುರುನಾಥ ಅಕ್ಕಣ್ಣಾ ಅವರು “ಸಾಹಿತಿಗಳು ಸಮಾಜದ ಕಣ್ಣು. ಸೂರ್ಯ ಕಾಣದ ವಿಷಯವನ್ನೂ ಅವರು ಗಮನಿಸುತ್ತಾರೆ. ಸಮಾಜ ಪರಿವರ್ತನೆಗೆ ಸಾಹಿತ್ಯ ಮುಖ್ಯ ಅಸ್ತ್ರ,” ಎಂದು ಹೇಳಿದರು.
ಹಿರಿಯ ಚುಟುಕು ಸಾಹಿತಿಯಾದ ಪುಷ್ಪ ಕನಕ ಮಾತನಾಡಿ, “ಹಾಸ್ಯ ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಸಾಹಿತಿಗಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರೆಯುತ್ತಾರೆ. ಎಸ್.ಎಂ. ಜನವಾಡಕರ್ ಅವರು ಬೌದ್ಧ ಸಾಹಿತ್ಯದ ಮೂಲಕ ಮಾನವೀಯತೆ ಸಾರಿದ್ದಾರೆ,” ಎಂದರು.
ಕಾರ್ಯಕ್ರಮದಲ್ಲಿ ನಾಗಶಟ್ಟಪ್ಪ ಜೋತ್ಯಪ್ಪ ಮತ್ತು ಗುಂಡಪ್ಪ ಉಪಸ್ಥಿತರಿದ್ದರು. ಟ್ರಸ್ಟ್ ಅಧ್ಯಕ್ಷ ಡಾ. ಮಕ್ತುಂಬಿ ಎಂ ಅವರು “ಜನವಾಡಕರ್ ಅವರು ಬಡತನವನ್ನು ಮೀರಿಕೊಂಡು ಸಾಹಿತ್ಯದ ಮೂಲಕ ಸಮಾಜಕ್ಕೆ ಮಾದರಿಯಾದವರು. ಅವರ ಸಾಧನೆ ಎಲ್ಲರಿಗೂ ಪ್ರೇರಣೆಯಾಗಲಿ,” ಎಂದು ಹೇಳಿದರು.
ಕಾರ್ಯಕ್ರಮದ ನಿರೂಪಣೆ ಸುಲೋಚನ ಅವರು ನಿರ್ವಹಿಸಿದರು. ಸ್ವಾಗತ ಏಕನಾಥ ಮತ್ತು ವಂದನೆ ಪ್ರೀಯಂಕಾ ನೀಡಿದರು.
