ಮನದ ಮೈಲಿಗೆ ತೊಳೆಯುವ ಶಕ್ತಿ ವಚನ ಸಾಹಿತ್ಯಕ್ಕಿದೆ - ಅಶೋಕ ಹೂವಿನಬಾವಿ

ಮನದ ಮೈಲಿಗೆ ತೊಳೆಯುವ ಶಕ್ತಿ ವಚನ ಸಾಹಿತ್ಯಕ್ಕಿದೆ  - ಅಶೋಕ ಹೂವಿನಬಾವಿ

ಮನದ ಮೈಲಿಗೆ ತೊಳೆಯುವ ಶಕ್ತಿ ವಚನ ಸಾಹಿತ್ಯಕ್ಕಿದೆ - ಅಶೋಕ ಹೂವಿನಬಾವಿ 

ಚಿಂಚೋಳಿ - ಇಡೀ ಜಗತ್ತಿನಲ್ಲಿಯೇ ಅತ್ಯಂತ ಸರಳವಾಗಿರುವ ಸಾಹಿತ್ಯ ವಚನ ಸಾಹಿತ್ಯವಾಗಿದೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯಕ್ಕೆ ಮನದ ಮೈಲಿಗೆಯನ್ನು ತೊಳೆಯುವ ಶಕ್ತಿ ಇದೆಯೆoದು ಚಿಂಚೋಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಶಿಕ್ಷಣ ಸಂಯೋಜಕ ಅಶೋಕ ಹೂವಿನಬಾವಿ ಅಭಿಪ್ರಾಯ ಪಟ್ಟರು.

      ಅವರು ಗುರುವಾರ ಕನಕಪುರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಚಿಂಚೋಳಿ ತಾಲೂಕ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ 'ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದ ಅವರು ಡಾ. ಅಂಬೇಡ್ಕರ ಅವರು ರಚಿಸಿದ ಸಂವಿಧಾನದಲ್ಲಿ ಶರಣರ ವಚನಗಳ ಅನೇಕ ಅಂಶಗಳಿವೆ. ಹೀಗಾಗಿ ಬಸವಣ್ಣನವರು ಮಾನವ ಕುಲದ ಉದ್ಧಾರಕರೆನಿಸಿಕೊಂಡಿದ್ದಾರೆ. ಇಂದು ಎಲ್ಲೆಡೆ ಬಸವಣ್ಣನವರ ಪ್ರತಿಮೆಗಳನ್ನು ಸ್ಥಾಪಿಸುವುದು ಕಾಣುತ್ತೇವೆ. ಹಾಗೆಯೇ ಬಸವಣ್ಣನವರ ವಿಚಾರಗಳು ಮನೆ - ಮನೆಗಳಿಗೆ ಮನ - ಮನಗಳಿಗೆ ತಲುಪುವಂತಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲೆಯ ಮುಖ್ಯೋಪಾಧ್ಯಾಯರು ಮನೋಹರ ರಟಕಲ ಮಾತನಾಡಿ ಮನುಷ್ಯರು ಸಂಕುಚಿತ ಭಾವ ತೊಡೆಯಬೇಕು. 12 ನೆಯ ಶತಮಾನದ ಶರಣರಂತೆ ಎಲ್ಲರೂ ಸರಳ ಹಾಗೂ ಸತ್ಯ ಶುದ್ಧ ಜೀವನ ನಡೆಸಬೇಕು. ವಿದ್ಯಾರ್ಥಿಗಳು ಶ್ರಮಪಟ್ಟು ಅಭ್ಯಾಸ ಮಾಡಬೇಕು. ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯವಾಗುತ್ತದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಉಪನ್ಯಾಸಕ ಚನ್ನವೀರ ಕಲ್ಲೂರ ಮುಖ್ಯ ಅತಿಥಿಗಳಾಗಿದ್ದರು. ಇನ್ನೊಬ್ಬ ಅತಿಥಿ ಹಾಸ್ಯ ಕಲಾವಿದ ರಾಚಯ್ಯ ಸ್ವಾಮಿ ಖಾನಾಪುರ ತಮ್ಮ ನಗೆ ಬುಗ್ಗೆ ಗಳಿಂದ ವಿದ್ಯಾರ್ಥಿಗಳಿಗೆ ನಗೆಗಡಲಲ್ಲಿ ತೇಲಿಸಿದರು. ಶರಣ ಸಾಹಿತ್ಯ ಪರಿಷತ ಅಧ್ಯಕ್ಷ ಬಸವರಾಜ ಐನೋಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗೌರವ ಕಾರ್ಯದರ್ಶಿ ಶ್ರೀಶೈಲ ನಾಗಾವಿ ಸ್ವಾಗತಿಸಿದರು. ಶರಣಯ್ಯ ಸ್ವಾಮಿ ಅಲ್ಲಾಪೂರ ಐನೂಲಿ, ತುಕಾರಾಂ ಭಕ್ತಂಪಳ್ಳಿ, ಗುರುರಾಜ ಜೋಶಿ ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕುಪೇಂದ್ರ ದೈಹಿಕ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿ ಶರಣು ಸಮರ್ಪಣೆ ಗೈದರು. ಇದೇ ಸಂದರ್ಭದಲ್ಲಿ, ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ, ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.