ಕಲಬುರಗಿ _ ಬೆಂಗಳೂರು ವಂದೇ ಭಾರತ್ ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ ಜ. 1 ರಿಂದ ಹೊಸ ವೇಳಾಪಟ್ಟಿ ಜಾರಿ : ಮಾಜಿ ಸಂಸದ ಉಮೇಶ್ ಜಾಧವ್ ಅಭಿನಂದನೆ
ಕಲಬುರಗಿ _ ಬೆಂಗಳೂರು ವಂದೇ ಭಾರತ್ ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ
ಜ. 1 ರಿಂದ ಹೊಸ ವೇಳಾಪಟ್ಟಿ ಜಾರಿ : ಮಾಜಿ ಸಂಸದ ಉಮೇಶ್ ಜಾಧವ್ ಅಭಿನಂದನೆ
ಕಲಬುರಗಿ : ಬಹುಕಾಲದ ಬೇಡಿಕೆಯಾಗಿದ್ದ ಕಲಬುರಗಿ ಮತ್ತು ಬೆಂಗಳೂರು ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ರೈಲುಗಾಡಿಯ ಸಂಚಾರದ ಸಮಯವನ್ನು ಜನವರಿ ಒಂದರಿಂದ ಬದಲಾಯಿಸಲು
ಕೇಂದ್ರ ರೈಲ್ವೆ ಇಲಾಖೆ ನಿರ್ಧರಿಸಿರುವುದು ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆಯಾಗಿದೆ ಎಂದು ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್ ಹರ್ಷ ವ್ಯಕ್ತಪಡಿಸಿದ್ದಾರೆ.
ಬಹುದಿನಗಳಿಂದ ಕಲಬುರಗಿಯಿಂದ ಬೆಂಗಳೂರಿಗೆ ಹೊರಡುವ ವಂದೇ ಭಾರತ್ ರೈಲಿನ ಸಮಯ ಬದಲಾವಣೆ ಮಾಡುವಂತೆ ಕೋರಿ ಪ್ರಯಾಣಿಕರು ಒತ್ತಾಯಿಸುತ್ತಿದ್ದು ರೈಲ್ವೆ ಇಲಾಖೆಯವರೊಂದಿಗೆ ಸತತವಾಗಿ ಚರ್ಚಿಸಿದ ಪರಿಣಾಮವಾಗಿ ಮುಂದಿನ ತಿಂಗಳು ಜನವರಿ 1 ರಿಂದ ಬೆಳಿಗ್ಗೆ 5.15 ರ ಬದಲು ಬೆಳಗ್ಗೆ 06:10 ಕ್ಕೆ ಹೊರಟು ಬೆಂಗಳೂರಿಗೆ ಮಧ್ಯಾಹ್ನ 02:10 ಕ್ಕೆ (ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೈಯಪ್ಪನಹಳ್ಳಿ) ತಲುಪಲಿದೆ ಎಂದು ಡಾ. ಉಮೇಶ್ ಜಾಧವ್ ತಿಳಿಸಿದ್ದಾರೆ
ಬೆಂಗಳೂರಿನಿಂದ ಕಲಬುರಗಿಗೆ ಹೊರಡುವ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಇದೀಗ ಈ ರೈಲು ಕಲಬುರಗಿಗೆ ಮೊದಲಿನಿಂದ 45 ನಿಮಿಷ ಬೇಗ ಅಂದರೆ ರಾತ್ರಿ 11.30 ಗಂಟೆಗೆ ಬದಲಾಗಿ ರಾತ್ರಿ 10.45 ಕ್ಕೆ ತಲುಪಲಿದೆ. ಒಟ್ಟಾರೆ ಪ್ರಯಾಣದ ಸಮಯ ಇದೀಗ 8 ಗಂಟೆಯಲ್ಲಿ ಪೂರ್ಣಗೊಳ್ಳಲಿದೆ.
ಇನ್ನು ಮುಂದೆ ಪುಟ್ಟಪರ್ತಿ ಸತ್ಯಸಾಯಿ ದರ್ಶನ ಮಾಡುವ ಭಕ್ತರಿಗೆ ಅನುಕೂಲಕರವಾಗುವಂತೆ ಸತ್ಯಸಾಯಿ ಪ್ರಶಾಂತಿ ನಿಲಯಂ ನಲ್ಲಿ ವಂದೇ ಭಾರತ್ ಗೆ ನಿಲುಗಡೆ ಸೌಲಭ್ಯವನ್ನು ನೀಡಿರುವುದು ಇನ್ನಷ್ಟು ಖುಷಿಯ ಸಂಗತಿ ಎಂದು ಜಾಧವ್ ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ರೈಲ್ವೆ ಖಾತೆಯ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವರಾದ ವಿ ಸೋಮಣ್ಣ ಅವರ ಪ್ರಯತ್ನದಿಂದಾಗಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು ವಂದೇ ಭಾರತ್ ರೈಲು ಪ್ರಯಾಣಿಕರ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ. ಈ ಹಿಂದೆ ಬೆಳಗ್ಗೆ 5.10 ಕ್ಕೆ ಕಲಬುರಗಿಯಿಂದ ವಂದೇ ಭಾರತ್ ಸಂಚಾರ ಪ್ರಾರಂಭಿಸುತ್ತಿರುವುದರಿಂದ ಮಕ್ಕಳು, ಮಹಿಳೆಯರಿಗೆ ಹಾಗೂ ಹಿರಿಯ ನಾಗರಿಕರಿಗೆ ಸಂಚಾರಕ್ಕೆ ಅನಾನುಕೂಲವಾಗಿತ್ತು. ಬೀದರ್ ಮತ್ತಿತರ ಕಡೆಗಳಿಂದ ಆಗಮಿಸುತ್ತಿರುವ ಪ್ರಯಾಣಿಕರಿಗೂ ಕಷ್ಟ ಸಾಧ್ಯವಾಗಿದ್ದು ಇದೀಗ ನೂತನ ವೇಳಾಪಟ್ಟಿ ಅತ್ಯಂತ ಅನುಕೂಲಕರ ವಾಗಲಿದೆ. ಸಾರ್ವಜನಿಕರು ಒಂದೇ ಭಾರತ್ ರೈಲು ಸೇವೆಯನ್ನು ಪೂರ್ಣವಾಗಿ ಬಳಸಿಕೊಳ್ಳುವಂತೆ ಡಾ. ಜಾಧವ್ ತಿಳಿಸಿದ್ದಾರೆ .
