ನರಿಬೋಳ–ಚಾಮನೂರ ಸೇತುವೆ: ಕೆಎಂವಿ ಕಂಪನಿಗೆ 6.50 ಕೋಟಿ ದಂಡ, ಗುತ್ತಿಗೆ ರದ್ದು – ಸರ್ಕಾರದ ನಿರ್ಧಾರಕ್ಕೆ ಎಂ ಎಸ್ ಪಾಟೀಲ ನರಿಬೋಳ ಸ್ವಾಗತ
ನರಿಬೋಳ–ಚಾಮನೂರ ಸೇತುವೆ: ಕೆಎಂವಿ ಕಂಪನಿಗೆ 6.50 ಕೋಟಿ ದಂಡ, ಗುತ್ತಿಗೆ ರದ್ದು – ಸರ್ಕಾರದ ನಿರ್ಧಾರಕ್ಕೆ ಎಂ ಎಸ್ ಪಾಟೀಲ ನರಿಬೋಳ ಸ್ವಾಗತ
ಜೇವರ್ಗಿ: ಚಿತ್ತಾಪೂರ–ನರಿಬೋಳದ ನಡುವಿನ ಬೀಮಾ ನದಿಗೆ ನಿರ್ಮಿಸಲಾಗುತ್ತಿದ್ದ ಸೇತುವೆ ಕಾಮಗಾರಿ ಏಳು ವರ್ಷಗಳಿಂದ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ಕೆಎಂವಿ ಕಂಪನಿ ಮೇಲಿನ ಗುತ್ತಿಗೆ ರದ್ದು ಪಡಿಸಿ 6.50 ಕೋಟಿ ರೂ. ದಂಡ ವಿಧಿಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸ್ಥಳೀಯ ಜನತೆ, ಸಂಘಟನೆಗಳಿಂದ ಭಾರೀ ಸ್ವಾಗತ ವ್ಯಕ್ತವಾಗಿದೆ.
ಜೇವರ್ಗಿ ಶಾಸಕ ಹಾಗೂ ಕೆಕೆಆರ್ಡಿಬಿ ಅಧ್ಯಕ್ಷರ ಮತಕ್ಷೇತ್ರವಾದ ನರಿಬೋಳ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈ ಸೇತುವೆ ಪ್ರವಾಹದಲ್ಲಿ ಹಾನಿಗೊಳಗಾದ ನಂತರ, ಹಲವಾರು ಸ್ಲ್ಯಾಬ್‌ಗಳು ನದಿಗೆ ಉರುಳಿ ಬಿದ್ದು ತುಂಡಾಗಿದ್ದವು. ಕಂಪನಿಯ ನಿರ್ಲಕ್ಷ್ಯ ಹಾಗೂ ಕಾಮಗಾರಿ ವಿಳಂಬದಿಂದ ಬೇಸತ್ತ ಗ್ರಾಮಸ್ಥರು, ವಿವಿಧ ಸಂಘಟನೆಗಳು ಹಾಗೂ ಪಕ್ಷಗಳ ಮುಖಂಡರು ನಿರಂತರ ಹೋರಾಟ ನಡೆಸಿದ ಪರಿಣಾಮ ಅಧಿಕಾರಿಗಳು ಗುತ್ತಿಗೆ ರದ್ದತಿ ಹಾಗೂ ದಂಡಕ್ಕೆ ಶಿಫಾರಸು ಮಾಡಿದ್ದರು.
ಸರ್ಕಾರ ಈಗ ಕೆಎಂವಿ ಕಂಪನಿಯ ಗುತ್ತಿಗೆ ರದ್ದು ಮಾಡಿ, ದಂಡ ವಿಧಿಸಿ, ಹೊಸ ಟೆಂಡರ್ ಕರೆಗೆ ಅನುಮೋದನೆ ನೀಡಿರುವುದು ಜನತೆಗೆ ನಿಟ್ಟುಸಿರು ಬಿಟ್ಟಿದೆ. “ಮುಂದಾಗಲಿ ಗುಣಮಟ್ಟದ ಸ್ಥಳೀಯ ಕಂಪನಿಗಳಿಗೆ ಮಾತ್ರ ಗುತ್ತಿಗೆ ನೀಡಬೇಕು. ಕಮಿಷನ್ ರಾಜಕಾರಣಕ್ಕೆ ಅವಕಾಶ ಕೊಡಬಾರದು. ತಕ್ಷಣವೇ ಹೊಸ ಟೆಂಡರ್ ಕರೆಯಿಸಿ ಕೆಲಸ ಪ್ರಾರಂಭಿಸಬೇಕು” ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.
ಬೆಳಗಾವಿ ವಿಧಾನಮಂಡಲ ಅಧಿವೇಶನದ ವೇಳೆ ಈ ವಿಷಯವನ್ನು ಉಗ್ರವಾಗಿ ಮುಂದಿರಿಸಲು ಎರಡು ಗ್ರಾಮಗಳ ಜನತೆ, ಕನ್ನಡಪರ, ರೈತಪರ, ಹಿಂದುತ್ವಪರ ಸಂಘಟನೆಗಳ ನಾಯಕರು ಕಲಬುರ್ಗಿಯಿಂದ ಬೆಳಗಾವಿ ಸುವರ್ಣಸೌಧದವರೆಗೆ ಪಾದಯಾತ್ರೆ ಮಾಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಪ್ರತಿಭಟನೆಯನ್ನು ಮುನ್ನಡೆಸಲಿರುವ ಪ್ರಮುಖರು:
* ಎಂ.ಎಸ್. ಪಾಟೀಲ, ನರಿಬೋಳ ಅಧ್ಯಕ್ಷರು
* ಶ್ರವಣಕುಮಾರ ನಾಯಕ್, ಅಧ್ಯಕ್ಷರು – ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ
* ಲಕ್ಷ್ಮೀಕಾಂತ ಸ್ವಾದಿ, ಅಧ್ಯಕ್ಷರು – ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ
* ಕೆ.ಕೆ. ಶಿವಲಿಂಗ ಹಳಿಮಣಿ, ಅಧ್ಯಕ್ಷರು – ಹಿಂದು ಜಾಗೃತಿ ಸೇನೆ
* ಶ್ರೀಕಾಂತ ಜಾಧವ್, ಹೋರಾಟಗಾರ – ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ
ಹೋರಾಟಗಾರರು ಸರ್ಕಾರ ತಕ್ಷಣವೇ ಹೊಸ ಗುತ್ತಿಗೆ ಪ್ರಕ್ರಿಯೆ ಆರಂಭಿಸಿ, ವಿಳಂಬವಾಗಿರುವ ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
-
