ಮೈಸೂರು||ಇಂದಿನ ಕವಿಗಳು ಬೋನ್ಸಾಯ್ ಮರಗಳಾಗುತ್ತಿದ್ದಾರೆ"-ಕವಿ ಡಾ.ಜಯಪ್ಪ ಹೊನ್ನಾಳಿ
ಮೈಸೂರು||ಇಂದಿನ ಕವಿಗಳು ಬೋನ್ಸಾಯ್ ಮರಗಳಾಗುತ್ತಿದ್ದಾರೆ"-ಕವಿ ಡಾ.ಜಯಪ್ಪ ಹೊನ್ನಾಳಿ
ಕಲ್ಯಾಣ ಕಹಳೆ, ಮೃಸೂರು ನವೆಂಬರ್ ೩೦ ಇಂದಿನ ಬಹುಪಾಲು ಕವಿಗಳು ನಾಡಿಗುಪಕರಿಸುವ ಕಾಡು ಮರಗಳಾಗದೆ, ಬೋನ್ಸಾಯ್ ಮರಗಳಾಗುತ್ತಿದ್ದಾರೆ, ಅವುಗಳಲ್ಲಿ ಹೂವಿಲ್ಲ ಹಣ್ಣಿಲ್ಲ, ಹಕ್ಕಿಯ ಗೂಡು ಪಾಡು ಹಾಡುಗಳಂತೂ ಮೊದಲೇ ಇಲ್ಲ, ಮಳೆಗೆ ತೊಯ್ಯದೆ, ಬಿಸಿಲಿಗೆ ಬೆಯ್ಯದೆ ಕಾಮನಬಿಲ್ಲು ಕಾಣಲಾಶಿಸುತ್ತ, ಕಾವ್ಯದಲ್ಲದನ್ನು ಅಭಿವ್ಯಕ್ತಿಸಲು ಹೊರಟಿದ್ದಾರೆ, ಅದೆಂತು ಸಾಧ್ಯವಾದೀತು!? ಎ.ಸಿ. ಕೊಠಡಿಗಳಿಂದ ಬಂದವರಿಗೆ ತಂಗಾಳಿ ಖುಷಿ ಕೊಟ್ಟೀತು ಹೇಗೆ, ಮರದ ತಂಪು ನೆರಳು ಸ್ವರ್ಗೀಯವೆನಿಸೀತು ಹೇಗೆ, ಹಾಗಾಗಿಯೇ ಭಾವದ ಬಡತನದಿಂದಾಗಿ ಬಡವಾಗಿದ್ದಾರೆ, ಆ ಕಾರಣದಿಂದಲೇ ಅವರ ಕವಿತೆಗಳೂ ಬಡಕಲಾಗುತ್ತಿವೆ ಎಂದು ಮೈಸೂರು ನಗರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕವಿ ಡಾ.ಜಯಪ್ಪ ಹೊನ್ನಾಳಿ ಹೇಳಿದರು.
ಚಿತ್ಕಲಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಮೈಸೂರು ಹಾಗೂ ಎಸ್ ಜಿ ಎಂ ಟೂರ್ಸ್ ಸಹಯೋಗದೊಂದಿಗೆ ಇಂದು ಅರಮನೆ ಜಪದ ಕಟ್ಟೆ ಮಠದ ವೇದಿಕೆಯಲ್ಲಿ ನಡೆದ ಚಿತ್ಕಲಾ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ, ಕವಿಗೋಷ್ಠಿ, ಕಾವ್ಯ ಕುಸುಮ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ, ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ, ಯುವಕವಿ ಮಹದೇವಸ್ವಾಮಿ ಎಂ ಕೆ ಅವರ 'ಕಾವ್ಯ ಕುಸುಮ' ಕೃತಿ ಬಿಡುಗಡೆ ಮಾಡಿ; ಕೃತಿ ಕುರಿತು ಮಾತನಾಡುತ್ತಿದ್ದ ಅವರು, ಬಿಸಿಲಿಗೆ ಬೆಯ್ಯದೆ ಮಳೆಗೆ ತೊಯ್ಯದೆ ಮಳೆಬಿಲ್ಲು ಬೇಕೆಂದು ಬಯಸುತ್ತಿರುವ ಎ ಸಿ ಕೊಠಡಿಗಳಲ್ಲಿರುವ ಕವಿಗಳಿಗೆ ಅದೆಂತು ಸಿಕ್ಕೀತು!? ಅಮಾವಾಸ್ಯೆ ಎದುರಿಸದವರಿಗೆ ಹುಣ್ಣಿಮೆಯೆಂತು ಎದುರ್ಗೊಂಡೀತು!?
ಅದೆಂದಿಗೂ ಸಾಧ್ಯವಾಗದು, ಸಂತೋಷದ ಸಮಾಚಾರವೇನೆಂದರೆ, ಹರಿದ ಬಟ್ಟೆಯ, ಹಸಿದ ಹೊಟ್ಟೆಯ ಎಳೆಯ ಕವಿ ಗೆಳೆಯ ಮಹದೇವಸ್ವಾಮಿ ಶೋಕದಿಂದಲೇ ಶ್ಲೋಕ ಹುಟ್ಟುತ್ತದೆಂಬ ಪೂರ್ವ ಸೂರಿಗಳ ಮಾತನ್ನು ನಿಜ ಮಾಡಿದ್ದಾರೆ, ಕಷ್ಟದ ಕುಲುಮೆಯಲ್ಲಿ ಬೆಯ್ಯುತ್ತ ಅಪರಂಜಿಯಾಗುವ ಹಂತದಲ್ಲಿದ್ದಾರೆ, ಹಾಗಾಗಿಯೇ ಅವರ ಇಲ್ಲಿಯ ಕೆಲ ಕವನಗಳು ನರಳುವ ಮನಸ್ಸುಗಳನ್ನು ಅರಳಿಸುವ ಕಾವ್ಯ ಕುಸುಮಗಳಾಗಿವೆ, ಅವುಗಳಲ್ಲಿ ಪರಿಮಳದೊಂದಿಗೆ ಮಕರಂದವೂ ಅಂದ ಚೆಂದವೂ ಮೇಳೈಸಿವೆ, ಮುಂದಿನ ದಿನಮಾನಗಳಲ್ಲಿ ಕವಿಯಾಗಿ ಬೆಳೆಯಬಹುದಾದ ಸ್ಪಷ್ಟ ಲಕ್ಷಣಗಳು ಶ್ರೀಯುತರಲ್ಲಿದ್ದು, ಅವರ ಬರೆವಣಿಗೆ ನಿಲ್ಲದಿರಲಿ, ನಾಳೆಗಳಲ್ಲಿ ಅವರಿಗೆ ಬೆಳಕಿನ ಬಾಳು ಇದ್ದೇ ಇದೆ ಎಂದರು.
ಜಿಲ್ಲ ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು, ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಶಾಸಕ ಶ್ರೀವತ್ಸ ಹಾಗೂ ಕನ್ನಡ ಪ್ರಭ ದಿನಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕರಾದ ಅಂಶಿ ಪ್ರಸನ್ನಕುಮಾರ್ ಅತಿಥಿಗಳಾಗಿ ಭಾಗವಹಿಸಿದ್ದ ಈ ಸಮಾರಂಭದಲ್ಲಿ ಚಿತ್ಕಲಾ ಪ್ರತಿಷ್ಠಾನದ ಅಧ್ಯಕ್ಷೆ ಕೆ ಜಿ ರೂಪದರ್ಶಿನಿ, ಮಲ್ಲಿಕಾರ್ಜುನ, ಯುವಕವಿ ಮಹದೇವಸ್ವಾಮಿ ಎಂ ಕೆ, ಉಪಸ್ಥಿತರಿದ್ದರು. ಎಸ್ ಜಿ ಎಂ ಟೂರ್ಸ್ ಲೋಕೇಶಯ್ಯ ಎಂ ಅಧ್ಯಕ್ಷತೆ ವಹಿಸಿದ್ದರು.
