ನಿಷ್ಠಾವಂತ ಶಿಕ್ಷಣ ತಜ್ಞ ಪ್ರೊ.ಕೆ. ವಿಶ್ವನಾಥ
'ವಿಶ್ವರೂಪ' ಅಭಿನಂದನ ಗ್ರಂಥ ಬಿಡುಗಡೆ ಮಾಡಿದ ಶಾಸಕ ಎಂ.ವೈ ಪಾಟೀಲ ಅಭಿಮತ ನಿಷ್ಠಾವಂತ ಶಿಕ್ಷಣ ತಜ್ಞ ಪ್ರೊ.ಕೆ. ವಿಶ್ವನಾಥ
ಕಲಬುರಗಿ: ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಪ್ರೊ. ಕೆ. ವಿಶ್ವನಾಥ ಅವರು ನಿಷ್ಠಾವಂತ ಶಿಕ್ಷಣ ತಜ್ಞರಾಗಿದ್ದರು ಎಂದು ಶಾಸಕ ಎಂ.ವೈ. ಪಾಟೀಲ ಅಭಿಪ್ರಾಯಪಟ್ಟರು.
ಪ್ರೊ.ಕೆ. ವಿಶ್ವನಾಥ ಅವರ ಅಭಿನಂದನ ಸಮಿತಿ ವತಿಯಿಂದ ಬಸವೇಶ್ವರ ನಗರದ ಕನ್ನಡ ಕಾನ್ವೆಂಟ್ ಶಾಲೆಯ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರೊ.ಕೆ. ವಿಶ್ವನಾಥ ಅವರಿಗೆ 87 ವರ್ಷ ತುಂಬಿದ ಪ್ರಯುಕ್ತ ಡಾ.ಶರಣಬಸಪ್ಪ ವಡ್ಡನಕೇರಿ ಸಂಪಾದಿಸಿದ ವಿಶ್ವರೂಪ ಅಭಿನಂದನ ಸಂಪುಟ ಲೋಕಾರ್ಪಣೆ ಮತ್ತು ಅಭಿನಂದನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಚಾರ ಬಯಸದೆ ಸಾರ್ಥಕ ಜೀವನ ನಡೆಸಿದ ವಿಶ್ವನಾಥ ಅವರು ದಕ್ಷ ಆಡಳಿತಗಾರರಾಗಿದ್ದರು ಎಂಬುದು ಹೆಮ್ಮಯ ಸಂಗತಿ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ್ ಮಾತನಾಡಿ, ನಮ್ಮೂರಿನ ಹಿರಿಯರು, ಸ್ನೇಹಜೀವಿಗಳು ಮತ್ತು ಅಜಾತ ಶತ್ರುಗಳಾಗಿರುವ ವಿಶ್ವನಾಥ ಅವರು ನಮ್ಮೂರಿನವರು ಎಂಬದು ನಮಗೆ ಅತ್ಯಂತ ಅಭಿಮಾನದ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಭಿನಂದನ ಸಮಿತಿ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ ಮಾತನಾಡಿ, ಅಧ್ಯಾಪಕ ವೃತ್ತಿಯನ್ನು ಕಾಯಕವೆಂದು ಭಾವಿಸಿ ಸದಾ ಅದರಲ್ಲಿಯೇ ತನ್ಮಯರಾಗಿ ಬಾಳಿ ಬದುಕಿದ ಅಪರೂಪದ ವ್ಯಕ್ತಿ ಪ್ರೊ. ವಿಶ್ವನಾಥ ಅವರು ಎಂದು ಬಣ್ಣಿಸಿದರು.
ಸುರಪುರ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಸುರೇಶ ಸಜ್ಜನ್, ವ್ಯಕ್ತಿತ್ವ ವಿಕಾಸ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈರಾಜ್ ಪಾಟೀಲ ಓಕಳಿ, ಹೈ.ಕ. ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ, ಕೆ. ವಿಶ್ವನಾಥ ದಂಪತಿ ವೇದಿಕೆಯಲ್ಲಿ ಇದ್ದರು.
ಅಭಿನಂದನ ನುಡಿಗಳನ್ನಾಡಿದ ಪ್ರೊ.ಎಸ್.ಎಲ್. ಪಾಟೀಲ, ತಮಗೆ ತಾವೇ ಮಾಡಿಕೊಳ್ಳುವ, ಮಕ್ಕಳು-ಕುಟುಂಬದವರು ಸೇರಿ ಮಾಡುವ, ಉಳಿದವರು, ಹಿತೈಷಿಗಳು ಸೇರಿ ಅಭಿಮಾನದಿಂದ ಮಾಡುವ ಮೂರು ಬಗೆಯ
ಅಭಿನಂದನ ಗ್ರಂಥಗಳಿವೆ. ಅಂತಹ ಋಣ ತೀರಿಸುವ ಗ್ರಂಥ ಇದಾಗಿದೆ ಎಂದು ವಿವರಿಸಿದರು.
ವಿಶ್ವನಾಥ ಅವರ ಶಿಷ್ಯ ಡಾ. ವಾಸುದೇವ ಸೇಡಂ ಮಾತನಾಡಿದರು. ಚೌದಾಪುರಿ ಹಿರೇಮಠದ ಡಾ. ರಾಜಶೇಖರ ಶಿವಾಚಾರ್ಯರು ಸಾನ್ನಿಧ್ಯವಹಿಸಿದ್ದರು.
ಪ್ರಧಾನ ಸಂಪಾದಕ ಡಾ. ಸಿದ್ಧರಾಮ ಹೊನ್ಕಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಿರಣ ಪಾಟೀಲ ಪ್ರಾರ್ಥಿಸಿದರು. ಅಭಿನಂದನ ಗ್ರಂಥದ ಸಂಪಾದಕ ಡಾ. ಶರಣಬಸಪ್ಪ ವಡ್ಡನಕೇರಿ ನಿರೂಪಿಸಿ ವಂದಿಸಿದರು.
ಬಸವರಾಜ ಕಾಮರಡ್ಡಿ, ಬಿ.ಪಿ. ಹೂಗಾರ, ಎಲ್. ಬಿ. ಇಟ್ಟಿನ್, ಬಸವ ಪಾಟೀಲ ಜಾವಳಿ, ಅಣ್ಣಾರಾವ ಧುತ್ತರಗಾಂವ, ಅರುಣಕುಮಾರ ಪಾಟೀಲ, ಶಾಂತಾ ಭೀಮಸೇನರಾವ, ಬಿ.ಎಚ್. ನಿರಗುಡಿ ಇತರರು ಇದ್ದರು.
