29ರಂದು ಔರಾದ ತಾಲ್ಲೂಕು ಕೃಷಿ ಇಲಾಖೆ ಕಛೇರಿಗೆ ಮುತ್ತಿಗೆ: ಶಾಸಕ ಪ್ರಭು ಚವ್ಹಾಣ
29ರಂದು ಔರಾದ ತಾಲ್ಲೂಕು ಕೃಷಿ ಇಲಾಖೆ ಕಛೇರಿಗೆ ಮುತ್ತಿಗೆ: ಶಾಸಕ ಪ್ರಭು ಚವ್ಹಾಣ
ಕಮಲನಗರ ; ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ತಾರತಮ್ಯ, ಕಬ್ಬು ಬೆಳೆಗಾರರಿಗೆ ಸೂಕ್ತ ಬೆಲೆ ನೀಡದಿರುವುದು ಸೇರಿದಂತೆ ರೈತರ ಸಮಸ್ಯೆಗಳಿಗೆ ಸ್ಪಂದಿಸದ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ನ.29ರಂದು ಔರಾದ(ಬಿ) ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಾರತೀಯ ಜನತಾ ಪಾರ್ಟಿ ಔರಾದ(ಬಾ) ಮಂಡಲ ಹಾಗೂ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಯುತ್ತಿದ್ದು, ಅಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಬಸ್ ನಿಲ್ದಾಣ, ತಾಲ್ಲೂಕು ಪಂಚಾಯತ ಕಛೇರಿ, ಕನ್ನಡಾಂಬೆ ವೃತ್ತ, ಎಪಿಎಂಸಿ ವೃತ್ತದಿಂದ ತಾಲ್ಲೂಕು ಕೃಷಿ ಇಲಾಖೆ ಕಛೇರಿಗೆ ತೆರಳಿ ನಂತರ ಕಛೇರಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಧಾರಾಕಾರ ಮಳೆಯಾಗಿ ನಮ್ಮ ರೈತರು ಬೆಳೆದಿದ್ದ ಉದ್ದು, ಹೆಸರು, ಸೋಯಾ, ಹತ್ತಿ ಸೇರಿದಂತೆ ಎಲ್ಲ ಬೆಳೆಗಳು ನೀರು ಪಾಲಾಗಿವೆ. ಸರ್ಕಾರ ರೈತರಿಗೆ ಪರಿಹಾರ ಘೋಷಿಸಿದೆ ಆದರೆ ಪರಿಹಾರ ಮೊತ್ತ ಕೆಲವು ರೈತರಿಗೆ ಮಾತ್ರ ನೀಡಿ ತಾರತಮ್ಯ ಮಾಡಲಾಗಿದೆ. ಕಬ್ಬಿನ ಬೆಲೆ ನಿಗದಿಯಲ್ಲಿಯೂ ಜಿಲ್ಲೆಯ ರೈತರಿಗೆ ಅನ್ಯಾಯವಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿಲ್ಲ. ಸರ್ಕಾರ ಪ್ರತಿ ಹಂತದಲ್ಲಿ ರೈತರನ್ನು ಕಡೆಗಣಿಸುತ್ತಾ ಬರುತ್ತಿದೆ.
ಬೆಳೆ ಹಾನಿ ಪರಿಹಾರವೂ ಸಿಗದೇ, ಬೆಳೆ ವಿಮೆಯ ಸೌಲಭ್ಯವೂ ಸಮರ್ಪಕವಾಗಿ ಸಿಗದಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಕೆಲ ರೈತರು ದಾರಿ ತೋಚದೆ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಹಾಗಾಗಿ ಬಿಜೆಪಿಯಿಂದ ಇಡೀ ರಾಜ್ಯದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕೃಷಿ ಇಲಾಖೆಗೆ ಮುತ್ತಿಗೆ ಹಾಕಲಾಗುತ್ತಿದೆ. ಅದರಂತೆ ಔರಾದನಲ್ಲಿಯೂ ಪ್ರತಿಭಟನೆ ನಡೆಸಲಾಗುತ್ತಿದೆ.
ಇದು ರೈತರ ಹಿತದೃಷ್ಟಿಯಿಂದ ನಡೆಯುತ್ತಿರುವ ಪ್ರತಿಭಟನೆಯಾಗಿದ್ದು, ರಾಜ್ಯ ಸರ್ಕಾರದಿಂದ ಬೆಳೆಹಾನಿ ಪರಿಹಾರ ಸಿಗದ ಮತ್ತು ರಾಜ್ಯ ಸರ್ಕಾರದಿಂದ ಅನ್ಯಾಯಕ್ಕೆ ಒಳಗಾದ ರೈತರು ಆಗಮಿಸಬೇಕು. ಸಾರ್ವಜನಿಕರು ಮತ್ತು ರೈತರು ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶಾಸಕರು ಮನವಿ ಮಾಡಿದ್ದಾರೆ.
