ಸಾಮಾಜಿಕ ನ್ಯಾಯಕ್ಕಾಗಿ ಸಿಪಿಐ ಕರೆ
ಸಾಮಾಜಿಕ ನ್ಯಾಯಕ್ಕಾಗಿ ಸಿಪಿಐ ಕರೆ – ಕಲಬುರಗಿಯಲ್ಲಿ ದಲಿತ-ಆದಿವಾಸಿ, ಮಹಿಳೆ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಕಲಬುರಗಿ, ನವೆಂಬರ್ 18:ಭಾರತ ಕಮ್ಯೂನಿಸ್ಟ್ ಪಕ್ಷ (CPI) ರಾಷ್ಟ್ರೀಯ ಮಂಡಳಿ ದೇಶಾದ್ಯಂತ ಕರೆ ನೀಡಿರುವ ಅಖಿಲ ಭಾರತ ಪ್ರತಿಭಟನಾ ದಿನದ ಅಂಗವಾಗಿ, ಕಲಬುರಗಿ ಜಿಲ್ಲಾ ಮಂಡಳಿಯು ಇಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರಬಲ ಪ್ರತಿಭಟನೆಯನ್ನು ನಡೆಸಿತು. ದೇಶದಾದ್ಯಂತ ಹೆಚ್ಚುತ್ತಿರುವ ದಲಿತರು, ಆದಿವಾಸಿಗಳು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ವಿರುದ್ಧ ಘೋಷಣೆಗಳ ನಡುವೆ ಹೋರಾಗಾರರು ಧ್ವನಿ ಎತ್ತಿದರು.
ಪ್ರತಿಭಟನಾಕಾರರು ಮಾತನಾಡಿ ಮನುಸ್ಮೃತಿ ಆಧಾರಿತ “ವರ್ಣಾಶ್ರಮ–ಶ್ರೇಣಿಕೃತ” ಸಾಮಾಜಿಕ ವ್ಯವಸ್ಥೆಯು ಶತಮಾನಗಳಿಂದ ಮಾನವ ಹಕ್ಕುಗಳನ್ನು ದೋಚಿಕೊಂಡು ದಲಿತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನು ಅತೀ ಕೆಳಗಿನ ವರ್ಗಕ್ಕೆ ತಳ್ಳಿದೆಯೆಂದು ಆರೋಪಿಸಿದರು. ಇಂದಿಗೂ ಈ ದೌರ್ಜನ್ಯಗಳು ನಿಂತಿಲ್ಲದೇ ಹೆಚ್ಚುತ್ತಿರುವುದು ಆತಂಕಕಾರಿ ಎಂದರು.
2023ರ NCRB ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ 57,000 ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು, ದಲಿತ ಮಹಿಳೆಯರ ಮೇಲೆ 2,835 ಅತ್ಯಾಚಾರ ಪ್ರಕರಣಗಳು ದಾಖಲಾಗಿರುವುದು, ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನನಿತ್ಯ ಭೀತಿಗೊಳಿಸುತ್ತಿರುವುದು — ಇವೆಲ್ಲವೂ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ ಎಂದು CPI ನಾಯಕರು ಅಸಮಾಧಾನ ವ್ಯಕ್ತಪಡಿಸಿದರು
ಬಿಹಾರದ ಬೆಲ್ಲಿ ಪ್ರಕರಣ, ತಮಿಳುನಾಡಿನ ಕಿಲ್ವೇನ್ನಣಿ ಹತ್ಯಾಕಾಂಡ, ಕರ್ನಾಟಕದ ಬದನವಾಳು–ಕಂಬಾಲಪಳ್ಳಿ–ಮರಕೊಂಬಿ, ಮಹಾರಾಷ್ಟ್ರದ ಖೈರ್ಲಾಂಜಿ, ಉತ್ತರಪ್ರದೇಶದ ಹತ್ರಾಸ್, ಮಣಿಪುರದ ಜನಾಂಗೀಯ ಹಿಂಸಾಚಾರ, ಬಿಲ್ಕಿಸ್ ಬಾನು ಪ್ರಕರಣ ಸೇರಿದಂತೆ ದೇಶವನ್ನೇ ಬೆಚ್ಚಿಬೀಳಿಸಿದ ಅನೇಕ ದೌರ್ಜನ್ಯಗಳನ್ನು ಸ್ಮರಿಸಲಾಯಿತು. ಇತ್ತೀಚಿನ ಮೈಸೂರಿನ ಬಾಲಕಿ ಮೇಲೆ ನಡೆದ ಅಗಾತೃತ್ಯಕ್ಕೂ ಪ್ರತಿಭಟನೆಯಲ್ಲಿ ಗಂಭೀರ ಆಕ್ರೋಶ ವ್ಯಕ್ತವಾಯಿತು.
ಸರ್ಕಾರಗಳು ಸಂವಿಧಾನದ ಮೌಲ್ಯಗಳನ್ನು ಕಾಯ್ದುಕೊಳ್ಳಲು ವಿಫಲವಾಗಿದ್ದು, ಕೆಲವು ನೀತಿಗಳು ಅಸಮಾನತೆ ಮತ್ತು ಹಿಂಸಾಚಾರಕ್ಕೆ ಪೂರಕವಾಗಿವೆ ಎಂದು CPI ಕಾರ್ಯಕರ್ತರು ಆರೋಪಿಸಿದರೂ, “ಸಾಮಾಜಿಕ ನ್ಯಾಯ–ಸಮಾನತೆ” ಸ್ಥಾಪನೆಗೆ ಕಡ್ಡಾಯವಾಗಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಯಿತು.
ಈ ನಿಟ್ಟಿನಲ್ಲಿ ಕಲಬುರಗಿಯ ಜಿಲ್ಲಾಧಿಕಾರಿಗೆ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಡಾ. ಮಹೇಶಕುಮಾರ, ಸಹಕಾರ್ಯದರ್ಶಿ ,ರಾಠೋಡ,ಪ್ರಭುದೇವ ಯಳಸಂಗಿ,ಪದ್ಮಾವತಿ ಮಾಲಿಪಾಟೀಲ್,ಭೀಮಾಶಂಕರ ಮಾಡಿಯಾಳ,ಸಿದ್ದಪ್ಪ ಪಾಲ್ಕಿ,ಸಾಜೀದ್ ಅಹಮದ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದರು.
