ಅಮರೇಶ್ವರ ಜಾತ್ರಾ ಸಿದ್ಧತೆ ಪರಿಶೀಲಿಸಿದ ಶಾಸಕ ಪ್ರಭು ಚವ್ಹಾಣ

ಅಮರೇಶ್ವರ ಜಾತ್ರಾ ಸಿದ್ಧತೆ ಪರಿಶೀಲಿಸಿದ ಶಾಸಕ ಪ್ರಭು ಚವ್ಹಾಣ

ಅಮರೇಶ್ವರ ಜಾತ್ರಾ ಸಿದ್ಧತೆ ಪರಿಶೀಲಿಸಿದ ಶಾಸಕ ಪ್ರಭು ಚವ್ಹಾಣ

ಅಮರೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಸೋಮವಾರ ಪಟ್ಟಣದಲ್ಲಿ ಗಲ್ಲಿ-ಗಲ್ಲಿಗಳಲ್ಲಿ ಸಂಚರಿಸಿ ಸ್ವಚ್ಛತೆ, ಬೀದಿ ದೀಪ, ಹೈಮಾಸ್ಟ್ ದೀಪ ಸೇರಿದಂತೆ ಮತ್ತಿತರೆ ತಯಾರಿಗಳನ್ನು ಪರಿಶೀಲಿಸಿದರು.

ಅಮರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ ನಂತರ ಶಾಸಕರು ದೇವಸ್ಥಾನದ ಆವರಣದಲ್ಲಿ ಸುತ್ತಾಡಿ ಅಡುಗೆ ಕೋಣೆಯನ್ನು ವೀಕ್ಷಿಸಿದರು. ಗೋಡೆಯ ಕೆಲವೆಡೆ ಮಳೆಗಾಲದಲ್ಲಿ ಸೋರಿಕೆಯಾಗುತ್ತಿರುವ ಬಗ್ಗೆ ಸ್ಥಳೀಯರು ಗಮನಕ್ಕೆ ತಂದಾಗ ಸರಿಪಡಿಸಲು ವ್ಯವಸ್ಥೆ ಮಾಡುತ್ತೇನೆ ಎಂದರು.

ನಂತರ ಜಾತ್ರಾ ಮಹೋತ್ಸವದಲ್ಲಿ ಪಲ್ಲಕ್ಕಿ ಮೆರವಣಿಗೆ ಸಾಗುವ ಅಮರೇಶ್ವರ ಮಂದಿರದಿAದ ಅಗಸಿ ಮಾರ್ಗವಾಗಿ ರಾಗಾ ಗಲ್ಲಿ, ಶೆಟಕಾರ ಗಲ್ಲಿ, ದೇಶಮುಖ ಗಲ್ಲಿ ಸೇರಿದಂತೆ ವಿವಿಧೆಡೆ ಸಂಚರಿಸಿ ರಸ್ತೆ, ಚರಂಡಿ ಸ್ವಚ್ಛತೆ, ಬೀದಿ ದೀಪ, ಹೈಮಾಸ್ಟ್ ದೀಪಗಳು ಒಳಗೊಂಡು ವಿವಿಧ ಮೂಲಸೌಕರ್ಯಗಳನ್ನು ಪರಿಶೀಲಿಸಿದರು.

ಮಂದಿರದ ಸುತ್ತಲಿನ ಅಂಗಡಿಗಳಿಗೆ ಭೇಟಿ ನೀಡಿ, ಕಸದ ಬುಟ್ಟಿಗಳನ್ನು ಇಟ್ಟುಕೊಂಡಿರುವ ಅಂಗಡಿಗಳ ಮಾಲೀಕರಿಗೆ ಪ್ರಶಂಶಿಸಿದರು. ಎಲ್ಲರೂ ಇದೇ ರೀತಿ ಸ್ವಚ್ಛತೆಗೆ ಮಹತ್ವ ಕೊಡಬೇಕು. ತಮ್ಮ ತಮ್ಮ ಅಂಗಡಿಗಳ ತ್ಯಾಜ್ಯವನ್ನು ರಸ್ತೆಯ ಮೇಲೆ ಬೀಸಾಡದೇ ಕಸದ ಬುಟ್ಟಿಯಲ್ಲಿ ಹಾಕಿ ಪುರಸಭೆಯ ಸ್ವಚ್ಛತಾ ಕಾರ್ಯಕ್ಕೆ ಸಹಕರಿಸಬೇಕು. ಜಾತ್ರೆಯ ಸಂದರ್ಭದಲ್ಲಿ ಇಡೀ ಪಟ್ಟಣ ಸ್ವಚ್ಛವಾಗಿ ಕಾಣಬೇಕು. ತಮ್ಮ ತಮ್ಮ ಮನೆಗಳ ಮುಂದೆ ಕಸ-ಕಡ್ಡಿ ಹಾಕದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಕಸದ ವಾಹನಗಳು ಪ್ರತಿದಿನ ಮನೆ-ಮನೆಗೆ ಭೇಟಿ ನೀಡಿ ಕಸ ವಿಲೇವಾರಿ ಮಾಡಬೇಕು ಎಂದು ಶಾಸಕರು ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು.

ನಂತರ ಮಾತನಾಡಿ, ಉದ್ಭವಲಿಂಗ ಅಮರೇಶ್ವರ ದೇವಸ್ಥಾನದ ಪುರಾತನ ಮತ್ತು ಐತಿಹಾಸಿಕ ಮಹತ್ವ ಹೊಂದಿರುವ ಅಪರೂಪದ ದೇವಸ್ಥಾನ. ವರ್ಷಕ್ಕೆ ಒಂದು ಬಾರಿ ಅತ್ಯಂತ ಅದ್ದೂರಿಯಾಗಿ ಜಾತ್ರೆ ನಡೆಯುತ್ತದೆ. ಕರ್ನಾಟಕವಲ್ಲದೇ ಬೇರೆ ಬೇರೆ ರಾಜ್ಯಗಳಿಂದಲೂ ಲಕ್ಷಾಂತರ ಜನ ಬಂದು ಅಮರೇಶ್ವರರ ದರ್ಶನ ಪಡೆದು ಪುನೀತರಾಗುತ್ತಾರೆ. ಇಂತಹ ಜಾತ್ರೆ ಅಚ್ಚುಕಟ್ಟಾಗಿ ನಡೆಯಬೇಕು. ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ರೀತಿಯ ಅನಾನುಕೂಲ ಆಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರು ಕೂಡ ಸ್ವಚ್ಛತಾ ಕಾರ್ಯಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. 

ಇದಕ್ಕೂ ಮುನ್ನ ಅಗ್ನಿಬಸವಣ್ಣ ದೇವಸ್ಥಾನದ ಬಳಿ ನಡೆಯುತ್ತಿರುವ ಫುತ್‌ಪಾತ್ ಮತ್ತು ಚರಂಡಿ ಕಾಮಗಾರಿಯನ್ನು ವೀಕ್ಷಿಸಿದರು. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ಔರಾದ(ಬಿ) ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಇಂದಿರಾನಗರ ತಾಂಡಾದಲ್ಲಿ 60 ಲಕ್ಷ ಅನುದಾನದಲ್ಲಿ ಕೈಗೊಂಡಿರುವ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಇದೇ ವೇಳೆ ಸ್ಥಳೀಯರೊಂದಿಗೆ ಸಂವಾದ ನಡೆಸಿ ಗ್ರಾಮದ ಸಮಸ್ಯೆಗಳು ಮತ್ತು ಆಗಬೇಕಾದ ಕೆಲಸಗಳ ಬಗ್ಗೆ ಚರ್ಚಿಸಿದರು.

ಹಾಗೆಯೇ ಪಟ್ಟಣದ ಆದರ್ಶ ವಿದ್ಯಾಲಯ, ಪಿಯು ಕಾಲೇಜು, ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಅನುಕೂಲವಾಗಲು 50 ಲಕ್ಷ ಮೊತ್ತದಲ್ಲಿ ಕೈಗೊಂಡಿರುವ ಸಿಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಮಾತನಾಡಿ, ಪಟ್ಟಣದಲ್ಲಿ ನಡೆಯುತ್ತಿರುವ ಎಲ್ಲ ಕಾಮಗಾರಿಗಳು ಗುಣಮಟ್ಟದಿಂದ ಮತ್ತು ನಿಗದಿತ ಕಾಲಾವಧಿಯಲ್ಲಿ ಮಾಡಿಕೊಡಬೇಕು. ಗುಣಮಟ್ಟದ ಕುರಿತಂತೆ ಯಾವುದೇ ರೀತಿಯ ದೂರುಗಳು ಬಂದಲ್ಲಿ ನಾನು ಸುಮ್ಮನಿರುವುದಿಲ್ಲವೆಂದು ಶಾಸಕರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಸ್ವಾಮಿದಾಸ, ಮುಖಂಡರಾದ ಧೋಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವರಾಜ ಅಲ್ಮಾಜೆ, ಶಿವಾಜಿ ಬೋಗಾರ, ಕೇರಬಾ ಪವಾರ, ಬಸವರಾಜ ಹಳ್ಳೆ, ಸಂದೀಪ ಪಾಟೀಲ, ಪ್ರದೀಪ ಬುಟ್ಟೆ, ಗಜಾನಂದ ವಟಗೆ, ಶಿವಾಜಿ ಬಿರಾದಾರ, ಪ್ರಕಾಶ ಜೀರ್ಗೆ, ಬಾಬು ರಾಠೋಡ, ಸೋನು ರಾಠೋಡ, ಗುರುನಾಥ ಚವ್ಹಾಣ, ಸುಜಿತ ರಾಠೋಡ, ಪ್ರದೀಪ ಪವಾರ, ಪ್ರಕಾಶ ಅಲ್ಮಾಜೆ, ರಮೇಶ ಗೌಡಾ ಸೇರಿದಂತೆ ಇತರರು ಉಪಸ್ಥಿತರಿದ್ದರು.