ಕಲಬುರಗಿ ಜಿಲ್ಲಾ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವಿತರಣೆ
ಕಲಬುರಗಿ ಜಿಲ್ಲಾ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವಿತರಣೆ
ಕಲಬುರಗಿ, ಫೆಬ್ರವರಿ 09 (ಕರ್ನಾಟಕ ವಾರ್ತೆ): ಗ್ರಾಮೀಣಾ ಪತ್ರಕರ್ತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಾರಿಗೆ ತಂದಿರುವ ಯೋಜನೆಯಡಿ ಜಿಲ್ಲೆಯ ತಾಲ್ಲೂಕು ಮಟ್ಟದ ಪರ್ತಕರ್ತರಿಗೆ ಉಚಿತ ಬಸ್ ಪಾಸ್ ವಿತರಿಸಲಾಯಿತು.
ನಿಗಧಿತ ಸಂಬಳವಿಲ್ಲದೆ ಗೌರವಧನ ಪಡೆದು ಕೆಲಸ ಮಾಡುವ ಪತ್ರಕರ್ತರಿಗೆ ಸಹಾಯವಾಗಲೆಂದು ಕಳೆದ ಆಯವ್ಯಯದಲ್ಲಿ ಘೋಷಿಸಲಾಗಿದ್ದ ಈ ಯೋಜನೆಗೆ ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ಬಸ್ ಪಾಸ್ ನೀಡುವ ಮೂಲಕ ಈಗಾಗಲೇ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಚಾಲನೆ ನೀಡಿದ್ದರು.
ಸೋಮವಾರ ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಾಲ್ವರು ಅರ್ಹ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ಗಳನ್ನು ವಿತರಿಸಲಾಯಿತು. ಈ ಯೋಜನೆಯಡಿ ತಾಲೂಕು ಮಟ್ಟದ ಅರ್ಹ ಪತ್ರಕರ್ತರು ಅಗತ್ಯ ದಾಖಲೆಗಳೊಂದಿಗೆ ಸರ್ಕಾರದ ಸೇವಾಸೀಂಧು ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಿ ಲಾಭ ಪಡೆಯುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಲಬುರಗಿ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಅವರು ಮನವಿ ಮಾಡಿದರು.
ಇಂದು ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸರಳ ಸಮಾರಂಭದಲ್ಲಿ ನಾಲ್ವರು ಪತ್ರಕರ್ತರಿಗೆ ಜಿಲ್ಲಾ ಮಟ್ಟದ ಉಚಿತ ಬಸ್ ಪಾಸ್ ವಿತರಿಸಿ ಮಾತನಾಡಿದ ಅವರು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಸರ್ಕಾರದಿಂದ ಉಚಿತ ಬಸ್ ಪಾಸ್ ಯೋಜನೆಯ ಲಾಭವನ್ನು ತಲುಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇಡಲಾಗಿದೆ. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಯಾವುದೇ ಬಸ್ ಗಳಲ್ಲಿ ಜಿ್ಲ್ಲೆಯೊಳಗೆ ಉಚಿತವಾಗಿ ಸುದ್ದಿ ಸಂಗ್ರಹಿಸಲು ಪತ್ರಕರ್ತರು ಓಡಾಡಬಹುದಾಗಿದೆ ಎಂದರು.
ಈ ಉಚಿತ ಬಸ್ ಪಾಸ್ ಯೋಜನೆಯು ಗ್ರಾಮೀಣ ಪತ್ರಕರ್ತರಿಗೆ ಮಾತ್ರವಲ್ಲದೆ, ಅವರ ಮೂಲಕ ಸಮಾಜಕ್ಕೆ ಸುದ್ದಿ ಮತ್ತು ಮಾಹಿತಿಯನ್ನು ತಲುಪಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಸರ್ಕಾರದ ಈ ಕ್ರಮವು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ.
ಈ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ಸುದ್ದಿ ಸಂಗ್ರಹಣೆ ಮತ್ತು ವರದಿಗಾರಿಕೆಯಲ್ಲಿ ತೊಡಗಿರುವ ಪತ್ರಕರ್ತರಿಗೆ ಸಾರಿಗೆ ವೆಚ್ಚದ ಹೊರೆಯನ್ನು ಕಡಿಮೆ ಮಾಡಿ, ಅವರ ಕೆಲಸವನ್ನು ಸುಗಮಗೊಳಿಸುವ ಉದ್ದೇಶವನ್ನು ಹೊಂದಿದೆ.
ಈಗಾಗಲೇ ಅರ್ಜಿ ಸಲ್ಲಿಸಿರುವ ಪತ್ರಕರ್ತರ ಅರ್ಜಿಗಳನ್ನು ಪರಿಶೀಲಿಸಿ, ಶಿಫಾರಸು ಮಾಡಿ ಇಲಾಖೆಯ ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ಸಮಿತಿ ಸಭೆಯಲ್ಲಿ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಅರ್ಹರಿಗೆ ವಿತರಣೆ ನಡೆಯಲಿದೆ ಎಂದು ಹೇಳಿದರು.
ಗ್ರಾಮೀಣ ಪತ್ರಕರ್ತರಾದ ಹಿರಿಯ ಪತ್ರಕರ್ತ ಮಹಾದೇವ ವಡಗಾಂವ್, ಸೋಮೇಶ್ ಗೌಡ, ಸೂರ್ಯಕಾಂತ್ ಕಾಳಗಿ ಮತ್ತು ಡಿ.ಎಂ. ಪಾಟೀಲ್ ಅವರಿಗೆ ಬಸ್ ಪಾಸ್ಗಳನ್ನು ಹಸ್ತಾಂತರಿಸಿದರು.
ಬಸ್ ಪಾಸ್ ಸ್ವೀಕರಿಸಿ ಅನಿಸಿಕೆಗಳನ್ನು ವ್ಯಕ್ತಪಡಿಸಿದ ಹಿರಿಯ ಪತ್ರಕರ್ತ ಮಹಾದೇವ ವಡಗಾಂವ್ ಅವರು, "ಜಿಲ್ಲೆಯಲ್ಲಿ ಅನೇಕ ಅರ್ಹ ಗ್ರಾಮೀಣ ಪತ್ರಕರ್ತರು ಉಚಿತ ಬಸ್ ಪಾಸ್ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ನಾವು ಅನೇಕ ವರ್ಷಗಳಿಂದ ಗ್ರಾಮೀಣ ಭಾಗಗಳಲ್ಲಿ ಪತ್ರಿಕೋದ್ಯಮದಲ್ಲಿ ತೊಡಗಿದ್ದೇವೆ. ನಮ್ಮಂತವರಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ, ಶೀಘ್ರದಲ್ಲಿ ಅರ್ಹ ಎಲ್ಲಾ ತಾಲ್ಲೂಕು ಮಟ್ಟದ ಪತ್ರಕರ್ತರಿಗೆ ಈ ಯೋಜನೆಯ ಲಾಭ ಸಿಗಲಿ ಎಂದರು.
ಈ ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳಾದ ಜಿ.ಕೆ. ರಾಜರತ್ನ, ಉಮಾಶಂಕರ್ ಚಿನಮಳ್ಳಿ, ಸೈಯದ್ ಇಸ್ಮಾಯಿಲ್ ಪಾಷಾ, ಮಹದೇವಿ ಎಸ್. ಕುರ್ತಕೊಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
