ವಾಟಾಳ್ ಕನ್ನಡದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಹೋರಾಟಗಾರರು – ಸಿಎಂ ಸಿದ್ದರಾಮಯ್ಯ
ವಾಟಾಳ್ ಕನ್ನಡದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಹೋರಾಟಗಾರರು – ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಕನ್ನಡದ ಹಿತಕ್ಕಾಗಿ ಯಾವುದೇ ರಾಜಿ ಮಾಡಿಕೊಳ್ಳದ ಹೋರಾಟಗಾರ ವಾಟಾಳ್ ನಾಗರಾಜ್ ಅವರು ನಿಜವಾದ ಕನ್ನಡಪ್ರೇಮಿ, ಕನ್ನಡದ ಅಸ್ತಿತ್ವಕ್ಕಾಗಿ ಹೋರಾಡಿದ ವ್ಯಕ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ನಗರದ ಮೈಸೂರು ಬ್ಯಾಂಕ್ ವೃತ್ತದ ನೃಪತುಂಗ ಮಂಟಪದಲ್ಲಿ ಭುವನೇಶ್ವರಿ ಮತ್ತು ಅಣ್ಣಮ್ಮ ದೇವತೆಯ ವೈಭವದ ಮೆರವಣಿಗೆಗೆ ಚಾಲನೆ ನೀಡಿದರು.
“ದೇವರಾಜ ಅರಸು ಅವರು ವಾಟಾಳ್ ಅವರಿಗೆ ಮಂತ್ರಿ ಸ್ಥಾನ ಕೊಡ್ತೀನಿ ಎಂದು ಕರೆದರೂ, ಕನ್ನಡ ಪಕ್ಷ ಮತ್ತು ಕನ್ನಡ ಹೋರಾಟವನ್ನು ಬಿಡಲು ಅವರು ಒಪ್ಪಲಿಲ್ಲ. ಇಂತಹ ನಿಸ್ವಾರ್ಥ ಹೋರಾಟಗಾರರಿಂದಲೇ ಕನ್ನಡ ನಿಂತಿದೆ,”ಎಂದು ಅವರು ಪ್ರಶಂಸಿಸಿದರು.
ಮುಖ್ಯಮಂತ್ರಿ ಅವರು ಕನ್ನಡದ ಗೌರವ ಕಾಪಾಡುವ ಅಗತ್ಯವನ್ನು ಒತ್ತಿ ಹೇಳಿದರು.
“ನಾವೆಲ್ಲರೂ ಕನ್ನಡದ ನೆಲ, ಜಲ, ಭಾಷೆ, ಸಂಸ್ಕೃತಿಯ ಬಗ್ಗೆ ಅಭಿಮಾನ, ಪ್ರೀತಿ ಬೆಳೆಸಿಕೊಳ್ಳಬೇಕು. ನಮ್ಮ ನೆಲದಲ್ಲಿ ಕನ್ನಡದ ವಾತಾವರಣ ನಿರ್ಮಿಸಬೇಕು. ಯಾರೇ ಯಾವುದೇ ಭಾಷೆಯಲ್ಲಿ ಮಾತನಾಡಿದರೂ ನಾವು ಕನ್ನಡದಲ್ಲೇ ಉತ್ತರಿಸೋಣ. ಕನ್ನಡ ನೆಲದಲ್ಲಿ ಬದುಕು ಕಟ್ಟಿಕೊಂಡ ಪ್ರತಿಯೊಬ್ಬರೂ ಕನ್ನಡವನ್ನು ಗೌರವಿಸಬೇಕು,” ಎಂದು ಹೇಳಿದರು.
“ನಮ್ಮ ಭೂಮಿ, ನಮ್ಮ ನೆಲ, ನಮ್ಮ ಜಲ, ನಮ್ಮ ಭಾಷೆ ಎನ್ನುವ ಅಭಿಮಾನ ಮೂಡಲಿ. ಕನ್ನಡದ ಹೋರಾಟಗಾರರ ಮೇಲಿನ ಎಲ್ಲ ಕೇಸುಗಳನ್ನು ವಾಪಸ್ ಪಡೆಯಲಾಗುವುದು. ಬೆಳಗಾವಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಮಹಾಜನ್ ವರದಿ ಅಂತಿಮ. ಬೆಳಗಾವಿ ಕನ್ನಡದ ನೆಲ, ಕರ್ನಾಟಕದ ಭಾಗ, ಇದನ್ನು ಯಾರಿಂದಲೂ ಅಲ್ಲಗಳೆಯಲು ಸಾಧ್ಯವಿಲ್ಲ,” ಎಂದರು.
ದೇವರಾಜ ಅರಸು ಅವರಿಗೆ ಮರಣೋತ್ತರ ಡಾಕ್ಟರೇಟ್ ನೀಡುವ ವಾಟಾಳ್ ನಾಗರಾಜ್ ಮತ್ತು ಸಾ.ರಾ. ಗೋವಿಂದು ಅವರ ಬೇಡಿಕೆಯನ್ನು ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಈ ವಿಷಯವನ್ನು ಮೈಸೂರು ವಿವಿ ಸಿಂಡಿಕೇಟ್ ಸದಸ್ಯರೊಂದಿಗೆ ಚರ್ಚಿಸುತ್ತೇನೆ. ಅರಸು ಅವರಿಗೆ ಇಂದಿಗೂ ಡಾಕ್ಟರೇಟ್ ನೀಡದಿರುವುದು ಆಶ್ಚರ್ಯಕರ,” ಎಂದರು.
ಅವರು ತಮ್ಮ ಬಗ್ಗೆ ಹೇಳುತ್ತಾ, “ಮೈಸೂರು ವಿವಿಯಲ್ಲಿ ನನಗೆ ಹಿಂದೆಯೇ ಡಾಕ್ಟರೇಟ್ ಕೊಡ್ತೀವಿ ಎಂದಿದ್ದರು, ಆದರೆ ನಾನು ನಿರಾಕರಿಸಿದ್ದೆ. ಓದಿ, ಜ್ಞಾನ ವಿಸ್ತಾರ ಮಾಡಿಕೊಂಡು ಡಾಕ್ಟರೇಟ್ ಪಡೆಯಬೇಕು ಎನ್ನುವುದು ನನ್ನ ವೈಯಕ್ತಿಕ ಭಾವನೆ,” ಎಂದು ಹೇಳಿದರು.
ದ್ವಿಭಾಷಾ ನೀತಿಯ ಕುರಿತು ಮಾತನಾಡಿದ ಅವರು, “ನಾನು ವೈಯುಕ್ತಿಕವಾಗಿ ದ್ವಿಭಾಷಾ ಪರವಾಗಿ ಇದ್ದೇನೆ. ಆದರೆ ಅದನ್ನು ಕಾನೂನಿನ ರೂಪದಲ್ಲಿ ಜಾರಿಗೆ ತರಲು ಕ್ಯಾಬಿನೆಟ್‌ನಲ್ಲಿ ಚರ್ಚೆ ಅಗತ್ಯ,” ಎಂದರು.
ಅಂತೆಯೇ, MES ಸಂಘಟನೆಯ ಸದಸ್ಯರ ಕುರಿತು ಅವರು ಎಚ್ಚರಿಕೆ ನೀಡುತ್ತಾ, “ಅವರೂ ಕನ್ನಡಿಗರೇ, ಆದರೆ ಯಾರಾದರೂ ಪುಂಡಾಟಿಕೆ ಮಾಡಿದರೆ ಸರ್ಕಾರ ಅದನ್ನು ಮಟ್ಟಹಾಕುತ್ತದೆ. ಗಡಿ ಭಾಗದ ಕನ್ನಡ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ,” ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಅಭಿಮಾನಿಗಳು ಭಾಗವಹಿಸಿದರು.
