ರಾಷ್ಟ್ರದ ಏಕತೆಗೆ ಅನೇಕ ಕಾಂಗ್ರೆಸ್ಸಿಗರು ಪ್ರಾಣಾರ್ಪಣೆ ಮಾಡಿದ್ದಾರೆ : ಡಾ.ಎಂ. ಮಲ್ಲಿಕಾರ್ಜುನ ಖರ್ಗೆ
ನಾಗಪುರ : ಮಹಾರಾಷ್ಟ್ರ ಚುನಾವಣೆ ಪ್ರಯುಕ್ತ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯ ಸಭೆ ವಿಪಕ್ಷ ನಾಯಕ ಡಾ ಎಂ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ "ಬಟೇಂಗೆ ತೊ ಕಟೇಂಗೆ" ಎಂಬ ಘೋಷಣೆಗೆ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್‌ನ ಹಲವಾರು ನಾಯಕರು ರಾಷ್ಟ್ರದ ಏಕತೆಗಾಗಿ ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ ಬಿಜೆಪಿ ಯಾರೋಬ್ಬರು ದೇಶಕ್ಕಾಗಿ ಮಡಿದ ಉದಾಹರಣೆ ಇಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ದೇಶವನ್ನು ಒಗ್ಗಟ್ಟಾಗಿ ಇಡಲು ಬಯಸುವವರು ಎಂದಿಗೂ ದೇಶದ ವಿಭಜನೆಯ ಕುರಿತು ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಬಿಜೆಪಿಯನ್ನು ಗುರಿಯಾಗಿಸಿ ಪ್ರತಿಕ್ರಿಯಿಸಿದ್ದಾರೆ.
ಯೋಗಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ‘ಏಕ್ ಹೈ, ತೋ ಸೇಫ್ ಹೈ’ ಇದರ ನಡುವೆ ಯಾವುದು ಬೇಕು ಎಂದು ಕೇಳಿ ಬಿಜೆಪಿಯನ್ನು ಗೆಲ್ಲಿಸಲು ಪ್ರಧಾನಿ ಮೋದಿ ಕೇಳಿದ್ದಾರೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೆಂಪು ಹೊದಿಕೆಯಿರುವ ಸಂವಿಧಾನದ ಪ್ರತಿಯನ್ನು ಹಿಡಿದಿದ್ದಕ್ಕಾಗಿ ಟೀಕಿಸಿದ್ದ, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಡಾ ಮಲ್ಲಿಕಾರ್ಜುನ ಖರ್ಗೆ, ಅದೇ ರೀತಿಯ ಪ್ರತಿಯನ್ನು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ ಚಿತ್ರವನ್ನು ತೋರಿಸಿದರು.
ಬಿಜೆಪಿ ಮತ್ತು ಆರ್‌ಎಸ್‌ಎಸ್ ಕೇವಲ ಮತ ಗಳಿಸಲು ಜನರನ್ನು ತಪ್ಪುದಾರಿಗೆ ಎಳೆಯುತ್ತಿವೆ ಎಂದು ಆರೋಪಿಸಿದ ಅವರು, “ಮೊದಲು ಯಾರ ಘೋಷವಾಕ್ಯವನ್ನು ಅನುಸರಿಸಬೇಕೆಂದು ನೀವೇ ನಿರ್ಧರಿಸಬೇಕು ಎಂದು ಖರ್ಗೆ ಹೇಳಿದರು.
ಬಿಜೆಪಿ ನಾಯಕರು ಪ್ರಚೋದಿಸುವ ಭಾಷಣ ಹಾಗೂ ಹೇಳಿಕೆಗಳನ್ನು ನೀಡುತ್ತಾರೆ ಮತ್ತು ಸುಳ್ಳು ಮಾತನಾಡುತ್ತಾರೆ. ಅವರು
ಪ್ರಮುಖ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುತ್ತಾರೆ” ಆದರೆ ಕಾಂಗ್ರೆಸ್ ಯಾವಾಗಲೂ ಜನರ ಪರವಾಗಿದೆ ಎಂದು ಹೇಳಿದ್ದಾರೆ.
ಶುಕ್ರವಾರ ಉತ್ತರ ಮಹಾರಾಷ್ಟ್ರ ಜಿಲ್ಲೆಯ ಧುಲೆಯಲ್ಲಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಮೋದಿ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ನಡುವೆ ಏಕತೆ ಇರಬೇಕು ಎಂದು ಹೇಳಿದ್ದರು. “ನೆನಪಿಡಿ, ಏಕ್ ಹೈ, ತೋ ಸೇಫ್ ಹೈ (ನಾವು ಒಗ್ಗಟ್ಟಾಗಿದ್ದರೆ ನಾವು ಸುರಕ್ಷಿತರು)” ಎಂದು ಹೇಳಿದ್ದರು.
ವಿದರ್ಭ ಪ್ರಾಂತ್ಯದಲ್ಲಿ ಮಹಾ ವಿಕಾಸ್ ಅಘಾಡಿ ಅಲೆ ಇದೆ, ಇಲ್ಲಿ ರಾಜ್ಯದ 288 ಶಾಸಕರ ಪೈಕಿ 62 ಶಾಸಕರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್, ಶಿವಸೇನೆ (ಯುಬಿಟಿ), ಮತ್ತು ಎನ್‌ಸಿಪಿ (ಎಸ್‌ಪಿ) ಒಳಗೊಂಡ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಡಾ ಮಲ್ಲಿಕಾರ್ಜುನ ಖರ್ಗೆ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಗರ ನಕ್ಸಲರನ್ನು ಬೆಂಬಲಿಸುತ್ತದೆ ಎಂಬ ಬಿಜೆಪಿಯ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ ಅವರು, “ಸಂವಿಧಾನದ ಪ್ರತಿಯನ್ನು ಕೆಂಪು ಹೊದಿಕೆಯೊಂದಿಗೆ ಪ್ರದರ್ಶಿಸುವುದು ಅಪರಾಧವೇ?” ಎಂದು ಪ್ರಶ್ನಿಸಿದ್ದಾರೆ.
ಅನೇಕ ಸಾರ್ವಜನಿಕ ಸಭೆಗಳಲ್ಲಿ, ರಾಹುಲ್ ಗಾಂಧಿಯವರು ಕೆಂಪು ಹೊದಿಕೆಯಿರುವ ಸಂವಿಧಾನದ ಪ್ರತಿಯನ್ನು ಪ್ರದರ್ಶಿಸುತ್ತಾರೆ. ಈ ಬಗ್ಗೆ ಬಿಜೆಪಿ ತಕರಾರು ತೆಗೆದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪ್ರಧಾನಿ ಮೋದಿ ಅದೇ ರೀತಿಯ ಪ್ರತಿಯನ್ನು ಉಡುಗೊರೆಯಾಗಿ ನೀಡಿದ ಚಿತ್ರವನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿ, ಪ್ರಧಾನಿ ಮೋದಿ ಸುಳ್ಳುಗಳನ್ನೆ ಜೋರಾಗಿ ಹೇಳುತ್ತಾ, ಸುಳ್ಳುಗಳನ್ನೆ ಎಂದು ಬಿಂಬಿಸುವ ಕಾರ್ಯ ಮಾಡಲು ಹೊರಟಿದ್ದಾರೆ ಎಂದು ಡಾ ಎಂ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20 ರಂದು ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಮಹಾಯುತಿ ಹಾಗೂ ಪ್ರತಿಪಕ್ಷ ಮಹಾ ವಿಕಾಸ ಆಘಾಡಿ ನಡುವೆ ಅಧಿಕಾರಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದ್ದು, ಅಂದು ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.