ತತ್ವಪದ ಸಾಹಿತ್ಯದ ರೂವಾರಿ, ಸಂತ ಶಿಶುನಾಳ ಶರೀಫರು - ಮನೋಹರ ವಿಶ್ವಕರ್ಮ
ತತ್ವಪದ ಸಾಹಿತ್ಯದ ರೂವಾರಿ, ಸಂತ ಶಿಶುನಾಳ ಶರೀಫರು - ಮನೋಹರ ವಿಶ್ವಕರ್ಮ
ಶಹಪುರ : ತತ್ವ ಪದಗಳ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದಿ,ಸಾಮರಸ್ಯ ಮೂಡಿಸುವುದರ ಜೊತೆಗೆ ಧಾರ್ಮಿಕ ಹಾಗೂ ಆದ್ಯಾತ್ಮಿಕ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸಿದ ಸಂತ ಶಿಶುನಾಳ ಶರೀಫರು ತತ್ವ ಪದ ಸಾಹಿತ್ಯದ ರೂವಾರಿ ಎಂದೇ ಪ್ರಖ್ಯಾತಿಯನ್ನು ಪಡೆದವರು ಎಂದು ಸಂಗೀತ ಕಲಾವಿದ ಮನೋಹರ ವಿಶ್ವಕರ್ಮ ನುಡಿದರು.
ತಾಲೂಕಿನ ಸಗರ ಗ್ರಾಮದ ಕಾವೇರಿ ವಿದ್ಯಾ ಮಂದಿರದಲ್ಲಿ ಕಲಾನಿಕೇತನ ಟ್ರಸ್ಟ್ ವತಿಯಿಂದ ಆಯೋಜಿಸಿದ ಸಮನ್ವತೆಯ ಹರಿಕಾರ,ತತ್ವಪದಗಳ ರೂವಾರಿ ಸಂತ ಶಿಶುನಾಳ ಶರೀಫರ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,ಅಲ್ಲದೆ ಹಿಂದೂ ಮುಸ್ಲಿಂ ಭಾವೈಕ್ಯತೆ ಮತ್ತು ಸಂಸ್ಕೃತಿ ಸಮ್ಮಿಲನದ ಅರಿವು ಮೂಡಿಸಿದವರು ಎಂದು ಹೇಳಿದರು.
ಮುಖ್ಯ ಅತಿಥಿಗಳು ಹಾಗೂ ತತ್ವಪದ ಕಲಾವಿದರಾದ ಈಶ್ವರಪ್ಪ ಜಿನಕೇರಿ ಮಾತನಾಡಿ ಕರ್ನಾಟಕದಲ್ಲಿ ತತ್ವಪದಗಳ ಪರಂಪರೆಗೆ ಅಡಿಪಾಯ ಹಾಕಿಕೊಟ್ಟ ಕನ್ನಡ ಸಾಹಿತ್ಯದ ವಿಶಿಷ್ಟ ಅನುಭವದ ಸಾಹಿತಿ ಸಂತ ಶಿಶುನಾಳ ಶರೀಫರ ತತ್ವಾದರ್ಶಗಳು ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿವೆ ಮತ್ತು ಮೂಲಕ ಕನ್ನಡ ಜನಪದ ಮತ್ತು ಶಾಸ್ತ್ರೀಯ ಸಂಗೀತದ ಪರಂಪರೆಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.
ಈ ಸಮಾರಂಭದ ವೇದಿಕೆಯ ಮೇಲೆ ಕಾವೇರಿ ವಿದ್ಯಾ ಮಂದಿರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ:ದೇವೇಂದ್ರಪ್ಪ ಹಡಪದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಶಾಲೆಯ ಮುಖ್ಯ ಗುರುಗಳಾದ ಜಯಶ್ರೀ, ದಾನಮ್ಮ ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಾಸ್ತಾವಿಕ ನುಡಿಗಳಾಡಿದರು ಮಲ್ಲಮ್ಮ ಪೂಜಾರಿ ನಿರೂಪಿಸಿದರು,ಶಿಲ್ಪಾ ಸೂಗೂರು ಸ್ವಾಗತಿಸಿದರು, ಶಿವಲೀಲಾ ಮತ್ತು ಸೌಮ್ಯ ಪ್ರಾರ್ಥಿಸಿದರು,ಬಸವರಾಜೇಶ್ವರಿ ವಂದಿಸಿದರು.
