ತನ್ನ ತಾನರಿದೊಡೆ ತಾನೇ ದೇವರು – ಡಾ. ಅರವಿಂದ ಜತ್ತಿ

ತನ್ನ ತಾನರಿದೊಡೆ ತಾನೇ ದೇವರು – ಡಾ. ಅರವಿಂದ ಜತ್ತಿ

ತನ್ನ ತಾನರಿದೊಡೆ ತಾನೇ ದೇವರು – ಡಾ. ಅರವಿಂದ ಜತ್ತಿ

ಅನುಭವ ಮಂಟಪದಲ್ಲಿ ಬಸವ ಸಮಿತಿ ಆಯೋಜಿಸಿದ್ದ “ಅರಿವಿನ ಮನೆ” ಕಾರ್ಯಕ್ರಮ

ಕಲಬುರಗಿ: “ನಿನ್ನನ್ನು ನೀ ಅರಿ” ಎಂದು ಸಾಕ್ರೆಟಸ್ ಹೇಳಿದಂತೆ, ಬಸವಾದಿ ಶರಣರು ತನ್ನನ್ನು ತಾನು ಹೇಗೆ ಅರಿಯಬೇಕು ಎಂಬ ದಾರಿ ತೋರಿಸಿದರು. ವಿವೇಕಾನಂದರು ಮತ್ತು ದ.ರಾ. ಬೇಂದ್ರೆಯವರೂ ಆತ್ಮಜ್ಞಾನವೇ ಮನುಷ್ಯನ ನಿಜವಾದ ಶಕ್ತಿ ಎಂದು ಹೇಳಿದ್ದಾರೆ. ಮನುಷ್ಯ ತನು, ಮನ, ಧನಗಳ ಸಮ್ಮಿಲನವಾಗಿದ್ದು, ಘನ ಮತ್ತು ಶಿವಸ್ವರೂಪನೇ ವ್ಯಕ್ತಿಯ ನಿಜವಾದ ಅಸ್ತಿತ್ವ” ಎಂದು ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಡಾ. ಅರವಿಂದ ಜತ್ತಿ ಹೇಳಿದರು.

ಭಾನುವಾರ ಅನುಭವ ಮಂಟಪದಲ್ಲಿ ಬಸವ ಸಮಿತಿ ಆಯೋಜಿಸಿದ್ದ ಬಸವಾದಿ ಶರಣರ ಸ್ಮರಣಾರ್ಥ “ಅರಿವಿನ ಮನೆ” 870ನೇ ದತ್ತಿ ಕಾರ್ಯಕ್ರಮದಲ್ಲಿ “ನಾನು ಯಾರು?” ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, “ಐನ್‌ಸ್ಟೀನ್ ಪ್ರಕಾರ ಮಾನವನಲ್ಲಿ ಜೀವಂತ ಚೈತನ್ಯವಿದೆ. ತಾನು ಯಾರು ಎಂದು ಅರಿಯುವ ಪ್ರಯತ್ನವೇ ದೇವರನ್ನು ಹುಡುಕುವ ಪ್ರಾರಂಭ. ಅಂಗವು ಲಿಂಗವಾಗಬೇಕು, ಅಂದಾಗ ನಿಜವಾದ ನಾನು ಲಿಂಗಸ್ವರೂಪನೆಂಬ ಅರಿವು ದೊರೆಯುತ್ತದೆ. ನಾನು ದೇವರ ಸ್ವರೂಪನೇ ಎಂಬ ಭಾವನೆ ಶರಣರ ತತ್ವದ ಸಾರ” ಎಂದು ಹೇಳಿದರು.

“ಬಸವಣ್ಣನವರು ‘ಎನ್ನನ್ನು ಇಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನ’ ಎಂದು ದೇವರೊಂದಿಗೆ ಸಂವಾದ ನಡೆಸುತ್ತಾರೆ. ‘ನಾನು’ ಎಂಬ ಅಹಂಕಾರವಲ್ಲ, ದೇವಸ್ವರೂಪನೆಂಬ ಭಾವನೆ ಬೆಳೆಯಬೇಕು. ಪ್ರಪಂಚದಲ್ಲಿ ನಾನು ಅತಿ ಚಿಕ್ಕ ಘಟಕವಾದರೂ ದೇವರ ಸಾಕ್ಷಾತ್ಕಾರ ಮನಸ್ಸಿನಲ್ಲಿ ಮೂಡಬೇಕು” ಎಂದು ಅವರು ಮಾರ್ಮಿಕವಾಗಿ ನುಡಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸ್ವತಿ ಖೂಬಾ, ಉಪಾಧ್ಯಕ್ಷೆ ಡಾ. ಜಯಶ್ರೀ ದಂಡೆ, ಕಾರ್ಯದರ್ಶಿ ಡಾ. ಅನಂದ ಸಿದ್ದಾಮಣಿ, ಡಾ. ಕೆ.ಎಸ್. ವಾಲಿ, ಶರಣಗೌಡ ಪಾಟೀಲ್ ಪಾಳಾ, ಬಂಡಪ್ಪ ಕೇಸುರ್, ಅಶೋಕ ಗುರೂಜಿ, ಉದ್ದಂಡಯ್ಯ ಮುಂತಾದವರು ಉಪಸ್ಥಿತರಿದ್ದರು.