ಆರೋಗ್ಯ ಎಂದರೆ ದೈಹಿಕವಾಗಿ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯವು ಮುಖ್ಯ ಡಾ ರಾಕೇಶ್ ಪೋಲಿಸ್ ಪಾಟೀಲ್

ಆರೋಗ್ಯ ಎಂದರೆ ದೈಹಿಕವಾಗಿ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯವು ಮುಖ್ಯ  ಡಾ ರಾಕೇಶ್ ಪೋಲಿಸ್ ಪಾಟೀಲ್

ಆರೋಗ್ಯ ಎಂದರೆ ದೈಹಿಕವಾಗಿ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯವು ಮುಖ್ಯ ಡಾ ರಾಕೇಶ್ ಪೋಲಿಸ್ ಪಾಟೀಲ್ 

ಕಲಬುರ್ಗಿ ಅ10: ಆರೋಗ್ಯ ಎಂದರೆ, ದೈಹಿಕವಾಗಿ ಆರೋಗ್ಯವಾಗಿರುವುದು ಮಾತ್ರವಲ್ಲ, ಮಾನಸಿಕ ಆರೋಗ್ಯವೂ ಮುಖ್ಯ ಎಂದು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮನೋ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ ರಾಕೇಶ್ ಪೋಲಿಸ್ ಪಾಟೀಲ್ ಹೇಳಿದರು.

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸೀರಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಮನೋವಿಜ್ಞಾನ ವಿಭಾಗದ ವತಿಯಿಂದ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಇಂದಿನ ಕಾಲದಲ್ಲಿ ಹೆಚ್ಚು ಮಂದಿ ದೈಹಿಕ ಆರೋಗ್ಯದ ಕಡೆಗೆ ಗಮನ ಕೊಡುತ್ತಿದ್ದು, ಮಾನಸಿಕ ಆರೋಗ್ಯದ ಮಹತ್ವವನ್ನು ಅಲಕ್ಷ್ಯ ಮಾಡುತ್ತಿದ್ದಾರೆ. ನಿಜವಾದ ಆರೋಗ್ಯ ಎಂದರೆ ದೇಹದ ಶಕ್ತಿಯಷ್ಟೇ ಅಲ್ಲ, ಮನಸ್ಸಿನ ಶಾಂತಿ ಹಾಗೂ ಸಮಾಜದೊಡನೆ ಹೊಂದಾಣಿಕೆಯುಳ್ಳ ಜೀವನವೂ ಆಗಿದೆ ಎಂದು ಹೇಳಿದರು.

ಆಧುನಿಕ ಯುಗದಲ್ಲಿ ತಂತ್ರಜ್ಞಾನ, ಸ್ಪರ್ಧೆ, ಕೆಲಸದ ಒತ್ತಡ, ಹಾಗೂ ಜೀವನದ ಬೇಡಿಕೆಗಳು ನಿರಂತರವಾಗಿ ಹೆಚ್ಚಾಗುತ್ತವೆ. ಈ ವೇಗಕ್ಕೆ ಹೊಂದಿಕೊಳ್ಳಲು ವ್ಯಕ್ತಿ ಶಾರೀರಿಕವಾಗಿ ಚುರುಕಾಗಿದ್ದರೂ, ಮನಸ್ಸು ನಿರಂತರವಾಗಿ ಚಿಂತೆ, ಆತಂಕ, ಒತ್ತಡ ಹಾಗೂ ಭಯಗಳಿಂದ ತುಂಬಿಕೊಂಡಿರುತ್ತದೆ.

ಮಾನಸಿಕ ಆರೋಗ್ಯದ ಕೊರತೆಯಿಂದ ಇಂದು ಹಲವರಲ್ಲಿ ಖಿನ್ನತೆ, ಆತ್ಮವಿಶ್ವಾಸದ ಕೊರತೆ, ಕೋಪ, ನಿರಾಶೆ, ಒಂಟಿತನದಂತಹ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳು ಕೇವಲ ವ್ಯಕ್ತಿಯಲ್ಲದೇ, ಅವರ ಕುಟುಂಬ ಮತ್ತು ಸಮಾಜದ ಮೇಲೆಯೂ ಪರಿಣಾಮ ಬೀರುತ್ತವೆ. ಆದ್ದರಿಂದ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಜೀವನದ ಅತ್ಯಂತ ಅಗತ್ಯವಾದ ಅಂಶವಾಗಿದೆ ಎಂದು ಹೇಳಿದರು 

ಇನ್ನೋರ್ವ ಅತಿಥಿಗಳಾದ ವೈಜ್ಞಾನಿಕ ಪ್ರಾದೇಶಿಕ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ಮನೋವಿಜ್ಞಾನ ಅಧಿಕಾರಿ ಡಾ ದೀಲಿಪ್ ಕುಮಾರ್ ಎಸ್ ನವಲೆ ಮಾತನಾಡಿ ಸ್ವಾಸ್ಥ್ಯ ಸಮಾಜಕ್ಕೆ ಮಾನಸಿಕ ಆರೋಗ್ಯ ಮತ್ತು ಸಮಾಜ ಮನೋವಿಜ್ಞಾನದ ಅವಶ್ಯಕತೆ ಬಗ್ಗೆ ಮಾತನಾಡಿದರು

ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥರಾದ ಛಾಯಾ ಪಾಟೀಲ್ ಮಾತನಾಡಿ ಇಂದು ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸುತ್ತೇವೆ. ಈ ದಿನವನ್ನು ವಿಶ್ವದಾದ್ಯಂತ ಮಾನಸಿಕ ಆರೋಗ್ಯದ ಮಹತ್ವವನ್ನು ಅರಿತುಕೊಳ್ಳಲು, ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಮನೋವೈಕಲ್ಯ ಹೊಂದಿರುವವರ ಕಡೆ ಸಹಾನುಭೂತಿ ಬೆಳೆಸಲು ಆಚರಿಸಲಾಗುತ್ತದೆ.ಈ ವರ್ಷದ (2025) ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ವಿಷಯ ವಸ್ತು

ಆಪತ್ತುಗಳು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಮಾನಸಿಕ ಆರೋಗ್ಯದ ಸೇವೆಗಳ ಲಭ್ಯತೆ ಎಂಬುದಾಗಿದೆ ಎಂದು ತಿಳಿಸಿದರು

ಪ್ರಾಚಾರ್ಯರಾದ ಡಾ ರಾಜೇಂದ್ರ ಕೊಂಡಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪ ಪ್ರಾಚಾರ್ಯರಾದ ಡಾ ವೀಣಾ ಹೊನಗುಂಟಿಕರ್ ಉಪಸ್ಥಿತರಿದ್ದರು 

ವಿದ್ಯಾರ್ಥಿನಿ ಅಮ್ಮೀರಾ ವಿಶ್ವ ಮಾನಸಿಕ ಆರೋಗ್ಯ ದಿನದ ಮಹತ್ವ ಕುರಿತು ಮಾತನಾಡಿದರು 

 ಮನೋವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಸುಮಿತ್ರಾ ಹಾಗೂ ವಿದ್ಯಾಶ್ರೀ ಪ್ರಾರ್ಥಿಸಿದರು, ಸೌಂದರ್ಯ ಸ್ವಾಗತಿಸಿದರು, ಜುವೇರಿಯಾ ವಂದಿಸಿದರು, ಕೋಮಲ್ ಚೌದ್ರಿ ನಿರೂಪಿಸಿದರು