ನಕಲಿ ಗೊಬ್ಬರ ಮಾರಾಟ ವಿರುದ್ದ ಕ್ರಮಕ್ಕೆ ರೈತ ಸಂಘ ಸಿ.ಎಂ.ಗೆ ಮನವಿ

ನಕಲಿ ಗೊಬ್ಬರ ಮಾರಾಟ ವಿರುದ್ದ ಕ್ರಮಕ್ಕೆ ರೈತ ಸಂಘ ಸಿ.ಎಂ.ಗೆ ಮನವಿ
ಕಲಬುರಗಿ:ಯುರಿಯಾ ಹಾಗೂ ಕಿಸಾನ ಜ್ಯೋತಿ ಹೆಸರಿನಲ್ಲಿ ನಕಲಿ ಗೊಬ್ಬರ ಮಾರಾಟ ಮತ್ತು ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಶ್ರೀ ರೇವಣಸಿದ್ದೇಶ್ವರ ಆಗ್ರೋ ಏಜೆನ್ಸಿ, ಸ್ಟೆಷನ್ ಘಾಣಗಾಪುರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಹಾಗೂ ಅತಿವೃಷ್ಠಿಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ಧನವನ್ನು ಬಿಡುಗಡೆ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ನಾಗೇಂದ್ರಪ್ಪ ತಾಂಬೆ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ರೈತ ಸಂಘದ ಮನವಿಯಲ್ಲಿ, ಕಳೆದ ಹಲವು ವರ್ಷಗಳಿಂದ ಆ ಏಜೆನ್ಸಿ ನಕಲಿ ಗೊಬ್ಬರ ತಯಾರಿಸಿ, ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದು, ರೈತರ ಬೆಳೆಗಳು ಹಾನಿಗೊಳಗಾಗುತ್ತಿವೆ ಎಂದು ಆರೋಪಿಸಲಾಗಿದೆ. ಕೇವಲ ಕೃಷಿಯನ್ನೇ ಅವಲಂಬಿಸಿರುವ ರೈತರು ನಷ್ಟದಿಂದ ತತ್ತರಿಸಿ ಬೇರೆ ನಗರಗಳಿಗೆ ಕೆಲಸಕ್ಕಾಗಿ ವಲಸೆ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದ್ದಾರೆ. ಆದ್ದರಿಂದ ನಕಲಿ ಗೊಬ್ಬರ ಮಾರಾಟವನ್ನು ತಕ್ಷಣ ನಿಲ್ಲಿಸಿ, ಸಂಬಂಧಿತ ಅಂಗಡಿಯನ್ನು ಮುಚ್ಚಿ ಪರವಾನಗಿ ರದ್ದುಪಡಿಸಬೇಕು ಎಂದು ಒತ್ತಾಯಿಸಲಾಯಿತು.
ಅದೇ ರೀತಿ, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಕಳೆದ ಎರಡು ತಿಂಗಳಿಂದ ಅತಿವೃಷ್ಠಿ ಸಂಭವಿಸಿ, ತೊಗರಿ, ಸೊಯಾಬಿನ್, ಹೆಸರು, ಉದ್ದು, ಹತ್ತಿ, ಎಳ್ಳು ಸೇರಿದಂತೆ ಎಲ್ಲಾ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿವೆ. ರೈತರು ಎಕರೆಗೊಂದು 24 ಸಾವಿರ ರೂ. ವೆಚ್ಚ ಮಾಡಿ ಬಿತ್ತನೆ ಮಾಡಿದರೂ ಬೆಳೆ ಹಾನಿಯಿಂದ ಕಂಗಾಲಾಗಿದ್ದಾರೆ. ಆದ್ದರಿಂದ ಪ್ರತಿ ಎಕರೆಗೆ ಕನಿಷ್ಠ 25,000 ರೂ. ಪರಿಹಾರ ಧನ ಹಾಗೂ ಬೆಳೆ ವಿಮೆ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡುವಂತೆ ಮನವಿಯಲ್ಲಿ ಕೇಳಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಉಮಾಪತಿ ಪಾಟೀಲ, ಮಂಜುಳಾ ಭಜಂತ್ರಿ, ರಮೇಶ್ ರಾಗಿ, ಸಿದ್ದಾರೂಢ ಪಾಟೀಲ, ಕರೆಪ್ಪ ಯುವಮೋರ್ಜೆ, ಸಿದ್ದು ವೇದಶಟ್ಟಿ, ಶರಣಗೌಡ ಪಾಟೀಲ, ರವಿಕುಮಾರ ಹಾಗೂ ವಿಜಯಕುಮಾರ ಹತ್ತರಕಿ ಉಪಸ್ಥಿತರಿದ್ದರು.