ಹೃದಯವಂತ ಹೃದಯವಂತ ಡಾ.ಗಣಪತಿ ಶಿಂದೆ

ಹೃದಯವಂತ ಹೃದಯವಂತ ಡಾ.ಗಣಪತಿ ಶಿಂದೆ

ಹೃದಯವಂತ ಡಾ.ಗಣಪತಿ ಶಿಂದೆ

ಡಾ. ಗಣಪತಿ ಶಿಂದೆಯವರು ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯ ಗ್ರಂಥಪಾಲಕರಾಗಿ ಸಾಮಾಜಿಕ, ಶೈಕ್ಷಣಿಕ, ಕ್ರೀಯಾಶೀಲ ಚಿಂತಕರಾಗಿ, ಸಂಘಟಕರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದು ಅಲ್ಲದೆ ಸದ್ದು ಗದ್ದಲವಿಲ್ಲದೆ ಕೆಲಸವನ್ನು ಮಾಡುತ್ತಿದ್ದಾರೆ. ಬುದ್ದ -ಬಸವ- ಅಂಬೇಡ್ಕರರವರ ವಿಚಾರ ಧಾರೆಗಳಿಂದ ಪ್ರಭಾವಿತರಾಗಿ ಉತ್ತಮ ಕಾರ್ಯ ಮಾಡುತ್ತಾ ಸಮಾಜದಲ್ಲಿರುವ ಬಡವರಿಗೆ ಆರ್ಥಿಕ ನೆರವು ನೀಡುತ್ತಾ ಶೈಕ್ಷಣಿಕ,ಸಾಹಿತಿಕ ಮತ್ತು ಸಾಂಸ್ಕೃತಿಕವಾಗಿ ಸಾಧನೆ ಮಾಡುತ್ತಿದ್ದಾರೆ. ಗ್ರಂಥಾಲಯ ಕ್ಷೇತ್ರದಲ್ಲಿ ಸಂಶೋಧನೆಗೈದು ಸಾಧನೆ ಮಾಡಿದ ಅಪರೂಪದ ವಿದ್ವಾಂಸರು ಹಾಗೂ ಶ್ರೇಷ್ಠ ಗ್ರಂಥಪಾಲಕರು.ಸರಳ, ಸಜ್ಜನಿಕೆಯ ವ್ಯಕ್ತಿತ್ವಕ್ಕೆ ಹೆಸರಾದವರು ಡಾ.ಶಿಂದೆ ಸದಾ ಬಡವರ, ದಿನ ದಲಿತರ ಹಾಗೂ ಸ್ನೇಹಿತರ ಸೇವೆಗೆ ಸದಾ ಸಿದ್ಧರು.

ಡಾ. ಗಣಪತಿ ಶಿಂದೆಯವರು ಬೀದರ ಜಿಲ್ಲೆಯ ಹುಲಸೂರು ತಾಲೂಕಿನ ತೊಗಲೂರು ಗ್ರಾಮದಲ್ಲಿ ೦೧-೦೬-೧೯೫೯ ರಂದು ಜನಿಸಿ, ಪ್ರಾಥಮಿಕ ಶಿಕ್ಷಣವನ್ನು ಜನಿಸಿದ ಗ್ರಾಮದಲ್ಲಿ ಮುಗಿಸಿ ಪ್ರೌಢ ಶಿಕ್ಷಣವನ್ನು ಗೊರ್ಟಾದಲ್ಲಿ, ಪಿಯುಸಿ ಹಾಗೂ ಪದವಿಯನ್ನು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಭಾಲ್ಕಿಯ ಚನ್ನಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರ ವಿಷಯದಲ್ಲಿ ಎಂ.ಎ. ಪದವಿಯನ್ನು ಪಡೆದು ಮುಂದೆ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದಿಂದ ಎಂ.ಎಲ್.ಐ.ಸಿ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಪಾಸಾದರು. ೧೯೯೬ರಲ್ಲಿ ಎಲ್.ಎಲ್.ಬಿ. ಪದವಿಯನ್ನು ಪಡೆದು, Use of Information ಎಂಬ ವಿಷಯದ ಪ್ರಬಂಧವನ್ನು ಸಾದರ ಪಡಿಸಿ ಎಮ್. ಫಿಲ್ ಪದವಿ ಪಡೆದಿದ್ದಾರೆ. ೨೦೦೮ರಲ್ಲಿ ಪ್ರೊ. ಬಿ.ಎಸ್. ಮಹೇಶ್ವರಪ್ಪನವರ ಮಾರ್ಗದರ್ಶನದಲ್ಲಿ ಪಿ. ಎಚ್ಡಿ ಪದವಿಯನ್ನು ಪಡೆದು 

೧೯೮೫ರಲ್ಲಿ ಡಾ. ಅಂಬೇಡ್ಕರ ಪದವಿ ಮಹಾವಿದ್ಯಾಲಯ ಕಲಬುರಗಿಯಲ್ಲಿ ಗ್ರಂಥಪಾಲಕರಾಗಿ ಸೇವೆಗೆ ಸೇರಿ ಸುಮಾರು ೧೦ ವರ್ಷಗಳ ಸೇವೆ ಸಲ್ಲಿಸಿ ವೃತ್ತಿಯಲ್ಲಿ ಅಪಾರ ವಿದ್ಯಾರ್ಥಿ ಬಳಗವನ್ನು ಹೊಂದಿದರು. ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಗ್ರಂಥಪಾಲಕ ರಾಗಿ,ನೂರಾರು ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ೧೯೯೫ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯ ಉಪ ಗ್ರಂಥಪಾಲಕರಾಗಿ ಸೇವೆಗೆ ಸೇರಿ ಮುಂದೆ ಅದೇ ವಿಶ್ವವಿದ್ಯಾಲಯದಲ್ಲಿ ಮುಖ್ಯ ಗ್ರಂಥಪಾಲಕರಾಗಿ ಈ ಭಾಗದ ವಿದ್ಯಾರ್ಥಿಗಳಲ್ಲಿ ಪುಸ್ತಕ ಸಂಸ್ಕೃತಿಯನ್ನು ಹೆಚ್ಚಿಸಿದ್ದಲ್ಲದೆ ಈ ಭಾಗದ ಲೇಖಕರ ಪುಸ್ತಕಗಳನ್ನು ಖರೀದಿ ಮಾಡುವುದರ ಮೂಲಕ ಪ್ರೋತ್ಸಾಹಿಸಿದರು. ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಗೆ ಹೆಚ್ಚು ಒತ್ತು ಕೊಟ್ಟು ಕಲ್ಯಾಣ ಕರ್ನಾಟಕ ಭಾಗದ ಒಬ್ಬ ಶ್ರೇಷ್ಠ ಗ್ರಂಥಪಾಲಕರಾಗಿ ಇಂದಿಗೂ ಗುರುತಿಸಿಕೊಂಡಿದ್ದಾರೆ.

ಉತ್ತಮ ಸಂಘಟಕರಾಗಿರುವ ಡಾ. ಶಿoದೆ ಅವರು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಗ್ರಂಥಪಾಲಕರ ವೃತ್ತಿ ನಿರತರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ, ಗುಲಬರ್ಗಾ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗದ ನೌಕರರ ಸಂಘದ ನಾಲ್ಕು ಬಾರಿ ಅಧ್ಯಕ್ಷರಾಗಿ ರಾಜ್ಯ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳ ವಿಚಾರ ಸಂಕೀರಣದ ಸಂಚಾಲಕರಾಗಿ ಮತ್ತು ಹಲವಾರು ಕಾರ್ಯಗಾರಗಳನ್ನು ಕೈಗೊಂಡು ಯುವ ಗ್ರಂಥಪಾಲಕರಿಗೆ ದಾರಿ ದೀಪವಾಗಿದ್ದಲ್ಲದೆ, ಗ್ರಂಥಾಲಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಅನೇಕ ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ನೀಡುವುದರ ಮೂಲಕ ಗ್ರಂಥಾಲಯ ವೃತ್ತಿಗೆ ಹೆಚ್ಚಿನ ಪ್ರೋತ್ಸಾಹ ದೊರಕುವಂತೆ ಮಾಡಿದರು. ಹೀಗೆ ಡಾ. ಶಿಂದೆಯವರು ಸಮಾಜಮುಖಿ ಹಾಗೂ ಗ್ರಂಥಾಲಯ ಸೇವೆಯನ್ನು ಪರಿಗಣಿಸಿ ಬುದ್ಧವಚನ, ಧಾರ್ಮಿಕ ಅಧ್ಯಯನ, ಕೇಂದ್ರ ಟ್ರಸ್ಟ್, ಧಮ್ಮಂಕುರ ಬುದ್ದ ವಿಹಾರ ಮೌಂಟ್, ರೇಕುಳಗಿ ವತಿಯಿಂದ ಅನಾಥ ಪಿಂಡಕ ಪ್ರಶಸ್ತಿ, ಹಿರೇಮಠ ಸಂಸ್ಥಾನ ಭಾಲ್ಕಿ ಇವರು ಶ್ರಾವಣ ಮಾಸದ ಪ್ರಯುಕ್ತ ಷಟಸ್ಥಲ ದರ್ಶನ ಪ್ರಶಸ್ತಿ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಪ್ರಸಾರಂಗ ನೀಡುವ ರಾಜ್ಯೋತ್ಸವ ಪ್ರಶಸ್ತಿ ಉರಿಲಿಂಗ ಪೆದ್ದಿಮಠ ಬೇಲೂರು ಬಸವಕಲ್ಯಾಣ ಗೌರವ ಸನ್ಮಾನ ಸೇರಿದಂತೆ, ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ ಅವರ ಅನುಯಾಯಿಯಾಗಿ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಡಾ. ಶರಣಬಸಪ್ಪ ವಡ್ಡನಕೇರಿ