ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ ಭರವಸೆ ನೀಡಿದ ಸಿಎಂ

ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ ಭರವಸೆ ನೀಡಿದ ಸಿಎಂ

ಬಸವ ಧರ್ಮವೇ ವಿಶ್ವಧರ್ಮ — ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಭಿಪ್ರಾಯ

ಬೆಂಗಳೂರು: “ಬಸವ ಧರ್ಮವು ವಿಶ್ವದ ಎಲ್ಲಾ ಜೀವಿಗಳಿಗೂ ಅವಶ್ಯಕವಾದ ಮಾನವೀಯ ಮೌಲ್ಯಗಳ ಧರ್ಮವಾಗಿದೆ” ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ನಡೆದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಅನೇಕ ರಾಜ್ಯಗಳಿಂದ ಬಸವ ಅಭಿಮಾನಿಗಳು ಹಾಗೂ ಸ್ವಾಮೀಜಿಗಳು ಭಾಗವಹಿಸಿದ್ದರು.

12ನೇ ಶತಮಾನದಲ್ಲಿ ಬಸವಣ್ಣನವರು ಸಮಾಜದ ಶೋಷಿತ ವರ್ಗಗಳಿಗೆ ಧ್ವನಿಯಾಗಿ, “ಕಾಯಕವೇ ಕೈಲಾಸ” ಎಂಬ ಸಂದೇಶದ ಮೂಲಕ ಶ್ರಮಜೀವಿಗಳ ಮಹತ್ವವನ್ನು ಸಾರಿದರು ಎಂದು ನಾಗಮೋಹನ್ ದಾಸ್ ಹೇಳಿದರು.

ಭಾಲ್ಕಿ ಶ್ರೀಗಳು ಹಾಗೂ ಎಸ್.ಎಂ. ಜಾಮದಾರ ಅವರು ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿಗೆ ರಾಜ್ಯದ ಎಲ್ಲ ಜಿಲ್ಲಾ ಅಧ್ಯಕ್ಷರು, ಬಸವ ಸಂಘಟನೆಗಳು ಮತ್ತು ವಿರಕ್ತ ಮಠಾಧಿಪತಿಗಳಿಗೆ ಅಭಿನಂದನೆ ಸಲ್ಲಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ, “ಬಸವಾದಿ ಶರಣರ ವಿಚಾರಗಳು ಶಾಶ್ವತವಾಗಿದ್ದು, ಸಮಾನತೆಯ ಸಮಾಜ ನಿರ್ಮಾಣದಲ್ಲಿ ಮಾರ್ಗದರ್ಶಕ” ಎಂದರು.

ಮುಖ್ಯಮಂತ್ರಿ ಮುಂದುವರಿಸಿ, ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವ ಭರವಸೆ ನೀಡಿ, ಬೆಂಗಳೂರು ಮೆಟ್ರೋಗೆ ಬಸವಣ್ಣನವರ ಹೆಸರಿಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು. 

ಸಿದ್ಧಗಂಗಾ ಮಠದ ಶ್ರೀಗಳು ಮಾತನಾಡಿ, “ಮಾನವೀಯ ಸಂವಿಧಾನವನ್ನು ನೀಡಿದ ಬಸವಣ್ಣನವರ ತತ್ವಗಳನ್ನು ಮರೆಯಬಾರದು” ಎಂದರು.

ಸಾಣೇಹಳ್ಳಿಯ ಪಂಡಿತರಾಧ್ಯ ಸ್ವಾಮೀಜಿ ಅವರು, “ಬಸವಣ್ಣನವರು ಲೋಕಕಲ್ಯಾಣಕ್ಕಾಗಿ ಅನುಭವ ಮಂಟಪ ನಿರ್ಮಿಸಿ ಸಮಾನತೆಯ ಸಂದೇಶ ನೀಡಿದರು” ಎಂದರು.

ಭಾಲ್ಕಿ ಶ್ರೀಗಳು ಮುಂದುವರಿಸಿ, “ಮಠಾಧಿಪತಿಗಳು ಮಠದ ಸೀಮೆಯಿಂದ ಹೊರಬಂದು ಬಸವ ತತ್ವ ಸಾರಿದರೆ ಅದು ನಿಜವಾದ ಧರ್ಮಪ್ರಚಾರ” ಎಂದರು.

ಪಂಚಮಸಾಲಿ ಪೀಠದ ಜಗದ್ಗುರು ಅವರು, ಮಾತನಾಡಿ “ಬೆಂಗಳೂರು ಮೆಟ್ರೋ ಮತ್ತು ಕಲಬುರಗಿ ವಿಶ್ವವಿದ್ಯಾಲಯಕ್ಕೆ ಬಸವಣ್ಣನವರ ಹೆಸರಿಡಬೇಕು, ಕೇಂದ್ರ ವಿಶ್ವವಿದ್ಯಾಲಯಕ್ಕೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರಿಡಬೇಕು” ಎಂದು ಮನವಿ ಮಾಡಿದರು.

ಸಚಿವ ಎಂ.ಬಿ. ಪಾಟೀಲ ಅವರು, ಮಾತನಾಡಿ“ಬಸವ ಧರ್ಮವು ವಿಶ್ವಧರ್ಮವಾಗಬೇಕು, ಲಿಂಗಾಯತ ಧರ್ಮವು ಪ್ರತ್ಯೇಕ ಗುರುತಿನ ಧರ್ಮವಾಗಬೇಕು” ಎಂದು ಅಭಿಪ್ರಾಯಪಟ್ಟರು.

ಮುರುಘೇಂದ್ರ ಸ್ವಾಮಿಜಿ ಅವರು ಐದು ನಿರ್ಣಯಗಳನ್ನು ಮಂಡಿಸಿದರು.

ಕಾರ್ಯಕ್ರಮವನ್ನು ನಾಡಿನಾದ್ಯಂತ ಆಗಮಿಸಿದ ವಿವಿಧ ಮಠಾಧಿಪತಿಗಳು, ಹಾಗೂ ಸಚಿವ ಶರಣಪ್ರಕಾಶ ಪಾಟೀಲ, ಲಕ್ಷ್ಮಿ ಹೆಬ್ಬಾಳಕರ್, ಕೆ ಎಚ್ ಮುನಿಯಪ್ಪ, ಆಳಂದ ಶಾಸಕರಾದ ಬಿ ಆರ್, ಪಾಟೀಲ ಮಾಜಿ ಶಾಸಕ ರಾಜಶೇಖರ ಪಾಟೀಲ ಹುಮನಾಬಾದ,  ಐ.ಎ.ಎಸ್. ಅಧಿಕಾರಿ ಸೋಮಶೇಖರ,ಬಾಬಾಸಾಹೇಬ್ ಪಾಟೀಲ,ಬಿ.ಎಸ್. ಪುಟ್ಟರಾಜ,ಅಶೋಕ ಖೇಣಿ,ಗೊ.ರು. ಚನ್ನಬಸಪ್ಪ,ನಾಗರಾಜ್ ಮೂರ್ತಿ, ವೇದಿಕೆ ಮೇಲೆ ಇದ್ದರು 

ಅರುಣಕುಮಾರ ಪಾಟೀಲ ಕೊಡಲಹಂಗರಗಾ, ರಾಜಕುಮಾರ ಕೋಟಿ, ಶರಣಗೌಡ ಪಾಟೀಲ ಪಾಳಾ, ಸತೀಶ ಸಜ್ಜನ್, ಸಿದ್ದು ವಾಲಿ,ಅಶೋಕಕುಮಾರ ಭಾವಿಕಟ್ಟಿ, ಸಾಹಿತಿ ನಾಗರತ್ನ ಭಾವಿಕಟ್ಟಿ,ಸೇರಿದಂತೆ ಅನೇಕ ಶರಣರು ಮತ್ತು ಗಣ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಭಾಗವಹಿಸಿ ಲಿಂಗಾಯಿತರ ಒಗ್ಗಟ್ಟು  ಪ್ರದರ್ಶಿಸಿದರು,

ವಿಶೇಷ ವರದಿಗಾರ

.