ಆಂಗ್ಲ ಮಾಧ್ಯಮ ಶಾಲಾ ನಿರ್ಧಾರಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿಳಿಮಲೆ ವಿರೋಧ

ಆಂಗ್ಲ ಮಾಧ್ಯಮ ಶಾಲಾ ನಿರ್ಧಾರಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿಳಿಮಲೆ ವಿರೋಧ
ರಾಜ್ಯ ಸರ್ಕಾರದ ಆಂಗ್ಲ ಮಾಧ್ಯಮ ಶಾಲಾ ತೀರ್ಮಾನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವಿರೋಧ
ತಾಯ್ನುಡಿಯ ಬಲವರ್ಧನೆಗೆ ಪ್ರತ್ಯೇಕ ಪ್ರಾಧಿಕಾರ ರಚನೆಗೂ ಆಗ್ರಹ
ಬೆಂಗಳೂರು:ರಾಜ್ಯ ಸರ್ಕಾರವು ರಾಜ್ಯದ 4,134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲು ತೆಗೆದುಕೊಂಡಿರುವ ತೀರ್ಮಾನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆಯಲಾಗಿದೆ.
ಡಾ. ಬಿಳಿಮಲೆ ಅವರು ತಮ್ಮ ಪತ್ರದಲ್ಲಿ, ಸಂವಹನಕ್ಕಾಗಿ ಇತರ ಭಾಷೆಗಳನ್ನು ಕಲಿಯುವುದು ತಪ್ಪಲ್ಲವಾದರೂ, ಅದರಿಂದ ತಾಯ್ನುಡಿಯ ಹಿನ್ನಡೆ ನಡೆಯಬಾರದು ಎಂದು ಸ್ಪಷ್ಟಪಡಿಸಿದ್ದಾರೆ. “ತಾಯ್ನುಡಿಯ ಅನನ್ಯತೆ, ಸಾಂಸ್ಕೃತಿಕ ಗುರುತು, ಸ್ವಾಭಿಮಾನ ಮತ್ತು ಸೃಜನಶೀಲತೆ ಇತ್ಯಾದಿಗಳನ್ನು ಮಕ್ಕಳಲ್ಲಿ ಬಾಲ್ಯದಿಂದಲೇ ಬೆಳೆಸುವುದು ಅತ್ಯಗತ್ಯ” ಎಂದು ಅವರು ತಿಳಿಸಿದ್ದಾರೆ.
ಶಿಕ್ಷಣ ಹಕ್ಕು ಕಾಯ್ದೆ ತಿದ್ದುಪಡಿ ನೆನಪು:
ಸರ್ಕಾರವು 2013-18ರಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ 29 (ಎಫ್) ವಿಧಿಗೆ ತಿದ್ದುಪಡಿ ಮಾಡಲು ಮಸೂದೆ ಒಪ್ಪಿಸಿಕೊಂಡು ರಾಷ್ಟ್ರಪತಿಗೆ ಕಳುಹಿಸಿದ್ದು, ಕನಿಷ್ಠ 8ನೇ ತರಗತಿವರೆಗೆ ತಾಯ್ನುಡಿಯೇ ಶಿಕ್ಷಣ ಮಾಧ್ಯಮವಾಗಬೇಕೆಂದು ಬದ್ಧತೆಯನ್ನು ವ್ಯಕ್ತಪಡಿಸಿತ್ತು. ಇತ್ತೀಚೆಗಿನ ಮುಖ್ಯಮಂತ್ರಿ ನವದೆಹಲಿಯ ಭೇಟಿಯಲ್ಲಿ ಈ ವಿಷಯದ ಅನುಪಾಲನೆ ನಡೆದಿದೆ ಎಂಬುದನ್ನು ಉಲ್ಲೇಖಿಸಿರುವ ಅವರು, ಈಗಿಗಿನ ಸರ್ಕಾರದ ತೀರ್ಮಾನ ಈ ಆಶಯಕ್ಕೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.
ಕನ್ನಡ ಶಾಲೆಗಳ ಬಲವರ್ಧನೆಗೆ ಕ್ರಮಗಳು ಅಗತ್ಯ:
ಕನ್ನಡ ಅಭಿವೃದ್ಧಿ ಪ್ರಾಧಿಕಾರ 2017ರಲ್ಲಿ ಸಲ್ಲಿಸಿದ್ದ ಸರ್ಕಾರಿ ಶಾಲೆಗಳ ಸಬಲೀಕರಣ ವರದಿಯನ್ನು ತಕ್ಷಣ ಜಾರಿಗೆ ತರುವಂತೆ ಆಗ್ರಹಿಸಿರುವ ಬಿಳಿಮಲೆ, “ಕನ್ನಡ ಕಲಿಕಾ ಅಧಿನಿಯಮ 2015 ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು” ಎಂದು ಹೇಳಿದ್ದಾರೆ. ಅಲ್ಲದೆ, ಕನ್ನಡ ಶಾಲೆಗಳ ಸಬಲೀಕರಣಕ್ಕಾಗಿ ಪ್ರತ್ಯೇಕ ಪ್ರಾಧಿಕಾರ ರಚಿಸುವುದರ ಅಗತ್ಯವಿದೆ ಎಂದಿದ್ದಾರೆ.
ದ್ವಿಭಾಷಾ ನೀತಿಯ ಪರವಾಗಿ ಪ್ರಾಧಿಕಾರದ ದೃಷ್ಟಿಕೋನ:
ರಾಜ್ಯದಲ್ಲಿ ದ್ವಿಭಾಷಾ ನೀತಿಯ ಅವಶ್ಯಕತೆ ಇಂದು ಹೆಚ್ಚುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ಡಾ. ಬಿಳಿಮಲೆ, “ಪ್ರಾಧಿಕಾರವು ಶಿಕ್ಷಣ ನೀತಿ ತಯಾರಿಕಾ ಪ್ರಕ್ರಿಯೆಯಲ್ಲಿಯೂ ಈ ಸಲಹೆಯನ್ನು ನೀಡಿದ್ದು, ಜುಲೈ ಅಂತ್ಯದೊಳಗೆ ವರದಿ ನಿರೀಕ್ಷಿಸಲಾಗಿದೆ” ಎಂದು ಹೇಳಿದರು. ದ್ವಿಭಾಷಾ ನೀತಿ ಅನುಷ್ಠಾನಕ್ಕೆ ಸಾರ್ವಜನಿಕ ಬೆಂಬಲ ಹೆಚ್ಚಿಸುವ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಗಳು ಶಕ್ತಿಯಾಗಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಕನ್ನಡ ಪರ ಹೋರಾಟಗಾರರಿಗೆ ಬೆಂಬಲ:
“ಕನ್ನಡ ಪರ ಹೋರಾಟಗಾರರು ಹಾಗೂ ಸಂಘಟನೆಗಳೊಂದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಾ ಕೈಜೋಡಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿರುವ ಬಿಳಿಮಲೆ, “ತಾಯ್ನುಡಿಯ ಹಿತದೃಷ್ಟಿಯಿಂದ ಸರ್ಕಾರವು ಮರುಪರಿಶೀಲನೆ ನಡೆಸಿ ಜನರ ಭಾವನೆಗಳನ್ನು ಗೌರವಿಸಬೇಕು” ಎಂದು ಆಗ್ರಹಿಸಿದ್ದಾರೆ.
-