“ಧರ್ಮದ ಹೆಸರಿನಲ್ಲಿ ಮಾನವೀಯತೆ ಹರಾಜಾಗಬಾರದು”

“ಧರ್ಮದ ಹೆಸರಿನಲ್ಲಿ ಮಾನವೀಯತೆ ಹರಾಜಾಗಬಾರದು”
ಮಹಮ್ಮದ್ ವರ್ಸಸ್ ಮಹದೇವ್ – ಮಾನವೀಯತೆ ಕಳೆದುಕೊಳ್ಳುತ್ತಿರುವ ಜಗತ್ತು
— ಶರಣಗೌಡ ಪಾಟೀಲ ಪಾಳಾ. ಸಂಪಾದಕೀಯ ಲೇಖನ
“ಐ ಲವ್ ಮಹಮ್ಮದ್” — “ಐ ಲವ್ ಮಹದೇವ್” ಅಥವಾ “ಜೈ ಶ್ರೀರಾಮ್” ಎಂಬ ನಿನಾದಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಯ ವಿಷಯವಾಗಿವೆ. ಆದರೆ ಈ ಘೋಷಣೆಗಳು ಪ್ರೀತಿಯ ಪ್ರತೀಕವಾಗಬೇಕಾದರೆ, ಅದು ಕೆಲವರ ಕೈಯಲ್ಲಿ ದ್ವೇಷದ ಆಯುಧವಾಗಿ ಮಾರ್ಪಟ್ಟಿರುವುದು ದುಃಖದ ಸಂಗತಿ. ಕೆಲವರು ನೆಮ್ಮದಿ ಬಯಸುವುದಿಲ್ಲ, ಮತ್ತೊಬ್ಬರೂ ನೆಮ್ಮದಿಯಾಗಿರಬಾರದು ಎನ್ನುವ ಮನೋಭಾವದಲ್ಲಿ ಬದುಕುತ್ತಿದ್ದಾರೆ.
ಇದೀಗ ಜಗತ್ತಿನೆಲ್ಲೆಡೆ ಅಶಾಂತಿ, ಯುದ್ಧ, ಮತ್ತು ದ್ವೇಷದ ಬಿಸಿಗಾಳಿ ಬೀಸುತ್ತಿದೆ — ಉಕ್ರೇನ್‌ನಿಂದ ಗಾಜಾ ಪಟ್ಟಿಯವರೆಗೆ, ಆಫ್ರಿಕಾದ ಆಂತರಿಕ ಸಂಘರ್ಷಗಳಿಂದ ದಕ್ಷಿಣ ಅಮೆರಿಕದ ತೀವ್ರ ಹಿಂಸೆಯವರೆಗೆ ಎಲ್ಲೆಡೆ ಮಾನವತೆ ನರಳುತ್ತಿದೆ.
ಕೋವಿಡ್ ಮಹಾಮಾರಿಯ ಸಮಯದಲ್ಲಿ ನಾವು ಎಲ್ಲರೂ ಜೀವನದ ನಶ್ವರತೆಯನ್ನು ಅರಿತು ಸ್ವಲ್ಪ ಕ್ಷಣ ಪ್ರೀತಿ, ಸಹಾನುಭೂತಿ ಮತ್ತು ಮಾನವೀಯತೆಯ ಮೌಲ್ಯಗಳತ್ತ ಮುಖ ಮಾಡಿದ್ದೆವು. ಆದರೆ ಈಗ ಕೋವಿಡ್‌ನ ನಂತರದ ಜಗತ್ತು ಇನ್ನಷ್ಟು ಆಕ್ರಮಣಕಾರಿಯಾಗಿದೆ.
ಭಾರತದಲ್ಲಿಯೂ ಇದೇ ಚಿತ್ರಣ ಕಾಣಿಸುತ್ತಿದೆ. ಧಾರ್ಮಿಕ ಹೆಸರಿನಲ್ಲಿ “ಮಹಮ್ಮದ್ ವಿರುದ್ಧ ಮಹದೇವ್” ಎಂಬ ಘರ್ಷಣೆಯ ಕಿಡಿ ಹೊತ್ತಿಕೊಂಡಿದೆ. ಇದನ್ನು ಕೆಲ ಧರ್ಮಾಂಧರು, ಭಯೋತ್ಪಾದಕರು ಮತ್ತು ರಾಜಕೀಯ ಲಾಭಕ್ಕಾಗಿ ಬಯಸುವ ಶಕ್ತಿಗಳು ಉದ್ದೇಶಪೂರ್ವಕವಾಗಿ ಹಚ್ಚುತ್ತಿರುವುದು ಸ್ಪಷ್ಟವಾಗಿದೆ.
ಜಾಗತಿಕ ರಾಜಕೀಯದ ಪೈಪೋಟಿಯು ಈ ಸಂಘರ್ಷಕ್ಕೆ ಹೊಸ ಬಣ್ಣ ತುಂಬುತ್ತಿದೆ. ಅಮೆರಿಕಾ – ಭಾರತ ನಡುವಿನ ವಾಣಿಜ್ಯ ಮತ್ತು ರಾಜಕೀಯ ವ್ಯತ್ಯಾಸಗಳು, ಚೀನಾ – ರಷ್ಯಾ – ಭಾರತದ ಒಡನಾಟದಿಂದ ಅಮೆರಿಕಾದ ಅಸಮಾಧಾನ, ಟ್ರಂಪ್ ಅವರ ವೈಯಕ್ತಿಕ ವಿರೋಧ ಇತ್ಯಾದಿ ಅಂಶಗಳು ಹಿಂದಿನಗೆಯಿಂದಲೇ ತೀವ್ರ ಒತ್ತಡಕ್ಕೆ ಕಾರಣವಾಗಿವೆ. ಸಿಐಎಂಥ ಬಲಿಷ್ಠ ಬೇಹುಗಾರಿಕಾ ಸಂಸ್ಥೆಗಳು ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಅಶಾಂತಿ ಉಂಟುಮಾಡಲು ಪ್ರಯತ್ನಿಸುವುದು ಇತಿಹಾಸದಲ್ಲೇ ಹೊಸದಿಲ್ಲ. ಭಾರತದಲ್ಲಿಯೂ ಅಂತಹ ಪ್ರಯತ್ನಗಳು ನಡೆಯುತ್ತಿರುವ ಶಂಕೆ ಉಂಟಾಗಿದೆ.
ಇಂತಹ ಸಂದರ್ಭದಲ್ಲಿ ದೇಶದ ರಾಜಕೀಯ ಪಕ್ಷಗಳು, ಸರ್ಕಾರ, ಮಾಧ್ಯಮಗಳು ಮತ್ತು ನಾಗರಿಕ ಸಮಾಜ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಆದರೆ ಕೆಲವು ರಾಜಕೀಯ ನಾಯಕರು ಧಾರ್ಮಿಕ ಧ್ರುವೀಕರಣದ ಮೂಲಕ ತಾತ್ಕಾಲಿಕ ಲಾಭ ಪಡೆಯುವ ಯತ್ನದಲ್ಲಿ ನಿರತರಾಗಿದ್ದಾರೆ.
ಒಂದೆಡೆ ಯೋಗಿ ಆದಿತ್ಯನಾಥ್, ಹಿಮಂತ ಬಿಸ್ವಾ ಶರ್ಮಾ ಅವರ ಅತಿರೇಕ ನಿಲುವು, ಮತ್ತೊಂದೆಡೆ ಮಮತಾ ಬ್ಯಾನರ್ಜಿ ಮತ್ತು ಸಿದ್ದರಾಮಯ್ಯ ಅವರ ಅತಿಯಾದ ತುಷ್ಟೀಕರಣದ ರಾಜಕೀಯ — ಎರಡೂ ರೀತಿಯ ಧೋರಣೆಗಳು ದೇಶದ ಶಾಂತಿ, ಸೌಹಾರ್ದತೆಗೆ ಅಪಾಯ ತಂದೊಡ್ಡುತ್ತಿವೆ.
ಧಾರ್ಮಿಕ ಘರ್ಷಣೆ ಎಂಬುದು ಕೇವಲ ಹಿಂದೂ-ಮುಸ್ಲಿಂ ವಿಷಯವಲ್ಲ. ಅದು ಮುಂದೆ ಆರ್ಯ-ದ್ರಾವಿಡ, ಸಂವಿಧಾನ-ಭಗವದ್ಗೀತೆ, ಮೀಸಲಾತಿ ಪರ-ವಿರೋಧ ಹೀಗೆ ಅನೇಕ ಮುಖಗಳಲ್ಲಿ ಸ್ಫೋಟಿಸಬಹುದು. ಈ ದಿಕ್ಕಿನಲ್ಲಿ ದೇಶ ಸಾಗಿದರೆ, ಅದರ ಪರಿಣಾಮ ನಮ್ಮ ಮುಂದಿನ ಪೀಳಿಗೆಯ ಭವಿಷ್ಯವನ್ನು ಕತ್ತಲೆಯೊಳಗೆ ತಳ್ಳಬಹುದು.
ಅದರ ಕಾರಣಕ್ಕೆ ಸಾಮಾನ್ಯ ನಾಗರಿಕರಾಗಿ ನಾವು ಎಚ್ಚರಿಕೆಯಿಂದ ಇರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಅಸಹನೆ, ದ್ವೇಷ ಅಥವಾ ಪ್ರಚೋದನಾತ್ಮಕ ಮಾತುಗಳ ಬದಲಿಗೆ ಮಾನವೀಯತೆ, ಶಾಂತಿ, ಸಹಕಾರದ ಚಿಂತನೆಗಳನ್ನು ಹಂಚಬೇಕು.
ಮಹಮ್ಮದ್ ಮತ್ತು ಮಹದೇವ್ — ಇಬ್ಬರೂ ನಮ್ಮವರೇ.
ಅವರಲ್ಲಿ ಭಿನ್ನತೆ ಕಾಣುವವರು
ಧರ್ಮ ವಿರೋಧಿಗಳು,
ದೇಶ ವಿರೋಧಿಗಳು,
ಮಾನವ ವಿರೋಧಿಗಳು,
ಶಾಂತಿಯ ವಿರೋಧಿಗಳು.
ನಾವು ವಿಶ್ವಗುರು ಬಸವಣ್ಣನವರ ಮಾತು ಸ್ಮರಿಸಬೇಕು —
“ಸಕಲ ಜೀವಾತ್ಮಗಳಿಗೆ ಲೇಸನೇ ಬಯಸಬೆಕು.”
ಅದು ನಿಜವಾದ ಧರ್ಮ, ನಿಜವಾದ ರಾಷ್ಟ್ರಭಕ್ತಿ.