“ಸೈಬರ್ ಕ್ರೈಂಗೆ ವಿಶೇಷ ಒತ್ತು: 380 ಪಿಎಸ್‌ಐ ಬುನಾದಿ ತರಬೇತಿ ಆರಂಭ”ಎಡಿಜಿಪಿ ಅಲೋಕ್ ಕುಮಾರ್

“ಸೈಬರ್ ಕ್ರೈಂಗೆ ವಿಶೇಷ ಒತ್ತು: 380 ಪಿಎಸ್‌ಐ ಬುನಾದಿ ತರಬೇತಿ ಆರಂಭ”ಎಡಿಜಿಪಿ ಅಲೋಕ್ ಕುಮಾರ್
“ಸೈಬರ್ ಕ್ರೈಂಗೆ ವಿಶೇಷ ಒತ್ತು: 380 ಪಿಎಸ್‌ಐ ಬುನಾದಿ ತರಬೇತಿ ಆರಂಭ”ಎಡಿಜಿಪಿ ಅಲೋಕ್ ಕುಮಾರ್

ಕಲಬುರಗಿ: ಸೈಬರ್ ಅಪರಾಧಗಳ ಎದುರಿಸಲು ಪಿಎಸ್‌ಐಗಳ ಭದ್ರ ತರಬೇತಿ – ಎಡಿಜಿಪಿ ಅಲೋಕ್ ಕುಮಾರ್

ಕಲಬುರಗಿ: “ಇಂದಿನ ತಂತ್ರಜ್ಞಾನ ಯುಗದಲ್ಲಿ ಸೈಬರ್ ಅಪರಾಧಗಳು ದಿನೇ ದಿನೇ ಹೆಚ್ಚುತ್ತಿವೆ. ಇವುಗಳನ್ನು ತಡೆದು ಜನರಿಗೆ ನ್ಯಾಯ ಕಲ್ಪಿಸುವುದು ಪೊಲೀಸ್ ಇಲಾಖೆಯ ಪ್ರಮುಖ ಜವಾಬ್ದಾರಿ. ಆದ್ದರಿಂದಲೇ ಹೊಸದಾಗಿ ನೇಮಕಗೊಂಡಿರುವ ಪಿಎಸ್‌ಐ ಹಾಗೂ ಪೇದೆಗಳಿಗೆ ದೈಹಿಕ–ಮಾನಸಿಕ ದೃಢತೆ ಜತೆಗೆ ಸೈಬರ್ ಕ್ರೈಂ ಕುರಿತ ವಿಶೇಷ ತರಬೇತಿ ನೀಡಲಾಗುತ್ತಿದೆ” ಎಂದು ಕರ್ನಾಟಕ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ತರಬೇತಿ ವಿಭಾಗ) ಅಲೋಕ್ ಕುಮಾರ್ ಹೇಳಿದರು.

ಬುಧವಾರ (ನ.19) ನಗರದ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ 380 ಪಿಎಸ್‌ಐಗಳ ಬುನಾದಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ತರಬೇತಿ ಪಡೆಯುವುದೇ ಮುಖ್ಯವಲ್ಲ; ಕರ್ತವ್ಯಕ್ಕೆ ಸೇರಿದ ನಂತರದ ನಡವಳಿಕೆ, ಮಾನವೀಯತೆ ಮತ್ತು ಕಾನೂನು ಪಾಲನೆಯೇ ಪೊಲೀಸ್ ಅಧಿಕಾರಿಯ ಮೌಲ್ಯವನ್ನು ನಿರ್ಧರಿಸುತ್ತದೆ” ಎಂದರು.

ಅವರು ಮುಂದೆ ಮಾತನಾಡಿ, ಸೈಬರ್ ಕ್ರೈಂ, ಸೈಬರ್ ಸೆಕ್ಯೂರಿಟಿ, ಫೋರೆನಿಕ್ಸ್ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ತಂತ್ರಜ್ಞಾನ ಬಳಕೆ ಕುರಿತು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ತಜ್ಞರಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ದರೋಡೆ, ಮನೆಗಳ್ಳತನ ಸೇರಿದಂತೆ ಪರಂಪರಾಗತ ಅಪರಾಧಗಳನ್ನು ಪತ್ತೆ ಹಚ್ಚುವುದು ಸುಲಭವಾದರೂ ಸೈಬರ್ ಪ್ರಕರಣಗಳಲ್ಲಿ ‘ಗೋಲ್ಡನ್ ಅವರ್‌’ ಅತ್ಯಂತ ಮುಖ್ಯವಾಗಿ ಪರಿಣಮಿಸುತ್ತದೆ. ತಕ್ಷಣ ಕ್ರಮ ಕೈಗೊಂಡರೆ ಪ್ರಕರಣ ಬಗೆಹರಿಸುವಲ್ಲಿ ಯಶಸ್ಸು ಸಾಧ್ಯವೆಂದು ಹೇಳಿದರು.

ತರಬೇತಿ ಬಳಿಕ 5 ವರ್ಷಗಳ ನಡವಳಿಕೆ ಮೇಲ್ವಿಚಾರಣೆ

ಪಠ್ಯಕ್ರಮದಲ್ಲಿ ಪರಿಷ್ಕರಣೆ ಮಾಡಿ ಮುಖ್ಯ ಅಂಶಗಳನ್ನೊಳಗೊಳ್ಳಲಾಗಿದೆ. ತರಬೇತಿ ಮುಗಿಸಿ ಕರ್ತವ್ಯಕ್ಕೆ ಹಾಜರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ 5 ವರ್ಷಗಳ ಕಾಲ ಸೇವಾ ನಡವಳಿಕೆ ಮೇಲ್ವಿಚಾರಣೆ ಇರಲಿದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬಲಪಡಿಸಲು ಇದು ಸಹಕಾರಿ ಎಂದರು. “ಎಲ್ಲವನ್ನೂ ಕಾನೂನು ಮೂಲಕ ಮಾತ್ರ ನಿಭಾಯಿಸಲು ಸಾಧ್ಯವಿಲ್ಲ; ಮಾನವೀಯ ಮೌಲ್ಯ ಮತ್ತು ಸೇವಾ ಮನೋಭಾವವೇ ಪೊಲೀಸ್‌ರನ್ನು ಜನರ ಹತ್ತಿರಕ್ಕೆ ಕೊಂಡೊಯ್ಯುತ್ತದೆ” ಎಂದು ಎಡಿಜಿಪಿ ಮನದಾಳದ ಸಂದೇಶ ನೀಡಿದರು.

ರಾಜ್ಯದಲ್ಲಿ ಮೊದಲ ಬಾರಿಗೆ ಮಧ್ಯರಾತ್ರಿ ಫೈರಿಂಗ್ ತರಬೇತಿ

“ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಂದೇ ಅವಧಿಯಲ್ಲಿ 809 ಪಿಎಸ್‌ಐಗಳಿಗೆ ತರಬೇತಿ ನೀಡಲಾಗುತ್ತಿದೆ. ಸೇವೆಯಲ್ಲಿ ಅನಿರೀಕ್ಷಿತ ಸಂದರ್ಭಗಳಿಗೆ ಸಿದ್ಧರಾಗಲು ಮಧ್ಯರಾತ್ರಿ ಯಾವುದೇ ಮುನ್ಸೂಚನೆ ಇಲ್ಲದೆ ಪ್ರಶಿಕ್ಷಣಾರ್ಥಿಗಳನ್ನು ಎಬ್ಬಿಸಿ ಫೈರಿಂಗ್ ತರಬೇತಿ ನೀಡಲಾಗುತ್ತಿದೆ” ಎಂದು ಅಲೋಕ್ ಕುಮಾರ್ ಮಾಹಿತಿ ನೀಡಿದರು.

ಭ್ರಷ್ಟಾಚಾರ ನಿರ್ಮೂಲನೆಗೆ ಸಂಕಲ್ಪ

ಈಗೂ ಮೊದಲು ನಡೆದ ಬುನಾದಿ ತರಬೇತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸೈನಿಕ ಹಾಗೂ ಪೇದೆ ಹುದ್ದೆ ನಿಭಾಯಿಸಿ ಈಗ ಪೀಸ್‌ಐ ಆಗಿ ನೇಮಕಗೊಂಡ ಅಧಿಕಾರಿಯೊಬ್ಬರು, “ಭ್ರಷ್ಟಾಚಾರ ಹಾಗೂ ಲಂಚಗುಳಿತನದಲ್ಲಿಂದ ಇಲಾಖೆಯನ್ನು ಮುಕ್ತಗೊಳಿಸಲು ಸತ್ಯನಿಷ್ಠೆಯಿಂದ ಸೇವೆ ಮಾಡಲು ಪಿಎಸ್‌ಐ ಆಗಿದ್ದೇನೆ” ಎಂದು ಭಾವನಾತ್ಮಕವಾಗಿ ಪ್ರತಿಜ್ಞೆ ಮಾಡಿದರು.