ಜಾತಿ ಸಮೀಕ್ಷೆಯಲ್ಲಿ ಒಂಬತ್ತನೇ ಕಲಂ ಎಚ್ಚರದಿಂದ ನಮೂದಿಸಲು ಡಾ. ಪ್ರಣವಾನಂದ ಶ್ರೀಗಳು ಕರೆ

ಜಾತಿ ಸಮೀಕ್ಷೆಯಲ್ಲಿ ಒಂಬತ್ತನೇ ಕಲಂ ಎಚ್ಚರದಿಂದ ನಮೂದಿಸಲು ಡಾ. ಪ್ರಣವಾನಂದ  ಶ್ರೀಗಳು ಕರೆ

ಜಾತಿ ಸಮೀಕ್ಷೆಯಲ್ಲಿ ಒಂಬತ್ತನೇ ಕಲಂ ಎಚ್ಚರದಿಂದ ನಮೂದಿಸಲು ಡಾ. ಪ್ರಣವಾನಂದ ಶ್ರೀಗಳು ಕರೆ

ಕಲಬುರಗಿ : ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಆರಂಭಿಸಲಿರುವ ಜಾತಿ ಉಪಜಾತಿಗಳ ಸಮೀಕ್ಷೆಯ ಸಂದರ್ಭದಲ್ಲಿ ರಾಜ್ಯದ ಈಡಿಗ, ಬಿಲ್ಲವ ಸೇರಿದಂತೆ 26 ಪಂಗಡಗಳು ಒಂಬತ್ತನೇ ಕಲಂನಲ್ಲಿ ತಮ್ಮ ಜಾತಿ ಹಾಗೂ ಹತ್ತನೇ ಕಲಂ ನಲ್ಲಿ ಈಡಿಗ ಎಂಬುದಾಗಿ ನಮೂದಿಸಬೇಕು ಎಂದು ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕು ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಶ್ರೀಗಳು ಕರೆ ನೀಡಿದ್ದಾರೆ.

   ಜಾತಿ, ಉಪಜಾತಿಗಳ ಪಟ್ಟಿ ನಮೂದಿಸುವ ಕುರಿತಾಗಿ ಸಮುದಾಯದ ಕೆಲ ನಾಯಕರು ಮತ್ತು ಸ್ವಾಮೀಜಿಗಳು 26 ಪಂಗಡಗಳನ್ನು ಗೊಂದಲ ಮತ್ತು ಅನುಮಾನಕ್ಕೆ ಎಡೆ ಮಾಡಿರುವುದರಿಂದ ಈ ಸ್ಪಷ್ಟೀಕರಣ ನೀಡಿರುವುದಾಗಿ ತಿಳಿಸಿದ ಸ್ವಾಮೀಜಿಯವರು ಜಾತಿ ಸಮೀಕ್ಷೆಯ ಸಂದರ್ಭದಲ್ಲಿ 9ನೇ ಕಲಂನಲ್ಲಿ ತಮ್ಮ ತಮ್ಮ ಹುಟ್ಟಿದ ಜಾತಿ ಉದಾಹರಣೆಗೆ ಬಿಲ್ಲವ, ನಾಮಧಾರಿ, ಧೀವರ, ನಾಯಕ, ಕಲಾಲ್, ಈರುಳಿಗ ಎಂಬಿತ್ಯಾದಿ ಹುಟ್ಟಿದ ಜಾತಿಯನ್ನು ನಮೂದಿಸಬೇಕು ಹಾಗೂ ಹತ್ತನೇ ಕಲಂನಲ್ಲಿ ಈಡಿಗ ಎಂಬುದಾಗಿ ನಮೂದಿಸಬೇಕು. ಧರ್ಮ ಕಲಂನಲ್ಲಿ ಹಿಂದೂ ಎಂಬುದಾಗಿಯೂ ನಮೂದಿಸುವುದರ ಮೂಲಕ ಈ ಬಾರಿ ಜಾತಿ ಗಣತಿಯಲ್ಲಿ ರಾಜ್ಯದಲ್ಲಿ ಸ್ಪಷ್ಟವಾಗಿ ಈಡಿಗ ಹಾಗೂ 26 ಪಂಗಡಗಳ ನಿಖರ ಅಂಕಿ ಅಂಶ ತಿಳಿಯಲು ಸಾಧ್ಯವಾಗುತ್ತದೆ. ಆ ಮೂಲಕ ಈಡಿಗ, ಬಿಲ್ಲವ ನಾಮ ಸಾರಿ ಸೇರಿದಂತೆ 26 ಪಂಗಡಗಳ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಿಂದ ಸರಕಾರದಿಂದ ಸವಲತ್ತುಗಳನ್ನು ಪಡೆಯಲು ಅನುಕೂಲವಾಗುತ್ತದೆ. ಈ ಕುರಿತಾಗಿ ಈಗಾಗಲೇ ಕರಾವಳಿಯ ಬಿಲ್ಲವ ಸಂಘಟನೆಗಳು ತಮ್ಮ ಹುಟ್ಟಿದ ಜಾತಿ ಬಿಲ್ಲವ ಎಂಬುದಾಗಿ ಒಂಬತ್ತನೇ ಕಲಂ ನಲ್ಲಿ ಬರೆಯಲು ನಿರ್ಧರಿಸಿರುವುದು ಸ್ವಾಗತಾರ್ಹವಾಗಿದೆ. ಯಾವುದೇ ಕಾರಣಕ್ಕೂ ಜಾತಿಯ ಹೆಸರಿನ ಮುಂದೆ ಸುವರ್ಣ, ಕರ್ಕೇರಾ, ಅಮೀನ್ ಬಂಗೇರ,ಕೋಟ್ಯಾನ್ ಮುಂತಾದ ಬರಿಗಳನ್ನು ಸೂಚಿಸಬಾರದು ಎಂಬುದಾಗಿ ಮನವಿ ಮಾಡುತ್ತೇನೆ. ಹಾಗೂ ಉತ್ತರ ಕನ್ನಡ, ಶಿವಮೊಗ್ಗ ಭಾಗದವರು ಹಾಗೂ ಇತರೆ ಕಡೆಗಳ ಸಮುದಾಯದ ಜನರು ನಾಮಧಾರಿ, ಧೀವರ, ನಾಯಕ, ಕಲಾಲ್, ಭಂಡಾರಿ ಮುಂತಾದ ಜಾತಿಗಳನ್ನು ಉಲ್ಲೇಖಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯದ ಗೆಜೆಟ್ ಪ್ರಕಟಣೆಯಲ್ಲಿ ಕೂಡ ಈಡಿಗ ಸೇರಿದಂತೆ 26 ಉಪಪಂಗಡಗಳಾಗಿದ್ದು 9ನೇ ಕಲಂನಲ್ಲಿ ಆ ಉಪಜಾತಿಗಳ ಹೆಸರನ್ನು ನಮೂದಿಸಿದರೆ ಯಾವುದೇ ಪ್ರಮಾದವಿಲ್ಲ . ಸಾಮಾಜಿಕ ಶೈಕ್ಷಣಿಕ ಆರ್ಥಿಕವಾಗಿ ಸಮುದಾಯಗಳನ್ನು ಗುರುತಿಸಲು ಒಟ್ಟು 60 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಬಹಳ ಎಚ್ಚರಿಕೆಯಿಂದ ಮಾಹಿತಿಯನ್ನು ತುಂಬಬೇಕಾಗಿದೆ. ಹಾಗಾದರೆ ಮಾತ್ರ ಹಿಂದುಳಿದ ವರ್ಗದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಈ 26 ಪಂಗಡಗಳಿಗೂ ಅನ್ವಯಿಸುವಂತೆ ರೂಪುರೇಷೆ ಮಾಡಲು ಹಾಗೂ ರಾಜ್ಯದಲ್ಲಿ ನಿಖರವಾದ ಅಂಕಿ ಅಂಶಗಳನ್ನು ಕ್ರೋಢಿಕರಿಸಲು ಅನುಕೂಲವಾಗುತ್ತದೆ ಎಂದು ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಇತ್ತೀಚೆಗೆ ಕೆಲ ವ್ಯಕ್ತಿಗಳು ಹಾಗೂ ಕೆಲ ಸ್ವಾಮೀಜಿಗಳು ಸಭೆ ಸೇರಿ ರಾಜ್ಯದ ಎಲ್ಲರೂ ಕೂಡ ಈಡಿಗ ಎಂದು ಬರೆಸಬೇಕೆಂದು ಫರ್ಮಾನು ಹೊರಡಿಸಿರುವುದು ಸಮಾಜವನ್ನು ತಪ್ಪು ದಾರಿಗೆ ಎಳೆಯುತ್ತದೆ ಹಾಗೂ ಉಪಜಾತಿಗಳಲ್ಲಿ ಹುಟ್ಟಿದ ಜನರಿಗೆ ನೋವನ್ನುಂಟು ಮಾಡಿದೆ. ಈ ರೀತಿಯಾಗಿ ಹೇಳಿಕೆ ನೀಡಲು ಇವರಿಗೆ ಯಾರು ಪರಮಾಧಿಕಾರ ನೀಡಿದ್ದಾರೆ ಎಂಬುದು ಪ್ರಶ್ನಾರ್ಹವಾಗಿದೆ. ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಶಿರೂರುನಲ್ಲಿ 9 ಮಂದಿ ಸಮುದಾಯದ ಜನರು ಮಣ್ಣು ಪಾಲಾದಾಗ ಚಕಾರವೆತ್ತದ ಈ ನಾಯಕರು ಹಾಗೂ ಸ್ವಾಮೀಜಿಗಳು ಏಕಾಏಕಿ ಜಾತಿ ಸಮೀಕ್ಷೆಯಲ್ಲಿ ಈ ರೀತಿ ಹೇಳಿಕೆ ನೀಡಿ ಸಮುದಾಯದ ಜನರನ್ನು ತಪ್ಪು ದಾರಿಗೆಳೆಯುತ್ತಿರುವುದು ಖೇದಕರ ಸಂಗತಿ. ಈ ಕುರಿತಾಗಿ ಸಮುದಾಯದ ಹಿರಿಯ ಮುಖಂಡರಾದ ಬಿ.ಕೆ ಹರಿಪ್ರಸಾದ್, ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ಕಾರ್ಕಳ, ಶ್ರೀನಾಥ್ ಗಂಗಾವತಿ, ವೆಂಕಟೇಶ ಕಡೇಚೂರ್, ಸತೀಶ್ ಗುತ್ತೇದಾರ,ನಿತಿನ್ ಗುತ್ತೇದಾರ್, ಮಹಾದೇವ ಗುತ್ತೇದಾರ್, ಬಾಲರಾಜ್ ಗುತ್ತೇದಾರ್, ಡಾ. ಸದಾನಂದ ಪೆರ್ಲ ರಾಜ್ಯ ಈಡಿಗ ಸಮಿತಿಯ ಅಧ್ಯಕ್ಷರಾದ ತಿಪ್ಪೇಸ್ವಾಮಿ ಮುಂತಾದವರ ಜೊತೆ ಸುಧೀರ್ಘ ಚರ್ಚೆ ಮಾಡಿದ ನಂತರ ಈ ಸ್ಪಷ್ಟನೆ ನೀಡಿರುವುದಾಗಿ ಡಾ. ಪ್ರಣವಾನಂದ ಶ್ರೀಗಳು ತಿಳಿಸಿದ್ದಾರೆ.