ಬೀದಿ ಅಲೆಯುತ್ತಿರುವ ಹೊಸ ಅಲೆಮಾರಿಗಳು: ಎಸ್ಕಾಂಗಳ ಬೇಜವಾಬ್ದಾರಿತನ

ಬೀದಿ ಅಲೆಯುತ್ತಿರುವ ಹೊಸ ಅಲೆಮಾರಿಗಳು: ಎಸ್ಕಾಂಗಳ ಬೇಜವಾಬ್ದಾರಿತನ
ಕರ್ನಾಟಕ ರಾಜ್ಯಾದ್ಯಂತ ಅಧ್ಯಾಪಕರು ಶಾಲೆ ಬಿಟ್ಟು ಬೀದಿ ಬೀದಿ ಅಲೆಯುತ್ತಿದ್ದಾರೆ. ಇವರನ್ನು ಹೊಸ ತಲೆಮಾರಿನ ಅಲೆಮಾರಿಗಳು ಎಂದು ಕರೆದರೆ ಅತಿಶಯೋಕ್ತಿ ಆಗಲಾರದು. ಎಸ್ಕಾಂಗಳ ಬೇಜವಾಬ್ದಾರಿ ಅಧಿಕಾರಿಗಳ ಆದೇಶದಂತೆ ಲೈನ್ ಮನ್/ಪವರ್ ಮನ್ ಗಳು ಕಾರ್ಯನಿರ್ವಹಿಸಿದ್ದರಿಂದಾಗಿ ಅಧ್ಯಾಪಕರು ಹೊಸ ಸಿಲಬಸ್ ಕಲಿಯ ಬೇಕಾಗಿದೆ. ಆರಂಭದಲ್ಲಿ ಸರಿಯಾಗಿ UHID ಸ್ಟಿಕ್ಕರ್ ಗಳನ್ನು ವಾಸದ ಮನೆಗೆ ಮಾತ್ರ ಅಂಟಿಸಿದ್ದ ಲೈನ್ ಮನ್ ಗಳು ತಮ್ಮ ಕಾರ್ಯವನ್ನು ಸರಿಯಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ ಆರ್ ಆರ್ ಸಂಖ್ಯೆಗೆ ಅನುಗುಣವಾಗಿ ಸ್ಟಿಕ್ಕರ್ ಗಳನ್ನು ಮುದ್ರಿಸಿದ್ದರ ಪರಿಣಾಮ ಉಳಿಕೆ ಸ್ಟಿಕ್ಕರ್ ಗಳನ್ನು ಅಂಟಿಸುವಂತೆ ಆದೇಶಿದರು. ಆಗ ಶುರುವಾಗಿದ್ದು ಹುಚ್ಚಾಟ. ಬೀದಿ ದೀಪದ ಮೀಟರ್ ಬೋರ್ಡ್, ಮಸೀದಿ, ಮಂದಿರ, ಚರ್ಚ್, ಶಾಲಾ ಕಾಲೇಜು, ಅಂಗನವಾಡಿ, ದರ್ಗಾ, ಅಂಗಡಿ, ಬ್ಯೂಟಿಪಾರ್ಲರ್, ಹೇರ್ ಸಲೂನ್, ಎಲ್ಲೆಲ್ಲಿ ವಿದ್ಯುತ್ ಪೂರೈಕೆ ಇದೆಯೋ ಅಲ್ಲೆಲ್ಲ ಸ್ಟಿಕ್ಕರ್ ಅಂಟಿಸಿದರು.
ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ಕುಂಟುತ್ತಾ ಸಾಗಲು, ನಿಗದಿತ ಸಮಯದಲ್ಲಿ ಮುಗಿಯದೆ ಇರಲು ಈ ಎಸ್ಕಾಂಗಳ ಕಡುಮೂರ್ಖ ಅಧಿಕಾರಿಗಳ ಆದೇಶ ಎಡೆ ಮಾಡಿಕೊಟ್ಟಿತು. ಅಧ್ಯಾಪಕರು ತಾವು ಟಿಸಿಹೆಚ್, ಬಿಎಡ್ ನಲ್ಲಿ ಕಲಿಯದ MR code, MR Day, Spot Polio, RR number, Reading date, MR ID ಮುಂತಾದ ತಮಗೆ ಹಾಗೂ ಶಾಲೆಗೆ ಉಪಯೋಗಕ್ಕೆ ಬಾರದ ಸಿಲಬಸ್ ಕಲಿಯುವಂತಾಯಿತು.
ಇದರಿಂದ ಸರ್ಕಾರಕ್ಕೆ ಅನಗತ್ಯವಾಗಿ ಕೆಟ್ಟ ಹೆಸರು ಬಂದಿದೆ. ಸಾರ್ವಜನಿಕರ ದೃಷ್ಟಿಯಿಂದ ಶಿಕ್ಷಕರು ಜೋಕರ್ ಗಳಾಗಿ ಗುರುತಿಸಿಕೊಂಡರು. ಅಲ್ಲದೇ ಬೀದಿ ನಾಯಿ ಕಡಿತಕ್ಕೆ ಒಳಗಾದರು. ಒತ್ತಡದಿಂದ ಹೃದಯಾಘಾತಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದರು. ಕೆಲವರ ಪ್ರಾಣಪಕ್ಷಿಯು ಹಾರಿತು. ಅವರ ಕುಟುಂಬವನ್ನು ಶೋಕಕ್ಕೆ ನೂಕಿದ ಕೀರ್ತಿ ಎಸ್ಕಾಂಗಳಿಗೆ ಸೇರುತ್ತದೆ. ಇಷ್ಟೆಲ್ಲಾ ಆದರೂ ಅಮಾನತು ಆದವರು ಶಿಕ್ಷಕರು ಮಾತ್ರ. ಈ ರೀತಿಯ ರಾದ್ಧಾಂತಕ್ಕೆ ಕಾರಣರಾದ ಎಸ್ಕಾಂಗಳ ಸಿಬ್ಬಂದಿಗೆ ಶಿಕ್ಷೆ ಏಕಿಲ್ಲ?
ಆರ್ ಆರ್ ನಂಬರ್ ಗಳ ಹುಡುಕಾಟಕ್ಕೆ ಎಸ್ಕಾಂಗಳ ಕಛೇರಿಗೆ ಹೋದರೆ ಬೇಕಾದ ಮಾಹಿತಿ ಮುದ್ರಣ ಮಾಡಿಕೊಡಲು ಅವರ ಬಳಿ A4 ಅಳತೆಯ ಕಾಗದವೇ ಇಲ್ಲ. ಶಿಕ್ಷಕರೇ ತಮ್ಮ ಸ್ವಂತ ಖರ್ಚಿನಲ್ಲಿ ಪೇಪರ್ ಖರೀದಿ ಮಾಡಿ ಅದನ್ನು ಕೊಟ್ಟು ಬೇಕಾದ ಮಾಹಿತಿ ಮುದ್ರಿಸಿ ಕೊಂಡು ಬಂದಿದ್ದಾರೆ.
ಈಗ ಸರ್ಕಾರ ಅನುದಾನಿತ ಹಾಗೂ ಸರ್ಕಾರಿ ಶಾಲೆಗಳಿಗೆ ರಜೆ ವಿಸ್ತರಿಸಿ ಆದೇಶ ಹೊರಡಿಸಿದೆ. ಖಾಸಗಿ ಶಾಲೆ ಮಕ್ಕಳು ಶಾಲೆಗೆ ಹೋದರೆ ನಮ್ಮ ಸರ್ಕಾರಿ ಶಾಲಾ ಮಕ್ಕಳು ಅವರು ನಮ್ಮಂತೆ ಬೀದಿಯಲ್ಲಿ. ಇದನ್ನು ನೋಡಿದ ಪೋಷಕರು ಮುಂದಿನ ವರ್ಷ ನಮ್ಮ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಾರೆಯೇ? ಶಿಕ್ಷಕರ ಹೆಚ್ಚುವರಿ ಸಮಸ್ಯೆ ಮತ್ತೆ ಮುಂದುವರೆಯುತ್ತದೆ. ಇಲ್ಲೂ ಕೂಡಾ ಶಿಕ್ಷಕರಿಗೆ ಶಿಕ್ಷೆ.
ಇಷ್ಟೆಲ್ಲಾ ಗೋಳು ಹೊಯ್ಕೊಂಡ ಎಸ್ಕಾಂಗಳಿಗೆ ಒಂದು ಧನ್ಯವಾದ ಹೇಳೋಣವೇ?
- ಚಂದ್ರಶೇಖರ ಕಗ್ಗಲ್ಲುಗೌಡ್ರು.